ರಸ್ತೆ ಇಕ್ಕೆಲದಲ್ಲಿ ಬೆಳೆದು ನಿಂತ ಗಿಡಗಂಟಿ
- ರಸ್ತೆ ಇಕ್ಕೆಲದಲ್ಲಿ ಬೆಳೆದು ನಿಂತ ಗಿಡಗಂಟಿ
- ಹೂಳು ತುಂಬಿರುವ ಗಟಾರ
ರಮೇಶ ಹಾರ್ಸಿಮನೆ ಸಿದ್ದಾಪುರ.
ಮಳೆಗಾಲ ಆರಂಭವಾಗಿ ಎರಡು ತಿಂಗಳಾದರೂ ತಾಲೂಕಿನ ರಾಜ್ಯ ಹೆದ್ದಾರಿ, ಗ್ರಾಮೀಣ ಮುಖ್ಯರಸ್ತೆ, ಜಿಪಂ ರಸ್ತೆ ಹಾಗೂ ಗ್ರಾಮೀಣ ರಸ್ತೆಗಳ ಇಕ್ಕೆಲಗಳಲ್ಲಿ ಬೆಳೆದು ನಿಂತ ಗಿಡಗಂಟಿಗಳ ನಿರ್ವಹಣೆ ಹಾಗೂ ಗಟಾರದಲ್ಲಿನ ಹೂಳು ಇನ್ನೂ ತೆಗೆದಿಲ್ಲ. ಇದರಿಂದ ವಾಹನ (Motorists) ಸವಾರರು ನಿತ್ಯ ನೋವು ಅನುಭವಿಸುವಂತಾಗಿದೆ.
ಮುಖ್ಯವಾಗಿ ರಸ್ತೆ ನಿರ್ವಹಣೆ ಮಾಡುತ್ತಿರುವ ಲೋಕೋಪಯೋಗಿ ಹಾಗೂ ಜಿಪಂ ಇಲಾಖೆಗಳು ತಮ್ಮ ವ್ಯಾಪ್ತಿಯ ರಸ್ತೆಗಳ ಇಕ್ಕೆಲಗಳಲ್ಲಿ ಬೆಳೆದು ನಿಂತ ಗಿಡಗಂಟಿಗಳು ಹಾಗೂ ಸಾರಿಗೆ ಬಸ್‌ಗಳಿಗೆ ತಾಗುವಂತೆ ಮೇಲ್ಮಟ್ಟದಲ್ಲಿ ಜೋತಾಡುವಂಥ ಮರದ ಟೊಂಗೆ, ಬಳ್ಳಿಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿ ಕೊಡಬೇಕು ಹಾಗೂ ಚರಂಡಿಗಳಲ್ಲಿನ ಹೂಳು ತೆಗೆದು ನೀರು ಸರಾಗವಾಗಿ ಹರಿದು ಹೋಗುವಂತೆ ಸ್ವಚ್ಛಗೊಳಿಸಬೇಕು. ಇದ್ಯಾವುದನ್ನು ಮಾಡದೇ ಇರುವುದರಿಂದ ವಾಹನ ಸವಾರರು ನಿತ್ಯ ಅಪಾಯದಲ್ಲೇ ಸಂಚರಿಸುವಂತಾಗಿದೆ.
ರಸ್ತೆ ಅಕ್ಕ ಪಕ್ಕ ಗಿಡಗಂಟಿಗಳು ಬೆಳೆದಿದ್ದರಿಂದ ರಸ್ತೆ ಪಕ್ಕ ಅಳವಡಿಸಿರುವ ನಾಮಫಲಕಗಳು, ಕಿಲೋ ಮೀಟರ್ ಕಲ್ಲುಗಳು ಕಾಣದಂತಾಗಿ ಪ್ರವಾಸಿಗರು ತೊಂದರೆ ಅನುಭವಿಸುವಂತಾಗಿದೆ. ಕೋಲಸಿರ್ಸಿ - ಹಾರ್ಸಿಕಟ್ಟಾ, ಗೋಳಿ ಮಕ್ಕಿ- ಹೆಗ್ಗರಣಿ-ಹೇರೂರು, ಗೋಳಿಮಕ್ಕಿ- ಹೇರೂರು, ಹೇರೂರು -ಕಾನಸೂರು ಮತ್ತಿತರ ರಸ್ತೆಗಳ ಪಕ್ಕದಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಅಲ್ಲದೆ, ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದ್ದರಿಂದ ರಸ್ತೆಯ ಮೇಲೆ ಮಳೆ ನೀರು ಹರಿಯುವಂತಾಗಿದೆ. ಇದರಿಂದ ಡಾಂಬರು ರಸ್ತೆಗಳು ಕಿತ್ತುಹೋಗಿ ಹೊಂಡಗಳು ಬೀಳುತ್ತಿವೆ.
ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಲಿ: ಸಾರಿಗೆ ಬಸ್ ಹಾಗೂ ದೊಡ್ಡ ವಾಹನಗಳಿಗೆ ಮರದ ಟೊಂಗೆಗಳು ತಾಗುತ್ತಿವೆ. ಅಲ್ಲದೆ, ರಸ್ತೆಗೆ ಅಡ್ಡವಾಗಿ ಯಾವುದೇ ಕ್ಷಣದಲ್ಲಿ ಬೀಳಬಹುದಾದ ಮರಗಳನ್ನು ಅರಣ್ಯ ಇಲಾಖೆ ವತಿಯಿಂದ ತೆರವುಗೊಳಿಸಬೇಕು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ವಾಹನ ಸವಾರರ ಅಂಬೋಣ.
ಈಗಾಗಲೇ ತಾಳಗುಪ್ಪ- ಖಾನಾಪುರ ರಸ್ತೆ, ಸಿದ್ದಾಪುರ- ಶಿರಸಿ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತೊಂದರೆ ಆಗದಂತೆ ನಿರ್ವಹಣೆ ಕಾರ್ಯ ಮಾಡಲಾಗಿದೆ. ಅವಶ್ಯ ಇದ್ದಲ್ಲಿ ಮತ್ತೆ ಮರಗಳ ಟೊಂಗೆ ತೆರವುಗೊಳಿಸಲಾಗುವುದು. ಈಗ ಮಳೆ ಜೋರಾಗಿ ಬೀಳುತ್ತಿರುವುದರಿಂದ ತೊಂದರೆ ಆಗುತ್ತಿದೆ. ಮರದ ಟೊಂಗೆ ಗಳು ಹಾಗೂ ರಸ್ತೆಗೆ ಅಡ್ಡವಾಗಿರುವ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಲಾಗುವುದು.
ಪೃಥ್ವಿರಾಜ್ ಎಇಇ ಲೋಕೋಪಯೋಗಿ ಇಲಾಖೆ, ಸಿದ್ದಾಪುರ.