ಜಲಜೀವನ ಮಿಷನ್ ಯೋಜನೆ ನೀರು(Water) ಬಾರದ ನಳ
- ಹಳಿಯಾಳದಲ್ಲಿ ಜೆಜೆಎಂ ಕಾಮಗಾರಿ ಅಪೂರ್ಣ
- ಕಡತದಲ್ಲೇ ಉಳಿದಿದೆ ಕಾಳಿ ನೀರಾವರಿ ಯೋಜನೆ
- ಬೋರ್‌ವೆಲ್ ನಂಬಿದ ಯೋಜನೆ, ಬತ್ತಿದ ಅಂತರ್ಜಲ
ಹಳಿಯಾಳ: ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು (Water) ಎಂಬ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ (ಹರ್ ಘರ್‌ಜಲ) ಜಲಜೀವನ ಮಿಷನ್ ಯೋಜನೆ ಹಳಿಯಾಳ-ದಾಂಡೇಲಿ ಭಾಗದಲ್ಲಿ 2020-21ರಲ್ಲೇ ಆರಂಭಗೊಂಡಿದ್ದರು 2026ಕ್ಕೆ ಕಾಲಿಟ್ಟರೂ ಪೂರ್ಣಗೊಂಡಿಲ್ಲ.
ಪೂರ್ಣಗೊಂಡ ಕಡೆ ನಲ್ಲಿಯಲ್ಲಿ ಹನಿ ನೀರು ಬರುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಹಳಿಯಾಳ ಕಚೇರಿ ವ್ಯಾಪ್ತಿಯ ಹಳಿಯಾಳ ಮತ್ತು ದಾಂಡೇಲಿ ತಾಲೂಕಿನಲ್ಲಿ ಒಟ್ಟು 125 ಕಾಮಗಾರಿಗಳು ಮಂಜೂರಾಗಿದ್ದವು.
ಇಲಾಖೆ ದಾಖಲೆ ಪ್ರಕಾರ ಇದರಲ್ಲಿ 121 ಕಾಮಗಾರಿಗಳು ಪೂರ್ಣಗೊಂಡು ಹಳಿಯಾಳ ತಾಲೂಕಿನ ಮದ್ನಳ್ಳಿ, ದಾಂಡೇಲಿ ತಾಲೂಕಿನ ಕರಿಯಂಪಾಲಿ, ಆಮಗಾ ಮತ್ತು ಬೇಡರ ಶಿರಗೂರು ಗ್ರಾಮಗಳಲ್ಲಿ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ.
ಈಗಾಗಲೇ 24,000ಕ್ಕೂ ಹೆಚ್ಚು ಮನೆಗಳಿಗೆ ನಲ್ಲಿ ನೀರು ಒದಗಿಸುವ ಗುರಿಯೊಂದಿಗೆ 121 ಕಾಮಗಾರಿಗಳನ್ನು ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಇಲಾಖೆ ಹೇಳುತ್ತದೆ.
ಬೋರ್‌ವೆಲ್ ನಂಬಿದ ಯೋಜನೆ, ಬತ್ತಿದ ಅಂತರ್ಜಲ
ತಾಲೂಕಿನಲ್ಲಿ ಜೆಜೆಎಂಗೆ ನೀರಿನ ಮೂಲಕ್ಕಾಗಿ ಬೋರ್‌ವೆಲ್‌ಗಳನ್ನೇ ನೆಚ್ಚಿಕೊಳ್ಳಲಾಗಿದೆ.
ಆದರೆ, ಪ್ರತಿ ಬೇಸಿಗೆಗೆ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿಯುತ್ತಿದೆ. ಕೆರೆ, ಹಳ್ಳ-ಕೊಳ್ಳ, ಬಾಂದಾರಗಳು ಬೇಸಿಗೆ ಆರಂಭಕ್ಕೂ ಮುನ್ನವೇ ಬತ್ತಿ ಹೋಗುತ್ತಿವೆ. ಪರಿಣಾಮ ಬೋರ್‌ವೆಲ್‌ಗಳಲ್ಲೂ ನೀರು ದೊರಕುವುದು ಕಷ್ಟವಾಗಿದೆ.
ಗ್ರಾಮೀಣ ಭಾಗಕ್ಕಿಲ್ಲ ಕಾಳಿ ನೀರು
ಪಕ್ಕದ ದಾಂಡೇಲಿಯಲ್ಲಿ ತುಂಬಿ ಹರಿಯುವ ಕಾಳಿ ನದಿ ಇದ್ದರೂ ಹಳಿಯಾಳ ಗ್ರಾಮಾಂತರ ಭಾಗಕ್ಕೆ ಕಾಳಿ ನೀರು ಕುಡಿಯುವ ಭಾಗ್ಯ ಇಲ್ಲ. ದಾಂಡೇಲಿಯ ಕಾಳಿ ನದಿಯಿಂದ ಹಳಿಯಾಳದ ಕೆರೆ-ಬಾಂದಾರ ತುಂಬಿಸುವ ಕಾಳಿ ನೀರಾವರಿ ಯೋಜನೆ ಕಡತದಲ್ಲೇ ಉಳಿದಿದೆ. ಕಾಮಗಾರಿ ಪೂರ್ಣಗೊಳ್ಳದೆ ಇನ್ನೂ ನೀರು ಹಳಿಯಾಳದತ್ತ ಹರಿದಿಲ್ಲ.
ಕುಂಟುತ್ತ ಸಾಗಿದೆ ಬಹುಗ್ರಾಮ ನೀರು ಯೋಜನೆ
ಕಾಳಿ ನದಿಯಿಂದ ನೇರವಾಗಿ ಹಳ್ಳಿಗಳಿಗೆ ನೀರು ಕೊಡಬೇಕಿದ್ದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಯೂ ಕುಂಟುತ್ತ ಸಾಗಿದೆ. 3 ವರ್ಷದಲ್ಲಿ ಮುಗಿಯಬೇಕಿದ್ದ ಕಾಮಗಾರಿ 6 ವರ್ಷವಾದರೂ ಮುಗಿದಿಲ್ಲ.
ಇದರಿಂದ ಗ್ರಾಮೀಣ ಭಾಗಕ್ಕೆ ನೀರು ಯಾವಾಗ? ಎಂಬ ಪ್ರಶ್ನೆ ಹಾಗೇ ಉಳಿದಿದೆ.
ಸದ್ಯ ಜೋಗನಕೊಪ್ಪ, ಚಿಬ್ಬಲಗೇರಿ, ಅರಲವಾಡ, ಛತ್ರನಾಳ, ಮುರ್ಕವಾಡ, ಬಿ.ಕೆ. ಹಳ್ಳಿ ಹೀಗೆ ಹಲವು ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ ನೀರು ಸರಬರಾಜು ಮಾಡಲಾಗುತ್ತಿದೆ.
ಹವಗಿ, ಮಂಗಳವಾಡ, ಕೆರವಾಡ, ಕಳಸಾಪುರ, ಪಾಳಾ ಗ್ರಾಮಗಳಲ್ಲಿ ಮುಂದಿನ 8-10 ದಿನಗಳಲ್ಲಿ ಪ್ರಾಯೋಗಿಕ ನೀರು ಸರಬರಾಜು ಮಾಡಲಾಗುವುದು ಎಂದು ಇಲಾಖೆ ಹೇಳಿದೆ.
ಹನಿ ಹನಿ ಕೂಡಿದರೆ ಹಳ್ಳ ಎನ್ನುವಂತೆ, ಅಧಿಕಾರಿಗಳ ಇಚ್ಛಾಶಕ್ತಿ, ಗುತ್ತಿಗೆದಾರರ ಪ್ರಾಮಾಣಿಕತೆ, ಜನಪ್ರತಿನಿಧಿಗಳ ಕಣ್ಗಾವಲು ಒಂದಾದರೆ ಮಾತ್ರ ಪ್ರತಿ ಮನೆಯ ನಲ್ಲಿಯಲ್ಲಿ ಜೀವ ಜಲ ಹರಿಯಲು ಸಾಧ್ಯ.
ಇಲ್ಲವಾದರೆ 60 ಕೋಟಿ ರೂ.ಗಳು ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ.
ಕಾಳಿ ನೀರಾವರಿ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೂರ್ಣಗೊಂಡರೆ ಮಾತ್ರ ಶಾಶ್ವತ ಪರಿಹಾರ ದೊರಕಲಿದೆ. ಬೋರ್‌ವೆಲ್ ಆಧಾರಿತ ಜೆಜೆಎಂ ಬೇಸಿಗೆಯಲ್ಲಿ ಕೈಕೊಡುತ್ತದೆ ಎಂದು ಅಧಿಕಾರಿಗಳೇ ಖಾಸಗಿಯಾಗಿ ಒಪ್ಪಿಕೊಳ್ಳುತ್ತಾರೆ.
"
ಹಳಿಯಾಳ ತಾಲೂಕಿನಲ್ಲಿ ಜೆಜೆಎಂ ಕಾಮಗಾರಿ ಕಳಪೆಯಾಗಿದ್ದರೆ, ಲಿಖಿತ ದೂರು ನೀಡಿ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇವೆ. ತಪ್ಪು ಕಂಡುಬಂದರೆ ಗುತ್ತಿಗೆದಾರರಿಂದಲೇ ಮತ್ತೆ ಕಾಮಗಾರಿ ಮಾಡಿಸುತ್ತೇವೆ. ಅವರ ವಿರುದ್ಧ ಕ್ರಮವೂ ಆಗುತ್ತದೆ.
— ಸತ್ಯಪ್ಪ ಎಚ್. ಕಾರ್ಯಪಾಲ ಇಂಜಿನಿಯರ್, ಕಾರವಾರ ವಿಭಾಗ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ
ಬೇಸಿಗೆ ಬಂತೆಂದರೆ ಹಾಹಾಕಾರ
ಪ್ರತಿ ಬೇಸಿಗೆಯಲ್ಲೂ ಹಳಿಯಾಳ ತಾಲೂಕಿನ 70 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಹಾಕಾರ ಎದುರಾಗುತ್ತದೆ.
ಟ್ಯಾಂಕರ್ ನೀರೇ ಗತಿ. ಈ ವರ್ಷವಾದರೂ ಜೆಜೆಎಂ ನೀರು ಬರುತ್ತದೆ ಎಂಬ ಜನರ ನಂಬಿಕೆ ಹುಸಿಯಾಗಿದೆ. ಬೆರಳೆಣಿಕೆಯ ಗ್ರಾಮಗಳಿಗೆ ಮಾತ್ರ ನೀರಿನ ಲಭ್ಯತೆ ಇದ್ದು, ಬಹುತೇಕ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ.
ಮೂರು ಹಂತದಲ್ಲಿ ಅನುದಾನ
- 2020-21ರಲ್ಲಿ 13 ಕಾಮಗಾರಿ 4.75 ಕೋಟಿ ರೂ.
- 2021-22ರಲ್ಲಿ 25 ಕಾಮಗಾರಿ 7.84 ಕೋಟಿ ರೂ.
- 2022-23ರಲ್ಲಿ 87 ಕಾಮಗಾರಿ 46.74 ಕೋಟಿ ರೂ.
- ಕಾಮಗಾರಿ ಒಟ್ಟು ವೆಚ್ಚ: ಸುಮಾರು 60 ಕೋಟಿ ರೂ.