ಬಿಜೆಪಿ ಪ್ರಮುಖರು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು
- 6 ದಿನಗಳ ನಿರಂತರ ಪ್ರತಿಭಟನೆ ಅಂತ್ಯ
- ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಬಿಜೆಪಿಗರು
ಸಚಿವ ಬಿ.ನಾಗೇಂದ್ರ ವಜಾಕ್ಕೆ ಆಗ್ರಹಿಸಿ ಜಿಲ್ಲಾ ಬಿಜೆಪಿ ನಡೆಸಿರುವ ಪ್ರತಿಭಟನೆ ಸೋಮವಾರ ಮುಕ್ತಾಯಗೊಂಡಿದೆ. ರಾಜ್ಯಪಾಲರಿಗೆ ಬರೆದ ಪತ್ರವನ್ನು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರ ಮೂಲಕ ಸಲ್ಲಿಸಿದರು.
ಆಗಸ್ಟ್ 18 ರಿಂದ ಜಿಲ್ಲಾಧಿಕಾರಿ ಕಚೇರಿಯ ಎದುರು ನಿರಂತರ ಧರಣಿ ಆರಂಭಿಸಲಾಗಿತ್ತು. ಒಂದೊಂದು ದಿನ ಒಂದೊಂದು ಕ್ಷೇತ್ರದ ಪಕ್ಷದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸೋಮವಾರ ಮಾಜಿ ಶಾಸಕ ಸುನೀಲ ಹಗಡೆ ನೇತೃತ್ವದಲ್ಲಿ ದೊಡ್ಡ ಸಂಖ್ಯೆಯಲ್ಲಿ ಹಳಿಯಾಳ ಕ್ಷೇತ್ರದ ಪ್ರಮುಖರು ಪಾಲ್ಗೊಳ್ಳುವ ಮೂಲಕ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಯಿತು. ಆದರೆ, ನಾಗೇಂದ್ರ ರಾಜೀನಾಮೆ ನೀಡುವವರೆಗೆ ಹೋರಾಟ ಕೈಬಿಡುವುದಿಲ್ಲ. ಪ್ರತಿಭಟನೆಯ ಸ್ವರೂಪ ಬದಲಾಗಲಿದೆ ಎಂದು ಜಿಲ್ಲಾ ಬಿಜೆಪಿ ತಿಳಿಸಿದೆ.
ಪ್ರತಿಭಟನಾ ಸಭೆಯಲ್ಲಿ ಮಾಥನಾಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಕಾಂಗ್ರೆಸ್ ಹೈಕಮಾಂಡ್ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ. ಭ್ರಷ್ಟಾಚಾರ ನಡೆಸಿ, ಒಮ್ಮೆ ಸಚಿವ ಸಂಪುಟದಿಂದ ಹೊರ ಹಾಕಲ್ಪಟ್ಟ ಬಿ.ನಾಗೇಂದ್ರ ಅವರಿಗೆ ಮತ್ತಷ್ಟು ಜವಾಬ್ದಾರಿ ನೀಡಲಾಗಿದೆ. ಇದು ಹೈಕಮಾಂಡ್ ಕೂಡ ಅದರಲ್ಲಿ ಭಾಗಿಯಾಗಿದೆ ಎಂಬುದನ್ನು ಸಾಬೀತು ಮಾಡುತ್ತದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ, ಸಚಿವ ನಾಗೇಂದ್ರ ಅವರಿಗೆ ಸಚಿವ ಸಂಪುಟದಲ್ಲಿ ಮುಂದುವರಿಯುವ ಯಾವುದೇ ನೈತಿಕ ಹಕ್ಕಿಲ್ಲ. ಅವರು ತಕ್ಷಣ ರಾಜೀನಾಮೆ ನೀಡಿ ಹೊರ ನಡೆಯಬೇಕು. ಇಲ್ಲವೇ ರಾಜ್ಯಪಾಲರು ಅವರನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಸಂವಿಧಾನವನ್ನು ಕಾಂಗ್ರೆಸ್ ದುರ್ಬಳಕೆ ಮಾಡಿಕೊಂಡಿದೆ. ಪರಿಶಿಷ್ಟ ಪಂಗಡದ ವಾಲ್ಮೀಕಿ ಜನಾಂಗಕ್ಕೆ ದೊಡ್ಡ ಅನ್ಯಾಯ ಮಾಡಿದೆ. ಧರಣಿ ಮುಗಿಯಬಹುದು. ಆದರೆ, ಕಾಂಗ್ರೆಸ್ ಸರ್ಕಾರದ ದುರಾಡಳಿತವನ್ನು ಮನೆ, ಮನೆಗೆ ಹೋಗಿ ತಲುಪಿಸಲಾಗುವುದು ಎಂದರು.
ಜಿಲ್ಲಾ ಕಾರ್ಯದರ್ಶಿ ಪ್ರಶಾಂತ ನಾಯ್ಕ ಮನವಿ ಪತ್ರ ಓದಿದರು. ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ, ಉಪಾಧ್ಯಕ್ಷರಾದ ಸುಬ್ರಾಯ ವಾಳ್ಕೆ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರೇಮಕುಮಾರ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗುರುಪ್ರಸಾದ ಹೆಗಡೆ, ಶಿವಾಜಿ ನರಸಾನಿ, ಜಿಲ್ಲಾ ಮಾಧ್ಯಮ ಸಂಚಾಲಕ ಕಿಶನ್ ಕಾಂಬಳೆ, ಕಾರವಾರ ಗ್ರಾಮೀಣ ಮಂಡಲ ಅಧ್ಯಕ್ಷ ಸುಭಾಷ್ ಗುನಗಿ, ಎಸ್‌ಟಿ ಮೋರ್ಚಾ ಕಾರ್ಯದರ್ಶಿ ಸಂತೋಷ ತಳವಾರ್, ಪ್ರಮುಖರಾದ ಅನಿಲ್ ಮುತ್ನಾಳ್, ಮಂಗೇಶ ದೇಶಪಾಂಡೆ, ಗೀತಾ ಶಿಕಾರಿಪುರ ಇತರರು ಇದ್ದರು.