ಕಾರವಾರ: ಜನನ-ಮರಣ ವಿಷಯಕ್ಕೆ ಸಂಬಂಸಿದಂತೆ ಅನುಸರಿಸಬೇಕಾದ ಕ್ರಮಗಳು ಮತ್ತು ಇತ್ತೀಚಿನ ಬದಲಾವಣೆಗಳ ಕುರಿತಂತೆ ಎಲ್ಲ ನೋಂದಣಾಧಿಕಾರಿಗಳು ತಿಳಿದಿರಬೇಕು ಎಂದು ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ , ಜಿಲ್ಲಾ ಮಟ್ಟದ ಜನನ ಮರಣ ನೋಂದಣಿ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಿಗತ ಅವಧಿಯ ನಂತರದ ನೋಂದಣಿಗಳನ್ನು ನ್ಯಾಯಾಲಯದ ಆದೇಶ ಪಡೆದು ಮಾಡಬೇಕು . 2024 ವರ್ಷಕ್ಕಿಂತ ಹಿಂದಿನ ಅವಧಿಯ ಜನನ ಮರಣ ದಾಖಲೆಗಳನ್ನು ಸಂರಕ್ಷಣಾಕಾರಿಗಳಿಗೆ ವರ್ಗಾಯಿಸಬೇಕು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಘಟಿಸುವ ಪ್ರತಿಯೊಂದು ಜನನ ಮತ್ತು ಮರಣ ಘಟನೆಗಳನ್ನು 21 ದಿನಗಳ ಒಳಗೆ ಕಡ್ಡಾಯವಾಗಿ ಶೇ100 ರಷ್ಟು ನೋಂದಣಿ ಮಾಡಲು ಕ್ರಮವಹಿಸಬೇಕು. ಮನೆಯಲ್ಲಿ ಸಂಭವಿಸುವ ಜನನಗಳನ್ನು ಪರಿಶೀಲನೆಯಿಂದ ದೃಢೀಕರಿಸಿ ನೋಂದಣಿಯಾಗುವಂತೆ ಕ್ರಮ ಕೈಗೊಳ್ಳಬೇಕು. ನೋಂದಣಿ ದಾಖಲೆಗಳಲ್ಲಿ ದಿನಾಂಕಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ ನಮೂದಿಸಬೇಕು ಎಂದು ಸೂಚಿಸಿದರು.
ಆರೋಗ್ಯ ಇಲಾಖೆಯ ಮೂಲಕ ಸರ್ಕಾರಿ ಅಧಿನದ ಎಲ್ಲ ವೈದ್ಯಕೀಯ ಕೆಂದ್ರಗಳು ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳಲ್ಲಿ ಸಂಭವಿಸುವ ಜನನ ಮರಣ ಘಟನೆಗಳನ್ನು ನಿಗದಿತ ಸಮಯದಲ್ಲಿ ನೋಂದಣಿ ಮಾಡುವಂತೆ ಮತ್ತು ಇ-ಜನ್ಮ ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ ಮತ್ತು ಮರಣಗಳಿಗೆ ಮರಣ ಕಾರಣದ ವೈದ್ಯಕೀಯ ಪ್ರಮಾಣ ಪತ್ರಗಳನ್ನು ಮತ್ತು ಮರಣೋತ್ತರ ಪರೀಕ್ಷೆಯ ವರದಿಗಳನ್ನು ಕಡ್ಡಾಯವಾಗಿ ಜನನ ಮರಣ ಮುಖ್ಯ ನೋಂದಣಾಧಿಕಾರಿಗಳಿಗೆ ಸಲ್ಲಿಸಬೇಕು ಎಂದರು.
ಕ್ರಿಮ್ಸ್ ನ ಡೀನ್ ಡಾ.ಪೂರ್ಣಿಮಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್, ಮಹಿಳಾ ಮತ್ತು ಮಕ್ಕಳ ಅಭಿವೃ ಇಲಾಖೆ ಉಪ ನಿರ್ದೇಶಕ ವಿರೂಪಾಕ್ಷ ಪಾಟೀಲ್ ಇತರರು ಇದ್ದರು.
ಒಂದು ವರ್ಷದಲ್ಲಿ 11,579 ಮರಣ
ಜಿಲ್ಲಾ ಸಂಖ್ಯಾ ಸಂಗ್ರಹಣಾಽಕಾರಿ ಸೋಮಶೇಖರ ಮೇಸ್ತಾ ಮಾತನಾಡಿ, ಜಿಲ್ಲೆಯಲ್ಲಿ 2025 ರಲ್ಲಿ, 17,227 ಜನನ ಮತ್ತು 11,579 ಮರಣದ ಕುರಿತು ದಾಖಲೆಗಳು ನೋಂದಣಿಯಾಗಿದೆ. ಜನವರಿ 2026 ರಲ್ಲಿ 1,325 ಜನನ ಮತ್ತು 1,104 ಮರಣಗಳು ದಾಖಲಾಗಿವೆ. ಈ ಕುರಿತ ದಾಖಲೆಗಳನ್ನು ಡಿಜಿಟಲ್ ಸಹಿಯೊಂದಿಗೆ ವಿತರಿಸಲಾಗುತ್ತಿದೆ ಎಂದರು.