ಶಿರಸಿ ನಗರದ ನ್ಯೂ ಕೆಎಚ್‌ಬಿ ಕಾಲನಿಯಲ್ಲಿ ಕೊಲೆಯಾದ ಡಾ. ರಮೇಶ ಕಲ್ಗುಟ್ಕರ್ 
ಉತ್ತರ ಕನ್ನಡ

murder: ಹಸೆಮಣೆ ಏರಬೇಕಿದ್ದ ವೈದ್ಯನ ಹತ್ಯೆ!

ಶಿರಸಿ: ಒಂದು ದಿನ ಕಳೆದರೆ ಹಸೆಮಣೆ ಏರಿ ಮದುವೆ ಮಾಡಿಕೊಳ್ಳಬೇಕಿದ್ದ ಆಯುರ್ವೇದ ವೈದ್ಯರೊಬ್ಬರು ನಿಗೂಢವಾಗಿ ಕೊಲೆಯಾದ (murder) ಘಟನೆ ನಗರದ ನಗರದ ಕೆಎಚ್‌ಬಿ ಕಾಲನಿಯಲ್ಲಿ ಭಾನುವಾರ ಬೆಳಕಿಗೆ ಬಂದಿದೆ.
ನಗರದ ನ್ಯೂ ಕೆಎಚ್‌ಬಿ ಕಾಲನಿಯ 9ನೇ ಕ್ರಾಸ್ ಎರಡನೇ ಮುಖ್ಯ ರಸ್ತೆ ನಿವಾಸಿ ಡಾ.ರಮೇಶ ಕಲಘುಟಕರ್(51 ) ಕೊಲೆಯಾದ ದುರ್ದೈವಿ. ಮಾರಕಾಸತ್ರದಿಂದ ತಲೆಗೆ ಹೊಡೆದು ವೈದ್ಯನನ್ನು ಕೊಲೆ ಮಾಡಲಾಗಿದೆ. ಸೋಮವಾರ ಅವರ ಎರಡನೇ ಮದುವೆ ನಡೆಯಬೇಕಿತ್ತು. ಅದಕ್ಕಾಗಿ ಸಿದ್ಧತೆಗಳು ನಡೆದಿದ್ದವು. ಆದರೆ, ಹಿಂದಿನ ದಿನ ಕೊಲೆಯಾಗಿದ್ದು ಸ್ಥಳೀಯರನ್ನು ದಂಗುಬಡಿಸಿದೆ.
ಶನಿವಾರ ರಾತ್ರಿಯೇ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಭಾನುವಾರ ಸಂಜೆ ಘಟನೆ ಬೆಳಕಿಗೆ ಬಂದಿದೆ. ಒಬ್ಬರೇ ಇರುತ್ತಿದ್ದ ವೈದ್ಯರ ಮನೆಗೆ ಸಂಬಂಧಿಕರು ಬಂದು ಬಾಗಿಲು ತಟ್ಟಿದರೂ ತೆರೆದಿರಲಿಲ್ಲ. ಬಾಗಿಲು ಒಡೆದು ತೆಗೆದಾಗ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.
ಐದು ತಿಂಗಳ ಹಿಂದೆ ಪತ್ನಿ ಸಾವು: ಡಾ.ರಮೇಶ ಅವರ ಪತ್ನಿ ಐದು ತಿಂಗಳ ಹಿಂದೆ ಹೃದಯಾಘಾತದಿಂದ ಮೃತಪಟ್ಟಿದ್ದರು. ತಾಲೂಕಿನ ಮಂಜಗುಣಿಯಲ್ಲಿ ವೈದ್ಯರು ಪತ್ನಿಯ ತಂಗಿಯ ಜೊತೆಯಲ್ಲಿಯೇ ಸೋಮವಾರ ಮದುವೆ ಆಗುವವರಿದ್ದರು. ಅದಕಾರಣ ಕುಟುಂಬದವರು ಭಾನುವಾರ ಡಾ.ರಮೇಶ ಮನೆಗೆ ಭೇಟಿ ನೀಡಿದ್ದರು. ಘಟನೆ ಕುರಿತು ಪೊಲೀಸರಿಗೆ ವಿಷಯ ತಿಳಿಸಿದ ತಕ್ಷಣ ಶ್ವಾನ ದಳದೊಂದಿಗೆ ಡಿಎಸ್ಪಿ ಗೀತಾ ಪಾಟೀಲ, ಸಿಪಿಐ ಶಶಿಕಾಂತ ವರ್ಮ, ಮಾರುಕಟ್ಟೆ ಠಾಣೆ ಪಿಎಸ್‌ಐ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇನ್ನು ವೈದ್ಯರ ಒಬ್ಬ ಮಗ ಬೆಂಗಳೂರಿನಲ್ಲಿ ಹಾಗೂ ಇನ್ನೊಬ್ಬ ಉತ್ತರ ಪ್ರದೇಶದಲ್ಲಿ ವೈದ್ಯಕೀಯ ವೃತ್ತಿ ಓದುತ್ತಿದ್ದಾರೆ. ಶಿರಸಿ ಮಾರುಕಟ್ಟೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.