ಹೊನ್ನಾವರದಲ್ಲಿ ಪುಷ್ಪಾಂಜಲಿ ನಾಟ್ಯ ಕೇಂದ್ರ ಆಯೋಜಿಸಿದ್ದ ನೃತ್ಯೋತ್ಸವವನ್ನು(Bharatanatyam) ವೈದ್ಯೆ ಡಾ. ಮಂಜುಳಾ ಯುವರಾಜ ಉದ್ಘಾಟಿಸಿದರು.
ಹೊನ್ನಾವರ: ಭರತನಾಟ್ಯವು Bharatanatyam ಭಾರತೀಯ ಸಂಸ್ಕೃತಿಯ ಉಸಿರು, ಹೆಮ್ಮೆಯ ಪರಂಪರೆ. ಈ ಕಲೆಯನ್ನು ಉಳಿಸಿ ಮುಂದಿನ ತಲೆಮಾರಿಗೆ ಕೊಡಬೇಕು ಎಂದು ಖ್ಯಾತ ವೈದ್ಯೆ ಡಾ. ಮಂಜುಳಾ ಯುವರಾಜ ಹೇಳಿದರು.
ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ ಸಭಾಭವನದಲ್ಲಿ ಪುಷ್ಪಾಂಜಲಿ ನಾಟ್ಯ ಕೇಂದ್ರ ಆಯೋಜಿಸಿದ್ದ ನೃತ್ಯೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಯುವಜನರು ಜಂಕ್ ಫುಡ್‌ನಿಂದ ದೂರ ಉಳಿದು ಆರೋಗ್ಯಕ್ಕೆ ಪೂರಕವಾದ ಆಹಾರ ಸೇವಿಸಬೇಕು. ಮಕ್ಕಳು ಮೊಬೈಲ್ ಫೋನ್ ಬಳಸುವುದನ್ನು ಕಡಿಮೆ ಮಾಡಿ ಭರತನಾಟ್ಯದಂತಹ ಕಲಾ ಪ್ರಕಾರವನ್ನು ಆಯ್ದುಕೊಳ್ಳಬೇಕು ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ. ನಾಯ್ಕ ಮಾತನಾಡಿ, ಭರತನಾಟ್ಯವು ರಾಗ, ತಾಳ, ಲಯ, ಭಕ್ತಿ, ಏಕಾಗ್ರತೆ ಹೊಂದಿರುವ ಕಲೆಯಾಗಿದೆ.
ಶಿಕ್ಷಕಿಯಾಗಿ, ಸಿಆರ್‌ಪಿಯಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಮೀಳಾ ಅವರು ನಾಟ್ಯಕೇಂದ್ರವನ್ನು ಹುಟ್ಟು ಹಾಕಿದ್ದಾರೆ. ತಾಲೂಕಿನ ಮಕ್ಕಳು ಭರತನಾಟ್ಯ ಕಲಿಯಬೇಕು ಎಂಬ ತುಡಿತದೊಂದಿಗೆ ಮಕ್ಕಳಿಗೆ ವಿದ್ಯೆಯನ್ನು ಧಾರೆ ಎರೆಯುತ್ತಿದ್ದಾರೆ. ಅವರ ಪ್ರಯತ್ನ ಶ್ಲಾಘನೀಯವಾದುದು ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಎಚ್.ಎಂ. ಮಾರುತಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನ್ಯೂ ಎಜುಕೇಷನ್ ಸೊಸೈಟಿ ಅಧ್ಯಕ್ಷ ರಘುನಾಥ ಪೈ ಮಾತನಾಡಿ, ಇತ್ತೀಚೆಗೆ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಭರತನಾಟ್ಯ ಕಲೆಯನ್ನು ಆಯ್ದುಕೊಂಡು ಸಾಧನೆ ಮಾಡುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ ಎಂದರು.
ಪುಷ್ಪಾಂಜಲಿ ನಾಟ್ಯ ಕೇಂದ್ರದ ಸಂಚಾಲಕ ಎಲ್.ಜಿ. ಭಟ್, ಸುನೀಲ ಶೇಟ್ ಹಾಗೂ ಭಾರತಿ ನಾಯ್ಕ, ಅನಿತಾ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ವಿದುಷಿ ಪ್ರಮಿಳಾ ಕೆ.ಎಸ್. ಅವರ ನೃತ್ಯ ಸಂಯೋಜನೆ ಮತ್ತು ನಿರ್ದೇಶನದಲ್ಲಿ ಭರತನಾಟ್ಯ ಪ್ರದರ್ಶನ ಜನಮನ ಸೆಳೆಯಿತು.