ಸುನೀಲ ಹೆಗಡೆ ಕಾರವಾರದಲ್ಲಿ ಸುದ್ದಿಗೋಷ್ಠಿ ನಡೆಸಿದರು.
ಕಾರವಾರ: ಆರ್.ವಿ.ದೇಶಪಾಂಡೆ ಅವರು ಹಳಿಯಾಳ ಕ್ಷೇತ್ರಕ್ಕೆ ಗಂಟು ಬಿದ್ದ `ಶನಿ' ಎಂದು ಮಾಜಿ ಶಾಸಕ ಬಿಜೆಪಿಯ ಸುನೀಲ ಹೆಗಡೆ ಕಿಡಿ ಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 9 ಬಾರಿ ಶಾಸಕರಾಗಿ 45 ವರ್ಷ ಅಧಿಕಾರ ಮಾಡಿದ ದೇಶಪಾಂಡೆ ಅವರು ಭ್ರಷ್ಟಾಚಾರದಲ್ಲಿ ಮುಳುಗಿದ್ದರು. ಅಽಕಾರವನ್ನು ಸ್ವಾರ್ಥಕ್ಕೆ, ದರ್ಪಕ್ಕೆ ಬಳಸಿಕೊಂಡರು. ಅವರ ಮಂತ್ರಿಗಿರಿಯ ದಾಹ ಜಿಲ್ಲೆಯ ಅಭಿವೃದ್ಧಿಗೆ ಮಾರಕವಾಯಿತು. ಉತ್ತರ ಕನ್ನಡ ಜಿಲ್ಲೆ ಹಿಂದುಳಿಯಲು ಆರ್.ವಿ.ದೇಶಪಾಂಡೆ ಅವರ ನಿಷ್ಕಾಳಜಿಯೇ ಕಾರಣ ಎಂದು ಆರೋಪಿಸಿದರು.
ದೇಶಪಾಂಡೆ ಕೈಗಾರಿಕೆ ಸಚಿವರಾಗಿದ್ದಾಗ ಉತ್ತರ ಕನ್ನಡ ಜಿಲ್ಲೆಗೆ ಹೊಸ ಕೈಗಾರಿಕೆ ತಂದಿಲ್ಲ. ಬದಲಿಗೆ ಆ ಅವಧಿಯಲ್ಲಿ ದಾಂಡೇಲಿಯಲ್ಲಿರುವ ಕೈಗಾರಿಕೆಗಳು ಮುಚ್ಚಿದವು. ಪ್ರವಾಸೋದ್ಯಮ ಸಚಿವರಾಗಿ, ಉನ್ನತ ಶಿಕ್ಷಣ ಸಚಿವರಾಗಿಯೂ ಅವರ ಕೊಡುಗೆ ಜಿಲ್ಲೆಗೆ ಶೂನ್ಯ.ಜಿಲ್ಲೆಗೆ ಒಂದು ವಿಶ್ವ ವಿದ್ಯಾಲಯ ತಂದಿಲ್ಲ. ಹಾಲು ಒಕ್ಕೂಟ ಮಂಜೂರು ಮಾಡಿಸಲು ಅವರಿಗೆ ಸಾಧ್ಯವಾಗಿಲ್ಲ.
ದಾಂಡೇಲಿಯಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಪ್ರವಾಸೋದ್ಯಮ ಮಾಹಿತಿ ಕೇಂದ್ರ ಮತ್ತು ಯಾತ್ರಿ ನಿವಾಸಗಳು ಬಡವರಿಗೆ ಪ್ರಯೋಜನವಾಗದೆ ಪಾಳು ಬಿದ್ದಿವೆ. ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಇಲ್ಲ. ಹಳಿಯಾಳದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ರೋಗಿಗಳನ್ನು ಧಾರವಾಡ ಅಥವಾ ಹುಬ್ಬಳ್ಳಿಗೆ ಕಳುಹಿಬೇಕಾದ ದುಸ್ಥಿತಿ ಇದೆ ಎಂದು ಸುನೀಲ ಹೆಗಡೆ ಆರೋಪಗಳ ಸುರಿಮಳೆಗೈದರು.
ರಾಮನಗರ-ಅನಮೋಡ ರಸ್ತೆ ಅಪೂರ್ಣವಾಗಿ ಜನರು ಸಂಚಾರಕ್ಕೆ ಕಷ್ಟಪಡಲು ದೇಶಪಾಂಡೆ ಅವರೇ ಕಾರಣ. ಅಂಬೇವಾಡಿ ರೈಲು ನಿಲ್ದಾಣ ತಮ್ಮ ಸಾಧನೆ ಎನ್ನುವ ದೇಶಪಾಂಡೆ ಅವರು, ಅಂಬೇವಾಡಿಯಿಂದ ಹಳೇ ದಾಂಡೇಲಿ ರೈಲ್ವೆ ಹಳಿ ಬಳಿಯೇ ಆಶ್ರಯ ಮನೆಗಳನ್ನು ಹಂಚಿ ಭ್ರಷ್ಟಾಚಾರ ಎಸಗಿದ್ದಾರೆ. ಅವರ ಅಽಕಾರ ಅವಧಿಯಲ್ಲೇ ಅಂಬೇವಾಡಿಗೆ ರೈಲು ಸಂಪರ್ಕ ಸ್ಥಗಿತಗೊಂಡಿತ್ತು. ದಾಂಡೇಲಿಯಲ್ಲಿ ನಾನು ಅಧಿಕಾರದಲ್ಲಿದ್ದಾಗ ಜಿಪ್ಲಸ್ಟ್ 2 ಮನೆಗಳು ಇನ್ನೂ ಪೂರ್ಣಗೊಂಡಿಲ್ಲ ಎಂದು ಆರೋಪಿಸಿದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಬಗ್ಗೆ ಮಾತನಾಡುವ ನೈತಿಕ ಹಕ್ಕು ದೇಶಪಾಂಡೆ ಅವರಿಗಿಲ್ಲ. ರಾಜ್ಯ ಸರ್ಕಾರ ಮಳೆ ಮಾಪನ ಕೇಂದ್ರ ನಿರ್ವಹಣೆ ಮಾಡಲಾಗದ ದುಸ್ಥಿತಿಗೆ ತಲುಪಿದೆ. ಅದರಿಂದ ರೈತರಿಗೆ ಬೆಳೆ ವಿಮೆ ಸಿಗದಂತಾಗಿದೆ. ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪ್ರಯತ್ನಪಟ್ಟು ರೈತರಿಗೆ ಬೆಳೆ ವಿಮೆ ಕೊಡಿಸಿದರು. ಮೊಬೈಲ್ ನೆಟ್ವರ್ಕ್ ಸಮಸ್ಯೆ ಬಗೆಹರಿಸಿದ್ದಾರೆ. ಕಾಗೇರಿ ಅವರನ್ನು ಟೀಕಿಸುವ ಮೊದಲು ದೇಶಪಾಂಡೆ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು. ಬಿಜೆಪಿ ಪ್ರಮುಖರಾದ ಸುನೀಲ ನಾಯ್ಕ ಸೋನಿ, ಕಿಶನ್ ಕಾಂಬಳೆ ಮಾಜಾಳಿ, ನಾಗೇಶ ಕುರ್ಡೇಕರ್, ಸುದ್ದಿಗೋಷ್ಠಿಯಲ್ಲಿದ್ದರು.
ಕಾರವಾರ ಕ್ಷೇತ್ರ ಜೆಡಿಎಸ್‌ಗಿಲ್ಲ
ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ಜಗದೀಶ ನಾಯಕ ಮೊಗಟಾ ಮಾತನಾಡಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾರವಾರ-ಅಂಕೋಲಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗುತ್ತದೆ ಎಂಬ ವದಂತಿಯನ್ನು ಹರಡಿಸಲಾಗುತ್ತದೆ. ಹಾಗೇನಾದರೂ ಮಾಡಿದಲ್ಲಿ ಇಲ್ಲಿ ಬಿಜೆಪಿಗೆ ಇದ್ದ ಬೆಂಬಲವನ್ನೂ ಕಳೆದುಕೊಳ್ಳಬೆಕಾಗುತ್ತದೆ. ಕ್ಷೇತ್ರದಲ್ಲಿ ಜೆಡಿಎಸ್‌ನಲ್ಲಿ ಇದ್ದವರು ಅಲೆಮಾರಿಯಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಇದ್ದರೂ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರು ಎಂದು ಆನಂದ ಅಸ್ನೋಟಿಕರ್ ಹೆಸರು ಹೇಳದೇ ಟೀಕಿಸಿದರು.