ಸಾಂದರ್ಭಿಕ ಚಿತ್ರ  
ಉತ್ತರ ಕನ್ನಡ

ಆನ್‌ಲೈನ್‌ ವಂಚನೆ ವಿಳಂಬ ಮಾಡಿದ್ದಕ್ಕೆ ಬ್ಯಾಂಕ್‌ಗೆ ದಂಡ

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರೀಕೃತ ಬ್ಯಾಂಕ್‌ ಮ್ಯಾನೇಜರ್‌ಗಳಿಗೆ ದಂಡ ವಿಧಿಸಿ ಗ್ರಾಹಕರ ಆಯೋಗ ಆದೇಶ
  • ಕಳೆದುಹೋದ ಹಣವನ್ನು ಮರುಪಾವತಿ ಮಾಡುವಂತೆ ಆದೇಶ
ಕಾರವಾರ: ಆನ್‌ಲೈನ್ ವಂಚನೆ ಪ್ರಕರಣದಲ್ಲಿ ಗ್ರಾಹಕರೊಬ್ಬರು ಕಳೆದುಕೊಂಡ ಹಣವನ್ನು ಬ್ಯಾಂಕ್ ಮ್ಯಾನೇಜರ್‌ಗಳು ಬಡ್ಡಿಯೊಂದಿಗೆ ಹಿಂತಿರುಗಿಸಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಮಹತ್ವದ ತೀರ್ಪು ನೀಡಿದೆ.
ಭಟ್ಕಳ ಬೆಳಕೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಒಂದರಲ್ಲಿ ಒಡಿ ಖಾತೆ ಹೊಂದಿದ್ದ ಉದ್ಯಮಿಯೊಬ್ಬರಿಗೆ 2025 ರ ಫೆಬ್ರವರಿ 9 ರ ಬೆಳಗ್ಗೆ ಶಾಕ್ ಕಾದಿತ್ತು. ಅವರ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗುತ್ತಿರುವ ಬಗ್ಗೆ ಮೊಬೈಲ್ ಸಂದೇಶಗಳು ಬರಲಾರಂಭಿಸಿದ್ದವು. ತಕ್ಷಣ ಅವರು ತಮ್ಮ ಬ್ಯಾಂಕ್ ಬ್ರಾಂಚ್‌ಗೆ, ಕೇಂದ್ರ ಕಚೇರಿಗೆ ಮತ್ತು ಕಾರವಾರ ರೀಜನಲ್ ಕಚೇರಿಗೆ ಹಾಗೂ ಸೈಬರ್ ಅಪರಾಧಗಳ ಸಹಾಯವಾಗಿ 1930 ಗೆ ಕರೆ ಮಾಡಿ ದೂರು ನೀಡಿದ್ದರು. ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಿ, ಕಡಿತವಾದ ಹಣವನ್ನು ಮಧ್ಯವರ್ತಿ ಬ್ಯಾಂಕ್‌ನಿಂದ ಹಿಂಪಡೆದುಕೊಡುವಂತೆ ಮನವಿ ಮಾಡಿದ್ದರು. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೂ ಅದೇ ದಿನ ದೂರು ನೀಡಿದ್ದರು. ಆದರೂ. ಅವರ ಖಾತೆಯಿಂದ 20.21 ಲಕ್ಷ ರೂ. ಕಡಿತವಾಗಿತ್ತು.
ಬ್ಯಾಂಕ್ ತನ್ನ ಖಾತೆಯ ಹಣ ಭದ್ರ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದೆ. ತಾನು ಹಣ ಕಳುವಾದ 9 ರಂದೇ ದೂರು ನೀಡಿದ್ದರೂ. ನನ್ನ ಹಣವನ್ನು ಮರಳಿ ಪಡೆಯುವ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಕ್ರಮ ವಹಿಸಿಲ್ಲ. ಸಂಬಂಧಪಟ್ಟ ಮಧ್ಯವರ್ತಿ ಬ್ಯಾಂಕ್‌ಗೆ ಫೆ. 12 ರಂದು ಸಂದೇಶ ಕಳಿಸಿದೆ. ಆದರೆ, ಅಷ್ಟು ಹೊತ್ತಿಗಾಗಲೇ ಹಣವನ್ನು ವಂಚಕ ಹರಿಯಾಣದ ದೀಪಕ್ ಕುಮಾರ್ ಎಂಬಾತ ಬೇರೆಡೆ ಹಸ್ತಾಂತರಿಸಿಯಾಗಿತ್ತು ಎಂದು ಗ್ರಾಹಕರು ಆಕ್ಷೇಪಿಸಿದ್ದರು. ಈ ಬಗ್ಗೆ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದು, ಸೈಬರ್ ವಂಚನೆಯಿಂದ ತಾವು ಕಳೆದುಕೊಂಡ ಹಣವನ್ನು ಬ್ಯಾಂಕ್‌ನಿಂದಲೇ ವಾಪಸ್ ಕೊಡಿಸಬೇಕು ಮತ್ತು ಪರಿಹಾರ ಕೊಡಿಸಬೇಕು ಎಂದು ಮನವಿ ಮಾಡಿದ್ದರು.

ಜಿಲ್ಲಾ ಗ್ರಾಹಕರ ಪರಿಹಾರ ಆಯೋಗದ ಚೇರ್ಮನ್‌ ಮಾರುತಿ ವಡ್ಡರ್ ಮತ್ತು ಸದಸ್ಯೆ ನಯನಾ ಕಾಮಟೆ ಅವರು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ತೀರ್ಪು ನೀಡಿದ್ದಾರೆ. ಗ್ರಾಹಕ ಕಳೆದುಕೊಂಡ 20.21 ಲಕ್ಷ ರೂ.ಗಳನ್ನು ಶಿರಾಲಿ ಬ್ಯಾಂಕ್ ಮ್ಯಾನೇಜರ್ ಹಾಗೂ ಕಾರವಾರ ರೀಜನಲ್ ಮ್ಯಾನೇಜರ್ ಜಂಟಿಯಾಗಿ ಶೇ.8 ರ ಬಡ್ಡಿಯೊಂದಿಗೆ ನೀಡಬೇಕು ಎಂದಿದ್ದಾರೆ. ಮಾತ್ರವಲ್ಲದೇ ಗ್ರಾಹಕ ಮಾನಸಿಕ ಕಿರುಕುಳ ಅನುಭವಿಸಿದ್ದಕ್ಕೆ ಅವರಿಗೆ 25 ಸಾವಿರ ಮತ್ತು ವ್ಯಾಜ್ಯದ ವೆಚ್ಚವಾಗಿ 10 ಸಾವಿರ ಸೇರಿ ಒಟ್ಟು 35 ಸಾವಿರ ರೂ. ಪರಿಹಾರ ನೀಡಬೇಕು ಎಂದು ಆದೇಶಿಸಿದ್ದಾರೆ.

ಬ್ಯಾಂಕ್ ಕೂಡ ಜವಾಬ್ದಾರ

ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯ ಇಂಟರ್‌ನೆಟ್ ಬ್ಯಾಂಕಿಂಗ್‌ನ ಯೂಸರ್ ನೇಮ್ ಹಾಗೂ ಪಾಸ್‌ವರ್ಡ್ನ್ನು ಸ್ವತಃ ರಚಿಸಿಕೊಂಡಿದ್ದರು. ವಂಚನೆ ನಡೆಯುವ ಎರಡು ದಿನ ಮುಂಚಿತವಾಗಿ ಅವರು ಇಂಟರ್‌ನೆಟ್ ಬ್ಯಾಂಕಿಂಗ್‌ನ ಯೂಸರ್‌ನೇಮ್ ಹಾಗೂ ಪಾಸ್‌ವರ್ಡ್ ಎರಡನ್ನೂ ಬದಲಾಯಿಸಿದ್ದರು. ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಒಟಿಪಿ ಬಳಸಿ ಅಧಿಕೃತ ವಹಿವಾಟೇ ನಡೆದಿದದೆ ಎಂದು ಬ್ಯಾಂಕ್‌ನ ಇಂಟರ್‌ನೆಟ್ ಬ್ಯಾಂಕಿಂಗ್‌ನ ಯುಇಬಿಟಿ ವಿಭಾಗ ತಿಳಿಸಿದೆ. ಬ್ಯಾಂಕ್ ಖಾತೆ ಹ್ಯಾಕ್ ಅಥವಾ ಪಾಸ್‌ವರ್ಡ್ ಸೋರಿಕೆ ಮುಂತಾದ ಯಾವುದೇ ನಿರ್ಲಕ್ಷ್ಯ ಬ್ಯಾಂಕ್‌ನಿಂದ ನಡೆದಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ಆಯೋಗದ ಎದುರು ವಾದ ಮಂಡಿಸಿದ್ದರು.
ಆದರೆ, ಅಧಿಕಾರಿಗಳ ವಾದ ಒಪ್ಪದ ಆಯೋಗವು, ಬ್ಯಾಂಕ್ ಅಧಿಕಾರಿಗಳಿಂದ ಮೊದಲು ಯಾವುದೇ ತಪ್ಪು ನಡೆದಿಲ್ಲ. ಆದರೆ, ವಂಚನೆಯಾದ ಬಗ್ಗೆ ಗ್ರಾಹಕ ದೂರು ನೀಡಿದ ತಕ್ಷಣ ಬ್ಯಾಂಕ್ ಅಧಿಕಾರಿಗಳು ಕ್ರಮ ವಹಿಸಬಹುದಿತ್ತು. ಖಾತೆ ಫ್ರೀಜ್ ಮಾಡಿ, ಮಧ್ಯವರ್ತಿ ಬ್ಯಾಂಕ್‌ನಿಂದ ಹಣವನ್ನು ವಾಪಸ್ ಪಡೆಯಲು ಅವಕಾಶವಿತ್ತು. ಆ ವಿಳಂಬಕ್ಕೆ ಬ್ಯಾಂಕ್ ಅಧಿಕಾರಿಗಳೇ ಜವಾಬ್ದಾರರು ಎಂದು ಅಭಿಪ್ರಾಯಪಟ್ಟಿದೆ.