ಜಿ +2 ವಸತಿಗೃಹಗಳನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡದೇ ಇರುವುದನ್ನು ಖಂಡಿಸಿ ಬಿಜೆಪಿಯಿಂದ (BJP)ಯಲ್ಲಾಪುರದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿದರು.
ಯಲ್ಲಾಪುರ: ಪಟ್ಟಣದ ಹೆಬ್ಬಾರ ನಗರದಲ್ಲಿ ಜಿ +2 ವಸತಿಗೃಹಗಳನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡದೇ ಇರುವುದನ್ನು ಖಂಡಿಸಿ ಬಿಜೆಪಿ BJP ಕಾರ್ಯಕರ್ತರು ಪಟ್ಟಣ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಪ್ರತಿ ಬಡ ಫಲಾನುಭವಿಯಿಂದ 50 ಸಾವಿರ ರೂ. ಪಡೆದು, ಮನೆ ಹಸ್ತಾಂತರಿಸಿಲ್ಲ. ಅವೈಜ್ಞಾನಿಕ ಕಾಮಗಾರಿಯನ್ನು ಅರೆಬರೆಯಾಗಿ ಮಾಡಲಾಗಿದೆ.
ಎಲ್ಲ ಫಲಾನುಭವಿಗಳಿಗೆ ಪಡೆದ ಹಣ ಬಡ್ಡಿ ಸಮೇತ ಹಿಂದಿರುಗಿಸಬೇಕು. ಅವ್ಯವಸ್ಥೆಯಿಂದ ಕೂಡಿದ ಮನೆಗಳನ್ನು ಹಂಚಿಕೆ ಮಾಡದೆ, ಸಮರ್ಪಕವಾಗಿ ಕಾಮಗಾರಿ ನಡೆಸಿ, ಸುಸಜ್ಜಿತ ಮನೆ ನೀಡಬೇಕು ಎಂದು ಆಗ್ರಹಿಸಿದರು.
ಜಿ+2 ವಸತಿಗೃಹದ ಭ್ರಷ್ಟಾಚಾರ, ಹಗರಣದಿಂದ ಯಲ್ಲಾಪುರವೇ ತಲೆತಗ್ಗಿಸುವಂತಾಗಿದೆ. ಈ ಅಕ್ರಮಕ್ಕೆ ಕಾರಣರಾದವರ ವಿರುದ್ಧ ಕ್ರಮ ಆಗಬೇಕು.
ಸಂಬಂಧಿಸಿದವರು ಫಲಾನುಭವಿಗಳಿಗೆ ನ್ಯಾಯ ದೊರಕಿಸಿಕೊಡುವ ಕಾರ್ಯ ಮಾಡಬೇಕು. ಇಲ್ಲವಾದರೆ ಬಿಜೆಪಿ ಪ್ರತಿಭಟನೆ ಮುಂದುವರಿಸಲಿದೆ ಎಂದು ಎಚ್ಚರಿಸಿದರು.
ಯಲ್ಲಾಪುರದ ಗ್ರಾಮದೇವಿ ಜಾತ್ರೆ ಕಳಂಕಕ್ಕೀಡಾಗಬಾರದು. ಜಾತ್ರೆಯಲ್ಲಿ ಜೂಜು, ಅಕ್ರಮ ಚಟುವಟಿಕೆಗಳು ನಡೆಯದಂತೆ ತಡೆಯಬೇಕು. ಹಿಂದಿನ ಜಾತ್ರೆಯಂತೆ ಅಂಗಡಿ ಹರಾಜು ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ಆಗಬಾರದು ಎಂದು ಆಗ್ರಹಿಸಿದರು.
ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ಮಾತನಾಡಿ, ಜಿ+2 ವಸತಿಗೃಹಗಳನ್ನು 40 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. 4 ವರ್ಷಗಳ ಹಿಂದೆಯೇ ಹಕ್ಕುಪತ್ರಗಳನ್ನು ನೀಡಿದರೂ, ಈವರೆಗೆ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿಲ್ಲ.
ಇದು ಶಾಸಕರ ಹಾಗೂ ಪ.ಪಂ ಅಧಿಕಾರಿಗಳ ವೈಫಲ್ಯವಾಗಿದೆ. ಪಟ್ಟಣ ಪಂಚಾಯಿತಿ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.
ಜಿಪಂ ಮಾಜಿ ಸದಸ್ಯರಾದ ಉಮೇಶ ಭಾಗ್ವತ, ರಾಘವೇಂದ್ರ ಭಟ್ಟ ಹಾಸಣಗಿ, ಪ್ರಮುಖರಾದ ರಾಮು ನಾಯ್ಕ, ಗೋಪಾಲಕೃಷ್ಣ ಗಾಂವ್ಕರ, ನಾರಾಯಣ ನಾಯಕ, ಗಜಾನನ ನಾಯ್ಕ ತಳ್ಳಿಕೇರಿ, ಅಮೃತ ಬದ್ದಿ, ಸುನೀತಾ ವೆರ್ಣೇಕರ, ಸುಬ್ಬಣ್ಣ ಬೋಳ್ಮನೆ, ರಾಮಚಂದ್ರ ಚಿಕ್ಯಾನಮನೆ, ದೀಪಕ ಭಟ್ಟ ಶೀಗೆಕೇರಿ, ರವಿ ದೇವಡಿಗ ಇತರರಿದ್ದರು.