ಪಿ.ಎಸ್.ಕಾಮತ್ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಕಾರವಾರ: ಗಡಿ ಪ್ರದೇಶಗಳಾದ ಕಾರವಾರ, ಹಳಿಯಾಳ, ಸೂಪಾ(ಈಗಿನ ಜೊಯಿಡಾ) ಮತ್ತು ಖಾನಾಪುರ ತಾಲೂಕುಗಳು ಕರ್ನಾಟಕಕ್ಕೆ ಸೇರಬೇಕು ಎಂದು ಮಹಾಜನ ಸಮಿತಿಯ ಎದುರು ವಾದಿಸಿ ಯಶಸ್ವಿಯಾದವರು ದಿ. ಪಿ.ಎಸ್. ಕಾಮತ್ ಅವರಾಗಿದ್ದರು ಎಂದು ಸಾಹಿತಿ ರಂಜಾನ್ ದರ್ಗಾ ತಿಳಿಸಿದರು.
ಧಾರವಾಡದ ಕರ್ನಾಟಕ ಕುಲಪುರೋಹಿತ ಆಲೂರ್ ವೆಂಕಟರಾವ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ನಿಂದ ನಗರದ ದಿವೇಕರ್ ವಾಣಿಜ್ಯ ಕಾಲೇಜ್‌ನಲ್ಲಿ ಸೋಮವಾರ ಆಯೋಜಿಸಿದ್ದ `ಪಿ.ಎಸ್.ಕಾಮತ್' ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾಮತ್‌ರ ಮಾತೃಭಾಷೆ ಕೊಂಕಣಿಯಾದರೂ,ಅವರು ನೆಲದ ಭಾಷೆಯಾದ ಕನ್ನಡಕ್ಕಾಗಿ ಹೋರಾಡಿದರು. ಇಂಥ ಶ್ರೇಷ್ಠ ವ್ಯಕ್ತಿಗಳನ್ನು ನಾವಿಂದು ಮರೆತಿದ್ದೇವೆ. ಗಾಂಧೀಜಿ, ತಿಲಕರಂಥವರನ್ನು ಮರೆಯುತ್ತಿದ್ದೇವೆ. ಯುವಕರಿಗೆ ಹೊಸ ದಿಕ್ಕನ್ನು ತೋರಿಸಬೇಕು ಎನ್ನುವ ಉದ್ದೇಶದಿಂದ ಟ್ರಸ್ಟ್ ಇಂಥ ಕಾರ್ಯಕ್ರಮಗಳನ್ನು ರಾಜ್ಯದ ತುಂಬ ಹಮ್ಮಿಕೊಂಡಿದೆ ಎಂದರು.
ವಿಶೇಷ ಆಹ್ವಾನಿತರಾದ ಹಿರಿಯ ಸಾಹಿತಿ ಶಾಂತಾರಾಮ ನಾಯಕ ಹಿಚ್ಕಡ ಮಾತನಾಡಿ, ಸ್ವಾತಂತ್ರ‍್ಯ ಹೋರಾಟದ ಸಂದರ್ಭದಲ್ಲಿ ಪಿ.ಎಸ್. ಕಾಮತರು ಪಾಲ್ಗೊಂಡಿದ್ದರು. ಅಂಕೋಲಾ ಸ್ವಾತಂತ್ರ‍್ಯ ಹೋರಾಟಗಾರರಿಗೆ ಅವರು ಮಾರ್ಗದರ್ಶಕರು ಮತ್ತು ಪ್ರೇರಣಾಶಕ್ತಿಯಾಗಿದ್ದರು ಎಂದರು.
ಕೆನರಾ ವೆಲ್ ಫೇರ್ ಟ್ರಸ್ಟಿನ ಅಧ್ಯಕ್ಷ ಎಸ್.ಪಿ.ಕಾಮತ್ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ತಮ್ಮ ತಂದೆ, ಪಿ.ಎಸ್.ಕಾಮತ್‌ರ 126 ನೆ ಜನ್ಮದಿನದಂದು ಅವರ ಕುರಿತಾದ ಕಿರು ಪುಸ್ತಕ ಬಿಡುಗಡೆಯಾಗುತ್ತಿರುವುದು ಸಂತೋಷದ ಸಂಗತಿ ಎಂದರು. ನಿವೃತ್ತ ಪ್ರಾಚಾರ್ಯ ಆರ್. ಎಸ್. ಹಬ್ಬು ವೇದಿಕೆಯಲ್ಲಿದ್ದರು. ಕಾಲೇಜ್‌ನ ಪ್ರಾಂಶುಪಾಲ ಬಿ.ಆರ್.ತೋಳೆ ಸ್ವಾಗತಿಸಿದರು. ಕನ್ನಡ ಡ ಪ್ರಾಧ್ಯಾಪಕ ರಾಜೇಶ ಮರಾಠಿ ವಂದಿಸಿದರು. ಬಿಸಿಎ ವಿಭಾಗದ ಮುಖ್ಯ ಪ್ರೊ.ಹರಿಶ ಕಾಮತ ಕಾರ್ಯಕ್ರಮ ನಿರೂಪಿಸಿದರು.
ಕರ್ನಾಟಕ ಏಕೀಕರಣ ಹೋರಾಟಗಾರರ ವ್ಯಕ್ತಿ ಚಿತ್ರ ಮಾಲೆಯಡಿಯಲ್ಲಿ ಲೇಖಕಿ ಸುನಂದಾ ಕಡಮೆ ಅವರು ಪಿ.ಎಸ್.ಕಾಮತ್ ಪುಸ್ತಕ ರಚಿಸಿದ್ದಾರೆ. ಕಾರ್ಯಕ್ರಮದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪುಸ್ತಕದ ಕುರಿತು ವಿವರಿಸಿದರು.