ಸಚಿವ ಮಂಕಾಳ ವೈದ್ಯ ಸುದ್ದಿಗೋಷ್ಠಿ ನಡೆಸಿದರು.  
ಉತ್ತರ ಕನ್ನಡ

ಬೇಡ್ತಿ-ವರದಾ ನದಿ ಜೋಡಣೆ ಘೋಷಿಸಿದಾಗ ಹೆಬ್ಬಾರ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಆಗೇಕೆ ಮಾತನಾಡಿಲ್ಲ

ಸುಭಾಸ ಹೆಗಡೆ ಧೂಪದಹೊಂಡ
ಕಾರವಾರ: ಬೇಡ್ತಿ-ವರದಾ ನದಿ ಜೋಡಣೆ ಹಾಗೂ ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ನನ್ನ ವಿರೋಧವಿದೆ. ಸಿಎಂ, ಡಿಸಿಎಂ ಅವರಿಗೂ ತಿಳಿಸಿದ್ದೇನೆ ಪತ್ರವನ್ನೂ ಬರೆದಿದ್ದೇನೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಆದರೆ, ಈ ಯಾವ ಯೋಜನೆಗಳೂ ನಮ್ಮ ಅವಧಿಯಲ್ಲಿ ಘೋಷಣೆಯಾಗಿದ್ದಲ್ಲ. ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಘೋಷಣೆ ಆಗಿರುವುದಾಗಿತ್ತು. ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸ್ಪೀಕರ್ ಆಗಿದ್ದರು. ಜಿಲ್ಲೆಯಲ್ಲಿ ಇಬ್ಬರು ಸಚಿವರು, ಐವರು ಶಾಸಕರಿದ್ದರು. ಆಗ ಈ ಯಾವುದೇ ಯೋಜನೆಗಳ ಬಗ್ಗೆ ಅರ‍್ಯಾರೂ ಚಕಾರ ಎತ್ತಿರಲಿಲ್ಲ ಇದನ್ನು ನಾನು ದಾಖಲೆಗಳ ಸಮೇತ ಬಿಡುಗಡೆ ಮಾಡಿ ಹೇಳಿದ್ದೇನೆ ಎಂದರು.
ಬೇಡ್ತಿ-ವರದಾ ನದಿ ಡಿಪಿಆರ್ ಮಾಡುವ ಬಗ್ಗೆ ಬಜೆಟ್‌ನಲ್ಲಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದರು. ಆಗ ಹಾಲಿ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿರುವ ಆಗಿನ ಶಿವರಾಮ ಹೆಬ್ಬಾರ ಅವರು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಅವರದ್ದೇ ಕ್ಷೇತ್ರದ ಬೇಡ್ತಿ ನದಿಯ ನೀರನ್ನು ಕೊಂಡೊಯ್ಯುವ ಬಗ್ಗೆ ಪ್ರಸ್ತಾಪವಾದಾಗ ಅವರು ಆಗೇಕೆ ಮಾತನಾಡಿಲ್ಲ ಎಂದರು.
ಬೊಮ್ಮಾಯಿ ಅವರು ಬೇಡ್ತಿ-ವರದಾ ನದಿ ಜೋಡಣೆ ವಿಚಾರವಾಗಿ ಪಾದಯಾತ್ರೆ ಮಾಡುತ್ತೇನೆ ಎನ್ನುತ್ತಿದ್ದಾರೆ. ಮೊದಲು ಬಿಜೆಪಿಯವರು ಅವರ ಜನರನ್ನು ಸರಿಮಾಡಿಕೊಳ್ಳಲಿ. ಸಂಸದ ಕಾಗೇರಿ ಅವರು ಹಿರಿಯರು, ಜವಾಬ್ದಾರಿ ಸ್ಥಾನದಲ್ಲಿದ್ದವರು. ಅಂಥವರು ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ.
ನದಿ ಜೋಡಣೆಯಲ್ಲಿ ಶೇ.90 ರಷ್ಟು ಪಾಲು ಕೇಂದ್ರದ್ದು. ಅದನ್ನು ಅವರು ನಿಲ್ಲಿಸಲಿ. ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಇನ್ನೂ ಪರಿಸರ ಅನುಮತಿ ಸಿಕ್ಕಿಲ್ಲ. ಅದಕ್ಕೆ ಅವರು ತಡೆಯಲಿ. ಆಗ ಯೋಜನೆ ಜಾರಿಯಾಗುವುದಿಲ್ಲ. ಅದರ ಬದಲು ಬಾಯಿ ಇದೆ ಎಂದು ಹೇಳಿಕೆ ನೀಡುವ ಬದಲು ತಪ್ಪು ಒಪ್ಪಿ ಏನು ಮಾಡಬೇಕು ಎಂದು ಹೇಳಲಿ ಒಟ್ಟಿಗೇ ಸೇರಿ ಯೋಜನೆ ನಿಲ್ಲಿಸಲು ಕೆಲಸ ಮಾಡೋಣ ಎಂದರು.
ಮಾರ್ಚ್ ಒಳಗೆ ಪರಿಹಾರ
ಅಂಕೊಲಾ ಏರ್‌ಪೋರ್ಟ್ ನಿರ್ಮಾಣಕ್ಕೆ ಮಾರ್ಚ್ ಒಳಗೆ ಪರಿಹಾರ ನೀಡಿ ಮುಂದಿನ ಪ್ರಕ್ರಿಯೆ ಪ್ರಾರಂಭಿಸಲಿದ್ದೇವೆ.