ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.  
ಉತ್ತರ ಕನ್ನಡ

ನಾಲ್ಕನೇ ದಿನ ಪೂರೈಸಿದ ಬಿಜೆಪಿ ಪ್ರತಿಭಟನೆ

ಕ್ರಿಮಿನಲ್ ಮೊಕದ್ದಮೆ ಎದುರಿಸಿ, ಜಾಮೀನಿನ ಮೇಲಿರುವ ಬಿ.ನಾಗೇಂದ್ರ ಅವರನ್ನು ಡಿ.ಕೆ.ಶಿವಕುಮಾರ್ ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಎದುರು ಬಿಜೆಪಿ ಆರಂಭಿಸಿರುವ ಧರಣಿ ನಾಲ್ಕನೇ ದಿನ ಪೂರೈಸಿದೆ. ಒಟ್ಟು 6 ದಿನ ಪ್ರತಿಭಟನೆ ನಡೆಯಲಿದ್ದು, ಮೊದಲ ದಿನ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಪಕ್ಷದ ಪ್ರಮುಖರು ಆಗಮಿಸಿ ಧರಣಿಯಲ್ಲಿ ಪಾಲ್ಗೊಂಡರು.

ಮೊದಲ ದಿನದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ವಾಲ್ಮೀಕಿ ನಿಗಮದ 187 ಕೋಟಿ ರೂ.ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಆರೊಪವನ್ನು ಬಿ.ನಾಗೇಂದ್ರ ಎದುರಿಸುತ್ತಿದ್ದಾರೆ. ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಬಿಜೆಪಿ ಈ ಹಗರಣದ ವಿರುದ್ಧ ಹೋರಾಟ ನಡೆಸುತ್ತಿದ್ದಂತೆ ನಾಗೇಂದ್ರ ರಾಜೀನಾಮೆ ನೀಡಿದ್ದರು. ಅವರ ವಿರುದ್ಧ ಇದುವರೆಗೂ ಇಡಿ ತನಿಖೆ ನಡೆಯುತ್ತಿದೆ. ಅಕ್ರಮವಾಗಿ ಹಣ ವರ್ಗಾವಣೆಯಾಗಿರುವುದನ್ನು ಸ್ವತಃ ಸಿಎಂ ಅವರೂ ಅಽವೇಶನದಲ್ಲಿ ಒಪ್ಪಿಕೊಂಡಿದ್ದಾರೆ. ಇಂಥ ಕಳಂಕಿತರನ್ನು ಈಗ ಮತ್ತೆ ಡಿ.ಕೆ.ಶಿವಕುಮಾರ್ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದ್ದು, ಸರ್ಕಾರ ಜನರಿಗೆ ಯಾವ ಸಂದೇಶವನ್ನು ನೀಡುತ್ತಿದೆ ಎಂದು ಪ್ರಶ್ನಿಸಿದರು.
ಅಕ್ರಮ ಒಂದುಕಡೆಯಾದರೆ, ಬುಡಕಟ್ಟು ವಾಲ್ಮೀಕಿ ಸಮುದಾಯಕ್ಕೆ ದೊಡ್ಡ ಅನ್ಯಾಯವಾಗಿದೆ. ಈ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಗರಣೆಗಳೇ ತುಂಬಿ ಹೋಗಿವೆ ಎಂದು ಆರೋಪಿಸಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಎನ್.ಎಸ್.ಹೆಗಡೆ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳು ಹಾಗೂ ವಿವಿಧ ಮೋರ್ಚಾಗಳ ನೇತೃತ್ವದಲ್ಲಿ ಒಂದೊಂದು ದಿನ ಧರಣಿ ನಡೆಸಲಾಗುವುದು ಆ 20 ರಂದು ಶಿರಸಿ, 21 ರಂದು ಭಟ್ಕಳ, 22 ರಂದು ಕುಮಟಾ ಹಾಗೂ 24 ರಂದು ಹಳಿಯಾಳ ವಿಧಾನಸಭಾ ಕ್ಷೇತ್ರದಿಂದ ಪ್ರತಿಭಟನೆ ನಡೆಯಲಿದೆ ಎಂದರು.
ಮಾಜಿ ಎಂಎಲ್‌ಸಿ ಶಾಂತಾರಾಮ ಸಿದ್ದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ, ಪ್ರಮುಖರಾದ ನಾಗರಾಜ ನಾಯಕ, ಎಲ್.ಟಿ.ಪಾಟೀಲ ಬಿಜೆಪಿ ಎಸ್‌ಟಿ ಮೋರ್ಚಾರ ಪ್ರಮುಖರು ಪ್ರತಿಭಟನೆಯಲ್ಲಿದ್ದರು. ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಅಭಿವೃದ್ಧಿ ಇಲ್ಲದ ಭ್ರಷ್ಟ ಸರ್ಕಾರ

ಎರಡನೇ ದಿನದ ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸಚಿವ ನಾಗೇಂದ್ರ ಲೂಟಿ ಮಾಡಿದ ಕೋಟಿ, ಕೋಟಿ ರೂಪಾಯಿಗಳಲ್ಲಿ ಕಾಂಗ್ರೆಸ್ ಹೈಕಮಾಂಡ್‌ಗೂ ಪಾಲಿದೆ. ಇದರಿಂದ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಲಾಗಿದೆ ಎಂದು ದೂರಿದರು.
ನಾಗೇಂದ್ರ ರಾಜೀನಾಮೆ ನೀಡುವವರೆಗೆ ಸದನದ ಹೊರಗೆ ಹಾಗೂ ಒಳಗೂ ಪ್ರತಿಭಟನೆ ನಡೆಸಲಾಗುವುದು ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಘೋಷಿಸಿದ್ದಾರೆ. ಅದರಂತೆ ನಿರಂತರ ಧರಣಿ ನಡೆದಿದೆ ಎಂದರು.
............