ರೂಪಾಲಿ ನಾಯ್ಕ  
ಉತ್ತರ ಕನ್ನಡ

ನಾರಿ ಶಕ್ತಿಗೆ ನೀಡಿರುವ ದೊಡ್ಡ ಗೌರವ ಮಹಿಳಾ ಮೀಸಲಾತಿ: ರೂಪಾಲಿ ನಾಯ್ಕ

ಸುಭಾಸ ಹೆಗಡೆ ಧೂಪದಹೊಂಡ
ಕಾರವಾರ: ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ನೀಡುವ ಕಾಯ್ದೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿರುವುದು ನಾರಿ ಶಕ್ತಿಗೆ ನೀಡಿರುವ ದೊಡ್ಡ ಗೌರವವಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ಏಪ್ರಿಲ್ 16 ರಿಂದ 18 ರವರೆಗೆ ಲೋಸಭೆ ವಿಶೇಷ ಅಧಿವೇಶನ ಕರೆದು ಮಹಿಳಾ ಮೀಸಲಾತಿಯ ಬಗ್ಗೆ ಚರ್ಚೆ ನಡೆಯಲಿದೆ. ಕೇಂದ್ರ ಸರ್ಕಾರದ ಈ ಐತಿಹಾಸಿಕ ನಿರ್ಣಯವನ್ನು ಬೆಂಬಲಿಸಿ ಬಿಜೆಪಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದರು.
ಮೊದಲನೇಯದಾಗಿ ಮಿಸ್ಡ ಕಾಲ್ ನೀಡಿ ಮಹಿಳಾ ಮೀಸಲಾತಿ ಬೆಂಬಲಿಸಲಾಗುವುದು, ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಒಂದು ನಾರಿ ಶಿಕ್ತಿ ಪಾದಯಾತ್ರೆ ನಡೆಸಲಾಗುವುದು. ವಿವಿಧೆಡೆ ಸಮಾವೇಶ ನಡೆಸಲಾಗುವುದು ಎಂದು ರೂಪಾಲಿ ನಾಯ್ಕ ವಿವರಿಸಿದರು.
ಅದೊಂದು ಕಾಲವಿತ್ತು. ಮಹಿಳೆಯರು ಅಡುಗೆ ಮನೆಗೆ ಸೀಮಿತವಾಗಿದ್ದರು. ಅವರಿಗೆ ಶಿಕ್ಷಣ ಇರಲಿಲ್ಲ. ಆದರೆ, ಈಗ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಶಾಸನ ಸಭೆಯಲ್ಲಿ ಮಹಿಳಾ ಮೀಸಲಾತಿ ಸಂಬಂಧ ಹಲವು ದಶಕಗಳಿಂದ ಬೇಡಿಕೆ ಇದ್ದರೂ ಹಿಂದಿನ ಸರ್ಕಾರಗಳು ಅವುಗಳನ್ನು ಜಾರಿಗೆ ತಂದಿರಲಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹಲವು ಅಡೆತಡೆಗಳನ್ನು ದಾಟಿ ಘಟ್ಟಿ ನಿರ್ಧಾರ ಮಾಡಿರುವುದು ಮಹಿಳೆಯರಿಗೆ ಅತೀವ ಸಂತೋಶವಾಗಿದೆ. ಮನೆಗಳನ್ನು ಯಶಸ್ವಿಯಾಗಿ ನಡೆಸುವ ಮಹಿಳೆಯರಿಗೆ ಜವಾಬ್ದಾರಿ ಕೊಟ್ಟರೆ ದೇಶವನ್ನೂ ಉತ್ತಮವಾಗಿ ನಡೆಸುವ ವಿಶ್ವಾಸವಿದೆ ಎಂದರು.
ಬಿಜೆಪಿ ಮಹಿಳಾ ಘಟಕದ ಪ್ರಮುಖರಾದ ಮಾಲಾ ಹುಲಸ್ವಾರ್, ನಯನಾ ನೀಲಾವರ, ಸುಜಾತಾ ಬಾಂದೇಕರ್, ಕಲ್ಪನಾ ನಾಯ್ಕ, ರೋಶನಿ ಮಾಳ್ಸೇಕರ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಕಾರವಾರ ಕ್ಷೇತ್ರ ಬಿಜೆಪಿಗೆ ಖಚಿತ

ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಟಿಕೆಟ್ ನೀಡುವುದು ನೂರಕ್ಕೆ ನೂರು ಖಚಿತ ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ಹೇಳಿದರು.
ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಆನಂದ ಅಸ್ನೋಟಿಕರ್ ಹೇಳುತ್ತಿರುವುದು ಸತ್ಯವಲ್ಲ ಎಂದರು. ಕೇಂದ್ರದಲ್ಲಿ ಬಿಜೆಪಿ-ಜೆಡಿಎಸ್‌ನ ಎನ್‌ಡಿಎ ಮೈತ್ರಿಕೋಟ ಇದೆ. ಆದರೆ, ಸ್ಥಳೀಯ ಚುನಾವಣೆಗಳ ಬಗ್ಗೆ ಇನ್ನೂ ಮಾತುಕತೆ ನಡೆದಿಲ್ಲ. ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇದೆ. ಯಾವ ಕ್ಷೇತ್ರ ಜೆಡಿಎಸ್‌ಗೆ ಎಂಬ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರೂ ಯಾವುದೇ ಮಾತು ಕೊಟ್ಟಿಲ್ಲ. ಹಾಗೊಮ್ಮೆ ವಿಧಾನಸಭಾ ಚುನಾವಣೆಗೆ ಜೆಡಿಎಸ್-ಬಿಜೆಪಿ ಮೈತ್ರಿಯೇ ಆದರೂ ಜೆಡಿಎಸ್‌ಗಂತೂ ಕಾರವಾರದಲ್ಲಿ ಟಿಕೆಟ್ ಸಿಗುವುದಿಲ್ಲ. ಏಕೆಂದರೆ ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಡಮ್ಮಿ ಅಭ್ಯರ್ಥಿಯನ್ನು ನಿಲ್ಲಿಸಲಾಗಿತ್ತು. ಅವರಿಗೆ ಮೂರು ಸಾವಿರ ಮತ ಮಾತ್ರ ಬಂದಿತ್ತು. ಜೆಡಿಎಸ್ ನಾಯಕ ಎನಿಸಿಕೊಂಡವರು ವಿರೋಧ ಪಕ್ಷ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಮಾಡಿದ್ದರು ಎಂದರು.
"

ಎಸ್‌ಐಆರ್ ಹಾಗೂ ಮಹಿಳಾ ಮೀಸಲು ಕ್ಷೇತ್ರ ಜಾರಿಯಾಗಲಿದ್ದು, ಉತ್ತರ ಕನ್ನಡದ ಎರಡು ಕ್ಷೇತ್ರಗಳು ಮಹಿಳೆಯರಿಗೆ ಮೀಸಲಾಗುವ ಸಾಧ್ಯತೆ ಇದೆ. ಯಾವ ಕ್ಷೇತ್ರ ಎಂಬ ಸ್ಪಷ್ಟತೆ ಇಲ್ಲ. ಮಹಿಳಾ ಮತದಾರರು ಹೆಚ್ಚಿರುವ ಕ್ಷೇತ್ರಗಳನ್ನು ಮೀಸಲು ಮಾಡುವ ಸಾಧ್ಯತೆ ಇದೆ.

ರೂಪಾಲಿ ನಾಯ್ಕ ಬಿಜೆಪಿ ರಾಜ್ಯ ಉಪಾಧ್ಯಕ್ಷೆ