ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಭಗೀರಥ ಜಯಂತಿಯನ್ನು ಆಚರಿಸಲಾಯಿತು.
ಕಾರವಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ , ಕರ್ನಾಟಕ ರಾಜ್ಯ ಸರಕಾರಿ ನೌಕರ ಭವನದಲ್ಲಿ ಶ್ರೀ ಭಗೀರಥ ಜಯಂತಿಯನ್ನು ಗುರುವಾರ ಆಚರಿಸಲಾಯಿತು.
ಭಗೀರಥ ಮಹರ್ಷಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ, ಜಿಲ್ಲಾಧಿಕಾರಿ ಕಚೇರಿಯ ಚುನಾವಣೆ ಶಾಖೆಯ ತಹಶೀಲ್ದಾರ ಪ್ರಮೋದ ನಾಯ್ಕ ಅವರು, ಭಗೀರಥ ಮಹರ್ಷಿಯು ಸತತ ಪ್ರಯತ್ನ ಮತ್ತು ಘೋರ ತಪ್ಪಸಿನಿಂದ ಪವಿತ್ರ ಗಂಗೆಯನ್ನು ಭೂಮಿಗೆ ತಂದಿದ್ದು, ಅವರಶ್ರಮ ಮತ್ತು ಸತತ ಪ್ರಯತ್ನದ ತತ್ವಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಭಗೀರಥ ಅವರ ಕುರಿತು ಅಂಕೋಲಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಮಹೇಶ ಬಿ ನಾಯಕ ವಿಶೇಷ ಉಪನ್ಯಾಸನೀಡಿ, ಭಗೀರಥ ಮಹರ್ಷಿ ತನ್ನ ಘೋರ ತಪಸ್ಸಿನ ಮೂಲಕ ಕಠಿಣ ಕಾರ್ಯ ಪೂರೈಸಿ ಪವಿತ್ರ ಗಂಗೆಯನ್ನು ಶಿವನ ಜಡೆಯಿಂದ ಭೂಮಿಗೆ ತಂದ ಶ್ರೇಷ್ಠರು, ದೃಢ ಸಂಕಲ್ಪ ಮತ್ತು ಸತತ ಪ್ರಯತ್ನದಿಂದ ಅಸಾಧ್ಯವಾದುದನ್ನು ಸಾಧಿಸಲು ಸಾಧ್ಯ ಎಂದು ತೋರಿಸಿಕೊಟ್ಟರು. ಭಗೀರಥ ಅವರ ದೃಢ ಸಂಕಲ್ಪ, ತಾಳ್ಮೆ, ಸತತ ಪರಿಶ್ರಮ, ಪಿತೃ ಭಕ್ತಿ, ಸಹನೆ, ವಿನಯ, ಸಮಾಜದ ಹಿತಚಿಂತನೆ, ಧೈರ್ಯ, ನಂಬಿಕೆಯ ಹಾದಿಯಲ್ಲಿ ಪ್ರತಿಯೊಬ್ಬರು ನಡೆದಾಗ ಯಶಸ್ಸು ಪಡೆಯಬಹುದು ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಸಂಜೀವ್ ಕುಮಾರ್ ನಾಯ್ಕ ಮಾತನಾಡಿ, ಭಗೀರಥರು ಸತತ ಪ್ರಯತ್ನದಿಂದ ಗಂಗೆಯನ್ನು ಭೂಮಿಗೆ ತಂದು ತನ್ನ ಪುರ್ವಜರ ಚಿತ್ತಾ ಭಸ್ಮವನ್ನು ಪವಿತ್ರಗೊಳಿಸಿ ಮುಕ್ತಿ ನೀಡಲು ಛಲಬಿಡದೇ ಮಾಡಿದ ಸಾಧನೇ ಅಸಾಮಾನ್ಯ. ಪರಿಶ್ರಮ ಮತ್ತು ಕಠಿಣ ನಿರ್ಣಯಗಳ ಮೂಲಕ ಜಯ ಸಾಧಿಸಬಹುದು ಎಂಬುದಕ್ಕೆ ಮುನ್ನಡೇ ಬರೆದವರು ಭಗೀರಥರು. ಧೈರ್ಯ, ಅತ್ಮ ವಿಶ್ವಾಸ,
ಛಲದಿಂದ ಸತತ ಪ್ರಯತ್ನದಿಂದ ಯಶಸ್ಸು ಖಚಿತವಾಗಿ ದೊರೆಯುತ್ತದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ವೆಂ ನಾಯ್ಕ ಸ್ವಾಗತಿಸಿದರು, ವನಿತಾ ಶೇಟ್ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಸಮಾಜದ ಮುಖಂಡ ಫಕೀರಪ್ಪ ಭಗೀರಥ ಸಮಾಜದ ಜಿಲ್ಲಾದ್ಯಕ್ಷ ದೇವೇಂದ್ರಪ್ಪ, ಸಮುದಾಯದವರು ಮತ್ತಿತರರು ಇದ್ದರು.