ಹಬ್ಬು ಸಮುದಾಯಕ್ಕೆ ಸಂಬಂಧಪಟ್ಟ ಪುಸ್ತಕವನ್ನು ಕಳವೆ ಬಿಡುಗಡೆ ಮಾಡಿದರು
ಕಾರವಾರ: ಎಲ್ಲರಿಗೂ ಅಕ್ಷರ ಮತ್ತು ಅನ್ನ ನೀಡಿದವರು ಹಬ್ಬು ಸಮುದಾಯದವರು ಎಂದು ಪರಿಸರ ತಜ್ಞ ಶಿವಾನಂದ ಕಳವೆ ಹೇಳಿದರು.
ನಿವೃತ್ತ ಪ್ರಾಂಶುಪಾಲ ಆರ್.ಎಸ್.ಹಬ್ಬು ಅವರು ಬರೆದ `ಹಬ್ಬು ಸಮುದಾಯ -ಒಂದು ಜನಾಂಗೀಯ ಅಧ್ಯಯನ' ಎಂಬ ಪುಸ್ತಕವನ್ನು ನಗರದ ರಾಘವೇಂದ್ರ ಮಠದ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ಹಬ್ಬು ಸಮುದಾಯದ ಸಂಖ್ಯೆ ಕಡಿಮೆ ಆದರೂ ಗುಣಮಟ್ಟದಲ್ಲಿ ಕೊರತೆ ಇಲ್ಲ. ಸಮುದಾಯದ ಬಗ್ಗೆ ಮನೆ, ಮನೆಗಳಲ್ಲಿನ ದಾಖಲೆಗಳು ಕೃತಿಯಾಗಬೇಕು ಎಂದರು.
ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರ ಮಾತನಾಡಿ, ಸಮುದಾಯ ಕಿರಿದಾಗುತ್ತಿದೆ. ಹಾಗಾಗಿ ಹಬ್ಬು ಸಮುದಾಯದವರು ಜನಗಣತಿಯಲ್ಲಿ ತಮ್ಮ ಹೆಸರನ್ನು `ಹಬ್ಬು' ಎಂದು ದಾಖಲಿಸಬೇಕು. ಶಿಕ್ಷಣ ಸಂಸ್ಥೆಗಳಲ್ಲಿ `ಹಬ್ಬು' ಹೆಸರಿನಲ್ಲಿ ಪ್ರಶಸ್ತಿಗಳನ್ನು ಕೊಡುವಂತಾಗಬೇಕು. ಹಬ್ಬುವಾಡ, ಹಬ್ಬು ಚಿಟ್ಟೆ ಈ ಹೆಸರುಗಳನ್ನು ಉಳಿಸಲು ಸ್ಥಳೀಯ ಸಂಸ್ಥೆಗಳಲ್ಲಿ ಆ ಹೆಸರನ್ನು ದಾಖಲಿಸುವಂತಾಗಬೇಕು ಎಂದು ಸಲಹೆ ನೀಡಿದರು.
ಪ್ರಮುಖರಾದ ಮೋಹನ ಹಬ್ಬು, ಗಣೇಶ ಹಬ್ಬು, ಶ್ರೀಧರ ಹಬ್ಬು ವೇದಿಕೆಯಲ್ಲಿದ್ದರು. ಲೇಖಕ ಆರ್.ಎಸ್. ಹಬ್ಬು ಕೃತಿಯ ಕುರಿತು ಮಾಹಿತಿ ನೀಡಿದರು. ಎಂ.ಎಸ್.ಹಬ್ಬು ಪ್ರಾಸ್ತಾವಿಕವಾಗಿ ಮಾತನಾಡಿದರು. ರಜತ ಹಬ್ಬು ವಂದಿಸಿದರು. ಯಶೋಧಾ ಹೆಗಡೆ ಸ್ವಾಗತಿಸಿದರು. ಹಬ್ಬು ಸಮುದಾಯದ ಹಲವು ಪ್ರಮುಖರು ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಿದರು.