ಗೋಕರ್ಣದ ದುಬ್ಬನಸಶಿ ಸಮುದ್ರದಲ್ಲಿ ಭಾನುವಾರ ಅಪಾಯಕ್ಕೆ ಸಿಲುಕಿದ್ದ ಯುವ ಪ್ರವಾಸಿಗರನ್ನು ಬೋಟ್ ಮೂಲಕ ರಕ್ಷಿಸುತ್ತಿರುವುದು. 
ಉತ್ತರ ಕನ್ನಡ

ಮೂವರಿಗೆ ಮಾರಕವಾಯಿತೇ ಬೋನಸ್ ಹಣ

ಗೋಕರ್ಣ ಬಳಿ ಸಮುದ್ರದಲ್ಲಿ ಸಾವಿಗೀಡಾದವರ ದಯನೀಯ ಹಿನ್ನೆಲೆ

ಗೋಕರ್ಣ: ಇಲ್ಲಿನ ದುಬ್ಬನಸಶಿ ಸಮುದ್ರದಲ್ಲಿ ಭಾನುವಾರ ಅವಘಡಕ್ಕೆ ತುತ್ತಾದ ಯುವಕ- ಯುವತಿಯರ ನೈಜ ಬದುಕಿನ ದಯನೀಯ ಪರಿಸ್ಥಿತಿ ಮೂವರ ಸಾವಿನ ಮೂಲಕ ಬೆಳಕಿಗೆ ಬಂದಿದೆ. ಬೆಂಗಳೂರಿನ ಖಾಸಗಿ ಕಂಪನಿಯೊಂದರ ಕಾಲ್ ಸೆಂಟರ್‌ಗಳಲ್ಲಿ ಅತ್ಯಂತ ಸಣ್ಣ ಮೊತ್ತದ ಸಂಬಳಕ್ಕೆ ಕೆಲಸದಲ್ಲಿದ್ದ 10 ಯುವಕರು ಮತ್ತು 6 ಯುವತಿಯರು ತಾವು ಪಡೆದ 750 ರೂ. ಬೋನಸ್ ಹಣದಲ್ಲಿ ಸಂಭ್ರಮಾಚರಣೆ ಮಾಡಲು ಶನಿವಾರ ಸಂಜೆ ದುಬ್ಬನಸಶಿ ರೆಸಾರ್ಟ್‌ಗೆ ಬಂದಿದ್ದರು. ಆದರೆ, ಅದೇ ಬೋನಸ್ ಹಣ ಮೂರು ಅಮೂಲ್ಯ ಜೀವ ಬಲಿಗೆ ಕಾರಣವಾಯಿತಾ?

ಬೋನಸ್ ಖುಷಿಯ ಗುಂಗಿನಲ್ಲಿದ್ದ ಎಲ್ಲ 16 ಜನರು ಭಾನುವಾರ ಬೆಳಗ್ಗೆ 7.30ಕ್ಕೆ ಸಮುದ್ರ ತೀರಕ್ಕೆ ಬಂದು ಈಜಲು ನೀರಿಗಿಳಿಯುವ ತಯಾರಿಯಲ್ಲಿದ್ದರು. ಈ ಪೈಕಿ ಐವರು ಮೊದಲು ಹೋಗಿ ನೀರಿಗಿಳಿದಿದ್ದರು. ಅವರಲ್ಲಿ ಮೂವರು ಪ್ರಾಣ ಕಳೆದುಕೊಳ್ಳುವಂತಾಯಿತು. ಮೂವರ ಸಾವಿನ ನಂತರ ಸಂಬಂಧಿಕರನ್ನು ಸ್ಥಳೀಯ ಪೊಲೀಸರು ಸಂಪರ್ಕಿಸಿದಾಗ ಅತೀವ ಕಷ್ಟದಲ್ಲಿರುವ ಅವರ ಸಂಸಾರದ ಪರಿಚಯವಾಗಿದೆ.

ಪೊಲೀಸರಿಂದ ತ್ವರಿತ ನೆರವು:

ಘಟನೆಯಲ್ಲಿ ಮೃತ ಯುವತಿ ಜಾರ್ಖಂಡ್ ರಾಜ್ಯದವರು, ಮೃತ ಯುವಕ ಮತ್ತು ನಾಪತ್ತೆಯಾದ ಇನ್ನೋರ್ವ ಬೆಂಗಳೂರಿನವರು. ಜಾರ್ಖಂಡ್‌ನ ಶೋಭಾ ದಾಸ್ ಕುಟುಂಬದವರಿಗೆ ಪೊಲೀಸರು ವಿಷಯ ತಿಳಿಸಿ ಕೂಡಲೇ ಪ್ಲೈಟ್ ಮೂಲಕ ಇಲ್ಲಿಗೆ ಬರಲು ತಿಳಿಸಿದರು. ಆಗ ಅವರು ಪ್ಲೈಟ್ ಅಲ್ಲ, ರೈಲಿನಲ್ಲಿ ಬರುವಷ್ಟು ಆರ್ಥಿಕ ಶಕ್ತಿಯೂ ತಮಗಿಲ್ಲ ಎಂದು ಅಳಲು ತೋಡಿಕೊಂಡರು. ಇದೇ ರೀತಿ ಬೆಂಗಳೂರಿನ ಮಹಮ್ಮದ್ ಅಕ್ರಂ ಮತ್ತು ವಿಶ್ವೇಶ ಅವರ ಪಾಲಕರು ಕೂಡ ತಮ್ಮ ಹಣಕಾಸಿನ ದುಸ್ಥಿತಿಯನ್ನು ಪೊಲೀಸರೆದುರು ತೆರೆದಿಟ್ಟರು. ಇದರಿಂದಾಗಿ ಈ ಮೂರೂ ಕುಟುಂಬದವರು ಇಲ್ಲಿಗೆ ಬರಲು ಪೊಲೀಸರೇ ಸಹಾಯಕ್ಕೆ ಮುಂದಾಗಬೇಕಾಯಿತು.

ಇದಾದ ನಂತರ ಈ ಮೂವರ ಶವಗಳ ಅಂತ್ಯ ಸಂಸ್ಕಾರ ಮತ್ತು ಮೃತದೇಹಗಳನ್ನು ಅವರ ಊರುಗಳಿಗೆ ಸಾಗಿಸಲು ಆಂಬುಲೆನ್ಸ್ ಬಗ್ಗೆ ಹಣಕಾಸಿನ ಸಮಸ್ಯೆ ಎದುರಾಯಿತು. ಶವ ಸಾಗಣೆಗೆ ಕನಿಷ್ಠ 45 ರಿಂದ 50 ಸಾವಿರ ರೂ. ವೆಚ್ಚವಾಗುವ ಹಿನ್ನೆಲೆಯಲ್ಲಿ ಗೋಕರ್ಣದಲ್ಲಿಯೇ ಅಂತ್ಯಕ್ರಿಯೆ ವಿಧಿ ಮುಗಿಸಲು ಪೊಲೀಸರು ಸಲಹೆ ಮಾಡಿದರು. ಆದರೆ, ಇದಕ್ಕೆ ಒಪ್ಪದ ಮೃತರ ಕುಟುಂಬದವರು ಹೇಗಾದರೂ ಮಾಡಿ ಶವ ಸಾಗಿಸಲು ಅನುಕೂಲ ಮಾಡಿಕೊಡುವಂತೆ ಪೊಲೀಸರಲ್ಲಿ ಅಂಗಲಾಚಿದರು. ಕೊನೆಗೆ ಸ್ಥಳೀಯ ಪೊಲೀಸ್ ಇನ್‌ಸ್ಪೆಕ್ಟರ್ ಶ್ರೀಧರ ಎಸ್.ಆರ್. ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಮತ್ತು ಸ್ಥಳೀಯ ದಾನಿಗಳಿಂದ ಪೊಲೀಸರು ಅಂದಾಜು 1 ಲಕ್ಷ ರೂ. ಸಂಗ್ರಹಿಸಿ ಎಲ್ಲ ಅಗತ್ಯ ಏರ್ಪಾಟುಗಳನ್ನು ಮಾಡಿ ಸೋಮವಾರ ಮಧ್ಯಾಹ್ನ ಮೂರು ಶವಗಳನ್ನು ಅವರವರ ಜಾಗಗಳಿಗೆ ಸಾಗಿಸಲಾಯಿತು.

ಪ್ರಯೋಜನವಾಗದ ಸಿದ್ಧತೆ:

ಪೊಲೀಸರು ದುಬ್ಬನಸಶಿ ಸೇರಿದಂತೆ ಎಲ್ಲ ಬೀಚ್‌ಗಳಲ್ಲಿ, ಬೀಚ್‌ಗಳ ಕಡಿದಾದ ಬಂಡೆ ಕಲ್ಲುಗಳ ಮೇಲೆ ಈಗಾಗಲೇ 80ಕ್ಕೂ ಹೆಚ್ಚಿನ ಕಡೆಗಳಲ್ಲಿ ಎಚ್ಚರಿಕೆ ಬೋರ್ಡ್‌ಗಳನ್ನು ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಹಾಕಿದ್ದಾರೆ. ದುರ್ಘಟನೆ ಸಂಭವಿಸಿದ ದುಬ್ಬನಸಶಿಯ ರೆಸಾರ್ಟ್‌ಗಳಲ್ಲಿ ಜೀವರಕ್ಷಕ ಬಾಯ್(ಬಿರಡೆ)ಗಳು ಮತ್ತು ಲೈಫ್ ಜಾಕೆಟ್‌ಗಳಿದ್ದು, ನೀರಿಗಿಳಿದವರು ಜಾಕೆಟ್ ತೊಟ್ಟಿಕೊಂಡಿರುವುದು ಮತ್ತು ನೀರಿನಲ್ಲಿ ಬಿರಡೆಗಳು ತೇಲುತ್ತಿರುವುದು ಪೊಲೀಸರ ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಈ ಭಾಗದಲ್ಲಿ ಪ್ರವಾಸೋದ್ಯಮ ಇಲಾಖೆ ಲೈಫ್‌ಗಾರ್ಡ್‌ಗಳನ್ನು ನೇಮಿಸದ ಹಿನ್ನೆಲೆಯಲ್ಲಿ ರೆಸಾರ್ಟ್‌ನವರು ಲೈಫ್‌ಗಾರ್ಡ್‌ಗಳನ್ನು ತಮ್ಮ ವೆಚ್ಚದಲ್ಲಿ ನೇಮಿಸಿಕೊಂಡಿದ್ದಾರೆ. ಲೈಫ್‌ಗಾರ್ಡ್‌ಗಳು ಸ್ಥಳೀಯ ಮೀನುಗಾರರ ಸಹಾಯದಿಂದ ಘಟನೆ ನಡೆದಾಗ ತ್ವರಿತವಾಗಿ ಸಮುದ್ರಕ್ಕಿಳಿದು ಕಾರ್ಯೋನ್ಮುಖರಾಗಿದ್ದಾರೆ. ಇಷ್ಟಾಗಿಯೂ ಅಲೆಯ ತೀವ್ರತೆ ಮತ್ತು ನೀರಿನ ಸೆಳೆತದ ಮುಂದೆ ಈ ಎಲ್ಲ ಸಿದ್ಧತೆಗಳೂ ಸೋತು ನಿಂತಿವೆ!

ಶವವಾಗಿ ಪತ್ತೆ:

ಭಾನುವಾರ ಸಮುದ್ರದಲ್ಲಿ ನಾಪತ್ತೆಯಾಗಿದ್ದ ವಿಶ್ವೇಶ ಎ.ಕೆ. ಸೋಮವಾರ ಬೆಳಗಿನ ಜಾವ ಒಂದೂಮುಕ್ಕಾಲು ಗಂಟೆಯ ವೇಳೆಗೆ ಅದೇ ತೀರದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಕಾನೂನು ಕ್ರಮದ ಹಿನ್ನೆಲೆಯಲ್ಲಿ ಎಲ್ಲ ಮೃತರ ರಕ್ತ ಪರೀಕ್ಷೆಯನ್ನು ಪೊಲೀಸರು ಕೈಗೊಂಡಿದ್ದು, ಅವರ ರಕ್ತದಲ್ಲಿ ಯಾವುದೇ ಬಗೆಯ ಮಾದಕ ಡ್ರಗ್ಸ್ ಮತ್ತು ಮದ್ಯ ಸೇವನೆ ಅಂಶ ಪತ್ತೆಯಾಗಿಲ್ಲ ಎನ್ನಲಾಗಿದೆ.