ಮುಂಡಗೋಡ ರೌಡಿ ಶೀಟರ್ ಮಂಜುನಾಥ ಕಾಜಗಾರಗೆ ಕಂಟ್ರಿ ಮೆಡ್ ಪಿಸ್ತೂಲ್ ನೀಡಿದ ಉತ್ತರಾಖಂಡ ಮೂಲದ ಆರೋಪಿ. 
ಉತ್ತರ ಕನ್ನಡ

ಕಾಜಗಾರಗೆ ಕಂಟ್ರಿ ಮೇಡ್ ಪಿಸ್ತೂಲ್ ಕೊಟ್ಟವ ಅಂದರ್

ಪ್ರಮುಖ ಮುಖ್ಯಾಂಶಗಳು

  • ಮುಂಡಗೋಡದಲ್ಲಿ ರೌಡಿ ಶೀಟರ್ ಜಮೀರ್ ದರ್ಗವಾಲೆ ಕೊಲೆ ಪ್ರಕರಣ
ಮುಂಡಗೋಡ: ಪಟ್ಟಣದ ಬಸ್ ನಿಲ್ದಾಣದ ಎದುರಿನ ಹೋಟೆಲ್‌ನಲ್ಲಿ ನಡೆದ ಭೀಕರ ಕೊಲೆ ಮಾಡಿದ ಆರೋಪಿಗಳಿಗೆ ಕಂಟ್ರಿ ಮೇಡ್ ಪಿಸ್ತೂಲ್ ನೀಡಿದ ದೆಹಲಿ ಮೂಲದ ಆರೋಪಿಯನ್ನು ಸಿಪಿಐ ರಂಗನಾಥ ನೀಲಮ್ಮನವರ ತಂಡ ಬುಧವಾರ ಉತ್ತರಾಖಂಡಗೆ ತೆರಳಿ ಬಂಧಿಸಿ ಕರೆ ತಂದು ವಿಚಾರಣೆ ನಡೆಸಿದ್ದಾರೆ.
ಏ. 24ರಂದು ರೌಡಿ ಶೀಟರ್ ಜಮೀರ್ ದರ್ಗವಾಲೆ ಎಂಬಾತನ ಮೇಲೆ ರೌಡಿ ಶೀಟರ್ ಮಂಜುನಾಥ ಕಾಜಗಾರ ಎಂಬಾತ ಸೇರಿ ತಂಡದ ನಾಲ್ವರು ಯುವಕರು ದಾಳಿ ನಡೆಸಿ ಭೀಕರವಾಗಿ ಹತ್ಯೆ ಮಾಡಿದ್ದರು. ಹತ್ಯೆ ವೇಳೆ ಜಮೀರ್ ಮೇಲೆ ಪಿಸ್ತೂಲ್‌ನಿಂದ ಎರಡು ಬಾರಿ ಗುಂಡು ಹಾರಿಸಿದ್ದಾರೆ. ಆದರೆ, ಕಂಟ್ರಿ ಮೇಡ್ ಪಿಸ್ತೂಲ್ ಆದ ಕಾರಣ ಸರಿಯಾಗಿ ಗುರಿ ತಲುಪಿಲ್ಲ. ನಂತರ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದರು.
ಎರಡು ಪಿಸ್ತೂಲ್ ವಶಕ್ಕೆ:  ಏ. 25ರಂದು ಬೆಳಗ್ಗೆ ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಪೊಲೀಸರು ನೆಲಮಂಗಲ ಟೋಲ್ ಗೇಟ್‌ನಲ್ಲಿ ಕೊಲೆ ಮಾಡಿ ಬೆಂಗಳೂರು ನಗರದೊಳಗೆ ಹೋಗುತ್ತಿದ್ದ ಆರೋಪಿಗಳನ್ನು ಲಾಕ್ ಮಾಡಿ ನಂತರ ಮುಂಡಗೋಡ ಪೊಲೀಸರಿಗೆ ಹಸ್ತಾಂತರಿಸಿದರು. ಈ ವೇಳೆ ಆರೋಪಿಗಳ ಬಳಿ ಎರಡು ಕಂಟ್ರಿ ಮೆಡ್ ಪಿಸ್ತೂಲ್‌ಗಳು ಪತ್ತೆಯಾಗಿದ್ದವು.
ಇದೀಗ ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ ಹಾಗೂ ಸಿಪಿಐ ರಂಗನಾಥ ನೀಲಮ್ಮನವರ ತಂಡದವರು ಪಿಸ್ತೂಲ್ ಎಲ್ಲಿಂದ ಖರೀದಿ ಮಾಡಿದ್ದೀರಿ ಎಂದು ವಿಚಾರಣೆ ನಡೆಸಿದಾಗ ಆರೋಪಿಗಳು ಉತ್ತರಾಖಂಡ ಮೂಲದ ವ್ಯಕ್ತಿಯೊಬ್ಬ ನಮಗೆ ಪಿಸ್ತೂಲ್ ನೀಡಿದ್ದಾನೆ ಎಂದು ಮಾಹಿತಿ ನೀಡಿದ ಬೆನ್ನಲ್ಲೇ ಸಿಪಿಐ ರಂಗನಾಥ ನೀಲಮ್ಮನವರ ಹಾಗೂ ತಂಡದವರು ಬುಧವಾರ ಉತ್ತರಾಖಂಡಗೆ ತೆರಳಿ ಪಿಸ್ತೂಲ್ ನೀಡಿದ ಆರೋಪಿ ದಿಲ್ ರಾಜ್ ದ್ಯಾನಿ ಮದನಮೋಹನ ದ್ಯಾನಿ (32) ನೈನಿತಾಲ್ ರಾಮನಗರ ಎಂಬುವವನ್ನು ಬಂಧಿಸಿ ಕರೆ ತಂದು ವಿಚಾರಣೆ ನಡೆಸಿದ್ದಾರೆ.
ಎಷ್ಟು ಪಿಸ್ತೂಲ್ ನೀಡಿದ್ದಾನೆ: ಉತ್ತರಾಖಂಡ ವ್ಯಕ್ತಿ ಮುಂಡಗೋಡ ಸೇರಿದಂತೆ ಅಕ್ಕಪಕ್ಕದ ತಾಲೂಕುಗಳಲ್ಲಿ ಎಷ್ಟು ಜನ ಪುಡಿ ರೌಡಿಗಳಿಗೆ ಪಿಸ್ತೂಲ್ ನೀಡಿದ್ದಾನೆ ಎಂಬ ಸತ್ಯ ಪೊಲೀಸ್ ತನಿಖೆಯಿಂದ ಹೊರ ಬೀಳಬೇಕಿದೆ. ಅಕ್ರಮವಾಗಿ ಪಿಸ್ತೂಲ್ ಹೊಂದಿರುವ ಆರೋಪಿಗಳನ್ನು ಪತ್ತೆ ಹಚ್ಚಿ ಕಂಬಿ ಹಿಂದೆ ಕಳುಹಿಸುವ ಕೆಲಸವನ್ನು ಪೊಲೀಸರು ಸಮರ್ಪಕವಾಗಿ ಮಾಡಬೇಕಿದೆ.