ಭಟ್ಕಳದ ದುರ್ಘಟನೆಯಲ್ಲಿ ಮೃತರು
ರಾಮಚಂದ್ರ ಕಿಣಿ ಭಟ್ಕಳ: ಅಳಿವೆಕೋಡಿಯ ಚಿಪ್ಪೆಕಲ್ಲು ದುರಂತ ಹಲವಾರು ಕುಟುಂಬಗಳ ಬದುಕಿನ ಬೆಳಕನ್ನೇ ಕಸಿದುಕೊಂಡಿದ್ದು, ಸಾರದಹೊಳೆಯ ಪಡುಶಿರಾಲಿ ಗ್ರಾಮವನ್ನು ದುಃಖದ ಸಾಗರದಲ್ಲಿ ಮುಳುಗಿಸಿದೆ. ವರ್ಷಗಳಿಂದ ಜೀವನೋಪಾಯಕ್ಕಾಗಿ ನದಿಗೆ ಇಳಿದು ಚಿಪ್ಪೆಕಲ್ಲು ಸಂಗ್ರಹಿಸುತ್ತಿದ್ದ ಹೆಗ್ಗಡತಿ ಮನೆಯ ಕುಟುಂಬದವರಿಗೆ ಈ ಬಾರಿ ವಿಧಿ ಭೀಕರ ಹೊಡೆತ ನೀಡಿದೆ.
ನದಿಯ ನೀರಿನ ಹರಿವು, ಇಳಿತ-ಏರಿಳಿತಗಳನ್ನು ಅರಿತುಕೊಂಡೇ ಪ್ರತೀ ವರ್ಷ ಚಿಪ್ಪೆಕಲ್ಲು ಸಂಗ್ರಹಕ್ಕೆ ತೆರಳುತ್ತಿದ್ದ ಕುಟುಂಬದ ಮಹಿಳೆಯರು ಈ ಬಾರಿ ಹೇಗೆ ಎಚ್ಚರ ತಪ್ಪಿದರು ಎಂಬುದು ಗ್ರಾಮಸ್ಥರಿಗೂ ಅರ್ಥವಾಗುತ್ತಿಲ್ಲ. ತಿಳಿದ ಜಾಗದಲ್ಲೇ ಅಡಗಿಕೊಂಡಿದ್ದ ವಿಧಿಯ ಕ್ರೂರ ಆಟ ಒಂದೆ ಕುಟುಂಬದ ಎಂಟು ಅಮೂಲ್ಯ ಜೀವಗಳನ್ನು ಬಲಿ ಪಡೆದಿದ್ದು, ಇಡೀ ಗ್ರಾಮವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಮೃತರ ಒಂದೊಂದು ಕುಟುಂಬದ ಕತೆಯೂ ದಯನೀಯವಾಗಿದ್ದು, ಕೇಳುತ್ತ ಹೋದರೆ, ದುಖಃ ಉಮ್ಮಳಿಸಿ ಬರುತ್ತದೆ.
ಒಂದೇ ಕುಟುಂಬದ ಇಬ್ಬರು ಸೊಸೆಯರಾದ ನಾಗರತ್ನ ಜಟ್ಟಪ್ಪ ನಾಯ್ಕ ಹಾಗೂ ಮಂಜಮ್ಮಾ ಗೋಯ್ದ ನಾಯ್ಕ ಜಲಸಮಾಽಯಾಗಿದ್ದು, ಅವರ ಕುಟುಂಬಸ್ಥರ ಆಕ್ರಂದನ ಮನಕಲಕುವಂತಿದೆ. ನಾಗರತ್ನ ಅವರ ಮಗ ಮಣಿಪಾಲದಲ್ಲಿ ಉದ್ಯೋಗದಲ್ಲಿದ್ದರೆ, ಮಗಳು ಬಿಸಿಎ ವ್ಯಾಸಂಗ ಮಾಡುತ್ತಿದ್ದು, ಮಂಗಳವಾರ ನಡೆಯಬೇಕಿದ್ದ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಳು. ಆದರೆ ವಿದಿಯ ಆಟದಲ್ಲಿ ತಾಯಿಯನ್ನು ಕಳೆದುಕೊಂಡ ದುಃಖ ಆ ಕುಟುಂಬವನ್ನು ಆವರಿಸಿದೆ.
ಬಡತನದ ಬೆಗೆಯಲ್ಲಿ ಬಳಲುತತಿದ್ದ ಮೃತ ಲಕ್ಷ್ಮೀ ಶಿವರಾಮ ನಾಯ್ಕ ಅವರ ನಾಲ್ಕು ಮಕ್ಕಳು ಈಗ ಸಂಪೂರ್ಣ ಅನಾಥರಾಗಿದ್ದಾರೆ. ಈಗಾಗಲೇ ತಂದೆಯನ್ನು ಕಳೆದುಕೊಂಡಿದ್ದ ಮಕ್ಕಳಿಗೆ ತಾಯಿಯೇ ಆಸರೆಯಾಗಿದ್ದಳು. ಆದರೆ ಈ ದುರಂತದಲ್ಲಿ ತಾಯಿಯನ್ನೂ ಕಳೆದುಕೊಂಡ ಪರಿಣಾಮ, 8ನೇ ತರಗತಿಯಲ್ಲಿ ಓದುತ್ತಿರುವ ತಮ್ಮ ಹಾಗೂ 10ನೇ ತರಗತಿ ಮತ್ತು ಪಿಯುಸಿ ವ್ಯಾಸಂಗ ಮಾಡುತ್ತಿರುವ ಇಬ್ಬರು ತಂಗಿಯರ ಜವಾಬ್ದಾರಿ ಇದೀಗಷ್ಟೆ ಪಿಯುಸಿ ಶಿಕ್ಷಣ ಪೂರ್ಣಗೊಳಿಸಿ ಪಾರ್ಟ್ಟೈಂ ಕೆಲಸ ಮಾಡುತ್ತಿದ್ದ ಹಿರಿಯ ಅಕ್ಕನ ಹೆಗಲೇರಿದೆ.
ಮೃತ ನಾಗರತ್ನ ಪರಮೇಶ್ವರ ನಾಯ್ಕ ಅವರ ಕುಟುಂಬದ ದುಃಖವೂ ಕಡಿಮೆಯಿಲ್ಲ. ತಾಯಿಯ ಮಮತೆಯಲ್ಲಿ ಬೆಳೆಯಬೇಕಿದ್ದ 3ನೇ ತರಗತಿಯಲ್ಲಿ ಓದುತ್ತಿರುವ ಅವಳಿ ಹೆಣ್ಣು ಮಕ್ಕಳು ಹಾಗೂ 8ನೇ ತರಗತಿಯ ಗಂಡು ಮಗು ತಾಯಿಯನ್ನು ಕಳೆದುಕೊಂಡು ತಬ್ಬಲಿಗಳಾಗಿದ್ದಾರೆ.
ಇದೇ ಕುಟುಂಬದ ಇನ್ನಿಬ್ಬರು ಮಕ್ಕಳು ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಆಘಾತದಿಂದ ದಿಗ್ಭ್ರಮೆಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ತಾಯಿಯೊಂದಿಗೆ ಚಿಪ್ಪೆಕಲ್ಲು ಬುಟ್ಟಿ ಹೊತ್ತು ತರಲು ತೆರಳಿದ್ದ ಉಮೇಶ, ತಾಯಿಯನ್ನು ರಕ್ಷಿಸಲು ಮುಂದಾಗಿ ತಾನೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಈ ದುರಂತದ ದುಃಖದಿಂದ ಆ ಕುಟುಂಬದಲ್ಲಿ ತಂದೆ ಮತ್ತು ಮಗಳು ಇನ್ನೂ ಹೊರಬಂದಿಲ್ಲ.
ಒಂದೇ ದಿನದಲ್ಲಿ ಬಾಳಿ ಕುಟುಂಬದ ಜನರ ಜೀವಕ್ಕೆ ಆಸರೆಯಾಗಬೇಕಿದ್ದ 11 ಅಮೂಲ್ಯ ಜೀವಗಳು ಇಹಲೋಕ ತ್ಯಜಿಸಿವೆ. ಅನೇಕ ದುರಂತಗಳನ್ನು ಹೊತ್ತು ತಂದ ಈ ಕರಾಳ ಸಂಡೆ ಮತ್ತೆಂದೂ ಯಾರ ಬಾಳಲ್ಲೂ ಆಟ ಆಡದಿರಲಿ ಎಂದು ಗ್ರಾಮಸ್ಥರು ದೇವರ ಮೊರೆ ಹೋಗಿದ್ದಾರೆ. ಪಡುಶಿರಾಲಿ ಗ್ರಾಮದಲ್ಲಿ ಇದೀಗ ಮನೆಮಾಡಿರುವುದು ಕೇವಲ ನೀರವ ಮೌನ ಮತ್ತು ಕಣ್ಣೀರಿನ ಕಥೆಗಳಷ್ಟೇ.
ಹಿನ್ನೆಲೆ:
ಸಾರದ ಹೊಳೆ ಪಡು ಶಿರಾಲಿಯ ಇಬ್ಬರು ಪುರುಷರು, 12 ಜನ ಮಹಿಳೆಯರು ಸೇರಿ 14 ಜನ ಚಿಪ್ಪಿಕಲ್ಲು ಸಂಗ್ರಹಿಸಲು ಭಾನುವಾರ ಬೆಳಗ್ಗೆ ಸಮೀಪದ ಪಳ್ಳಿ ಹೊಳೆಗೆ ತೆರಳಿದ್ದರು. ಸಮುದ್ರದ ಉಬ್ಬರದ ಪರಿಣಾಮ ನದಿಯಲ್ಲಿ ನೀರಿನ ಪ್ರಮಾಣ ಮಧ್ಯಾಹ್ನದ ಹೊತ್ತಿಗೆ ಹೆಚ್ಚಿತ್ತು. ಇದರಿಂದ 9 ಮಹಿಳೆಯರು ಇಬ್ಬರು ಪುರುಷರು ನೀರಿನಲ್ಲಿ ಮುಳುಗಿದ್ದರು. ಅದರಲ್ಲಿ ಒಬ್ಬ ಯುವಕ ಹಾಗೂ 9 ಮಹಿಳೆಯ ಮೃತ ದೇಹಗಳು ಭಾನುವಾರವೇ ಪತ್ತೆಯಾಗಿತ್ತು. ಸೋಮವಾರ ಒಂದು ಮೃತ ದೇಹ ಪತ್ತೆಯಾಯಿತು.