ಹಡಗಿನಿಂದ ಚಿಮ್ಮಿದ ಡಾಂಬರು  
ಉತ್ತರ ಕನ್ನಡ

ಕಾರವಾರ: ಹಡಗಿನಿಂದ ಉಕ್ಕಿದ ಡಾಂಬರು

ಸುಭಾಸ ಹೆಗಡೆ ಧೂಪದಹೊಂಡ

ಪ್ರಮುಖ ಮುಖ್ಯಾಂಶಗಳು

  • ಪದ್ಮನಾಭ ಹೆಸರಿನ ಹಡಗಿನಿಂದ ಚಿಮ್ಮಿ ಸಮುದ್ರಕ್ಕೆ ಸೇರಿದ ಬಿಟುಮಿನ್‌
  • ಸಮುದ್ರ ಮಾಲಿನ್ಯದ ಆತಂಕ
ಕಾರವಾರ: ಇಲ್ಲಿನ ವಾಣಿಜ್ಯ ಬಂದರಿನಲ್ಲಿ ಲಂಗರು ಹಾಕಿದ ಹಡಗಿನಿಂದ ಬಿಸಿ ಡಾಂಬರು ಉಕ್ಕಿದ ಘಟನೆ ಶನಿವಾರ ನಡೆದಿದೆ.
ಯುಎಇಯ ಕೋರ್ ಅಲ್ ಫಕನ್ ಬಂದರಿನಿಂದ ಬಿಟುಮಿನ್ (ಡಾಂಬರು) ತುಂಬಿಕೊಂಡು ಕಾರವಾರ ಬಂದರಿಗೆ ಬಂದಿದ್ದ ಪಲಾವು ಧ್ವಜ ಹೊಂದಿರುವ ಪದ್ಮನಾಭ ಹೆಸರಿನ ಹಡಗಿನಲ್ಲಿ ಈಗ ಘಟನೆ ನಡೆದಿದೆ. ಇದರಿಂದ ಯಾರಿಗೂ ಅಥವಾ ಹಡಗಿಯೂ ಯಾವುದೇ ಅಪಾಯವಾಗಿಲ್ಲ ಎಂದು ಬಂದರು ಅಧಿಕಾರಿಗಳು ಸ್ಪಷ್ಟಪಸಿದ್ದಾರೆ.
ಹಡಗು 4800 ಮೆಟ್ರಿಕ್ ಟನ್ ಬಿಟುಮಿನ್ ತುಂಬಿಕೊಂಡು ಕಾರವಾರಕ್ಕೆ ಬಂದು ಲಂಗರು ಹಾಕಿತ್ತು. ಶನಿವಾರ ಬೃಹತ್ ಪೈಪ್‌ಲೈನ್‌ಗಳ ಮೂಲಕ ಅದನ್ನು ಟ್ಯಾಂಕರ್‌ಗಳಿಗೆ ರವಾನಿಸುವ ಕಾರ್ಯ ಮಾಡಲಾಗುತ್ತಿತ್ತು. ಇನ್ನು 300 ಮೆಟ್ರಿಕ್ ಟನ್ ಬಾಕಿ ಇದೆ ಎನ್ನುವಾಗ ಭಾರಿ ಆವಿಯ ಜೊತೆ ಬಿಸಿ ಬಿಟುಮಿನ್ ಉಕ್ಕಿದೆ. ಹಡಗಿನಿಂದ ಸುಮಾರು 10 ಅಡಿ ಎತ್ತರಕ್ಕೆ ಚಿಮ್ಮಿದೆ. ನಂತರ ಸಮುದ್ರಕ್ಕೆ ಸೇರಿದೆ.
ಸಮುದ್ರಕ್ಕೆ ಬಿದ್ದ ಮಿಟುಮಿನ್ ಘಟ್ಟಿಯಾಗಿದ್ದು, ಅದನ್ನು ಡೈವರ್ ಕರೆಸಿ, ಸಂಗ್ರಹಿಸಿ ಮತ್ತೆ ಬ್ಯಾರಲ್‌ಗಳಿಗೆ ತುಂಬಲಾಗಿದೆ. ಜಲಜರಗಳಿಗೆ ಹಾನಿಯಾಗಲು ಬಿಟ್ಟಿಲ್ಲ ಎಂದು ಬಂದರು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 2 ಬ್ಯಾರಲ್‌ನಷ್ಟು ಬಿಟುಮಿನ್‌ನ್ನು ಸಂಗ್ರಹಿಸಲಾಗಿದೆ ಎಂದಿದ್ದಾರೆ. ಘಟನೆ ಶನಿವಾರವೇ ನಡೆದಿದ್ದರೂ ಭಾನುವಾರ ವಿಡಿಯೋ ವೈರಲ್ ಆಗಿದೆ.

ಖಾಲಿ ಹೇಗೆ ..?

ಪೆಟ್ರೋಲಿಯಂ ಉಪ ಉತ್ಪನ್ನವಾಗಿರುವ ಬಿಟುಮಿನ್ ತೆರೆದ ವಾತಾವರಣದಲ್ಲಿ ಕೆಲವೇ ಹೊತ್ತಿನಲ್ಲಿ ಘಟ್ಟಿಯಾಗುವ ಗುಣ ಹೊಂದಿದೆ. ಸೌದಿ ರಾಷ್ಟçಗಳಿಂದ ಅದನ್ನು ಖಾಸಗಿ ಕಂಪನಿಗಳು ಕಾರವಾರ ಬಂದರಿನ ಮೂಲಕ ಆಮದು ಮಾಡಿಕೊಳ್ಳುತ್ತವೆ. ಬೃಹತ್ ಪೈಪ್‌ಲೈನ್‌ಗಳ ಮೂಲಕ ಅದನ್ನು ಹಡಗಿಗೆ ತುಂಬಲಾಗುತ್ತದೆ ಮತ್ತು ಖಾಲಿ ಮಾಡಲಾಗುತ್ತದೆ. ಆ ಸಂದರ್ಭದಲ್ಲಿ ಬಿಟುಮಿನ್‌ಅನ್ನು ಬಿಸಿ ಮಾಡಲಾಗುತ್ತದೆ. ಹಡಗಿನಲ್ಲೇ ಬಿಟುಮಿನ್ ಬಿಸಿ ಮಾಡುವ ವ್ಯವಸ್ಥೆ ಇರುತ್ತದೆ. ಕಾರವಾರದಲ್ಲಿ ಬಿಟುಮಿನ್ ಸಂಗ್ರಹ ಮಾಡಲು ಬೃಹತ್ ಟ್ಯಾಂಕರ್‌ಗಳಿವೆ. ಲೋಡಿಂಗ್, ಅನ್‌ಲೋಡಿಂಗ್ ಸಮಯದಲ್ಲಿ ಬಿಟುಮಿನ್ ಸಾಕಷ್ಟು ಬಿಸಿಯಾಗಿರುವ ಕಾರಣ ಎಲ್ಲ ಕಾರ್ಯಗಳೂ ಯಂತ್ರಗಳ ಮೂಲಕವೇ ನಡೆಯುತ್ತವೆ.