ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಕಾರವಾರ: ಬೇಡ್ತಿ-ಹಿರೇವಡ್ಡತ್ತಿ, ಅಘನಾಶಿನಿ-ವೇದಾವತಿ ನದಿಗಳ ಜೋಡಣೆ ಯೋಜನೆಯನ್ನು ಕೈಬಿಡುವಂತೆ ಬೇಡ್ತಿ, ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ನಿಯೋಗವು ಸಚಿವ ಮಂಕಾಳ ವೈದ್ಯ ಹಾಗೂ ಎಲ್ಲ ಶಾಸಕರ ನೇತೃತ್ವದಲ್ಲಿ ಪಕ್ಷಾತೀತವಾಗಿ ರಾಜ್ಯ ಜಲ ಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಒತ್ತಾಯಿಸಿದೆ. ಬೆಂಗಳೂರಿನಲ್ಲಿ ಸೋಮವಾರ ಡಿಸಿಎಂ ಅವರನ್ನು ಭೇಟಿಯಾಗಿ ಈ ಸಂಬಂಧ ಚರ್ಚೆ ನಡೆಸಿತು.
ಎರಡು ಯೋಜನೆಗಳಿಗೆ ಸಂಬಂಧಪಟ್ಟಂತೆ ಪ್ರಿ-ಫಿಸಿಬಲಿಟಿ ವರದಿ ಈಗಾಗಲೇ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಯೋಜನೆಯನ್ನು ಹಮ್ಮಿಕೊಳ್ಳುವಾಗ ಅಣೆಕಟ್ಟುಗಳು, ವ್ಯಾಪಕ ಕಾಲುವೆ ಜಾಲಗಳು, ಸುರಂಗ ಮಾರ್ಗಗಳು, ಪೈಪ್ ಲೈನ್‌ಗಳು, ಪಂಪ್ ಹೌಸ್‌ಗಳು, ವಿದ್ಯುತ್ ಪ್ರಸರಣ ಮಾರ್ಗಗಳು ಮತ್ತು ಸೇವಾ ರಸ್ತೆಗಳನ್ನು ನಿರ್ಮಿಸಬೇಕಾಗುತ್ತದೆ.
ಇಂಥಹ ದೊಡ್ಡ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗೆ ಇಲ್ಲಿನ ಗುಡ್ಡಗಳನ್ನು ಕತ್ತರಿಸಬೇಕಾಗುತ್ತದೆ ಮತ್ತು ಅರಣ್ಯ ನಾಶ ಮಾಡಬೇಕಾಗುತ್ತದೆ. ಇದರಿಂದ ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ಗಂಭೀರವಾಗಿ ಹಾನಿಯಾಗಿ, ದೀರ್ಘಕಾಲೀನ ಅಪಾಯಗಳು ಸಂಭವಿಸುತ್ತವೆ ಎಂದು ತಜ್ಞರು ತಿಳಿಸಿದ್ದಾರೆ.
ಇದರಿಂದ ಜಿಲ್ಲೆಯಾದ್ಯಂತ 8 ತಿಂಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಜನಪ್ರತಿನಿಧಿಗಳು, ಮಠಾಧೀಶರು, ವಿವಿಧ ಸಂಘ, ಸಂಸ್ಥೆಗಳು, ಗ್ರಾಮ ಪಂಚಾಯಿತಿಗಳು, ವಿವಿಧ ಸಮಾಜದ ಮುಖಂಡರು ಸೇರಿ 25 ಸಾವಿರ ಜನರು ಶಿರಸಿಯಲ್ಲಿ ಸಮಾವೇಶ ನಡೆಸಿ, ಯೋಜನೆಯನ್ನು ವಿರೋಽಸಿದ್ದಾರೆ.
ಈ ಯೋಜನೆಯನ್ನು ಕೂಲಂಕುಶವಾಗಿ ಪರಿಶೀಲಿಸಿದಾಗ ಇವುಗಳು ಜಲಶಾಸ್ತ್ರೀಯ ದೃಷ್ಟಿಯಿಂದ ಸಮರ್ಥವಾಗಿಲ್ಲ. ಬೇಡ್ತಿ ಪ್ರದೇಶದಲ್ಲಿ ವಾರ್ಷಿಕ ಮಳೆಯ ಶೇ.70 ರಿಂದ 80 ರಷ್ಟು ಮಳೆ ಜೂನ್‌ನಿಂದ ಸೆಪ್ಟೆಂಬರ್ ಕಾಲಾವಧಿಯಲ್ಲಿ ಬೀಳುತ್ತದೆ. ಉಳಿದ ಒಂಭತ್ತು ತಿಂಗಳ ಅವಧಿಯಲ್ಲಿ ನದಿಯಲ್ಲಿ ನೀರಿನ ಹರಿವಿನ ಅಪಾರ ಕೊರತೆ ಉಂಟಾಗುತ್ತದೆ. ಇಲ್ಲಿ ನೀರು ಹೆಚ್ಚುವರಿ ಲಭ್ಯವಿದೆ ಎಂಬುದು ವಾಸ್ತವಿಕತೆಗೆ ವಿರೋಧವಾಗಿದೆ. ಕನಿಷ್ಠ ಹರಿವು ಇನ್ನಷ್ಟು ಕಡಿಮೆಯಾದರೆ, ಸ್ಥಳೀಯರಿಗೆ ನೀರಿನ ಕೊರತೆ ಉಂಟಾಗಲಿದೆ.
ಈ ಯೋಜನೆಯ ಜಾರಿಯು ಜಾಗತಿಕ ಮಾನ್ಯತೆ ಇರುವ ಜೀವ ವೈವಿಧ್ಯತೆಯ ಹಾಟ್ ಸ್ಪಾಟ್ ಪಶ್ಚಿಮ ಘಟ್ಟದ ವೈವಿಧ್ಯತೆಯ ನಾಶಕ್ಕೆ ಕಾರಣವಾಗುತ್ತದೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ವಾಸಿಸುವ ರೈತರು, ಸಣ್ಣ ಕೃಷಿಕರು, ಅರಣ್ಯಾಧಾರಿತ ಸಮುದಾಯಗಳು, ಗೌಳಿ, ಸಿದ್ದಿ, ಒಕ್ಕಲಿಗ, ಕುಣಬಿ ಮುಂತಾದ ಸಮುದಾಯಗಳು ತೊಂದರೆಗೆ ಒಳಗಾಗುತ್ತವೆ. ಕರಾವಳಿಯ ಪರಿಸರ ವ್ಯವಸ್ಥೆಗೆ ಹಾನಿಯಾಗುತ್ತದೆ. ಇದರಿಂದ ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.
ಮನವಿ ಸಲ್ಲಿಕೆಯ ನಿಯೋಗದಲ್ಲಿ ಶಾಸಕರಾದ ಶಿವರಾಮ ಹೆಬ್ಬಾರ, ಭೀಮಣ್ಣ ನಾಯ್ಕ, ದಿನಕರ ಶೆಟ್ಟಿ, ಶಾಂತಾರಾಮ ಸಿದ್ದಿ, ಬೇಡ್ತಿ, ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಸ್ವರ್ಣವಲ್ಲೀ ಮಠದ ಕಾರ್ಯಾಧ್ಯಕ್ಷ ವಿಘ್ನೇಶ್ವರ ಹೆಗಡೆ ಬೊಮ್ಮನಹಳ್ಳಿ, ವನ್ಯಜೀವಿ ತಜ್ಞ ಡಾ.ಬಾಲಚಂದ್ರ ಸಾಯಿಮನೆ, ಸಮಿತಿಯ ಸಂಚಾಲಕರಾದ ವಿಶ್ವನಾಥ ಶೀಗೇಹಳ್ಳಿ, ಗೋಪಾಲಕೃಷ್ಣ ತಂಗಾರಮನೆ, ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಸ್ಥಳೀಯ ಪ್ರಮುಖರಾದ ಅಶ್ವಿನಿ ಕುಮಾರ ಭಟ್ಟ, ವಿವೇಕ ಸುಬ್ರಾಯ ಭಟ್ಟ, ರವಿ ಹೆಗಡೆ ಇತರರು ಇದ್ದರು.