ಗೋಕರ್ಣದ ಶ್ರೀ ರಾಮಚಂದ್ರಾಪುರ ಮಠದ ಮೂಲತಾಣ ಅಶೋಕೆಯ ಪರಿಸರದಲ್ಲಿ ಬುಧವಾರ ಏರ್ಪಡಿಸಿದ್ದ ಧರ್ಮಸಭೆಯಲ್ಲಿ 33ನೆ ಚಾತುಮಾಸ್ಯ (chaturmasya)ವ್ರತದೀಕ್ಷೆಯ ಆಮಂತ್ರಣ ಪತ್ರಿಕೆಯನ್ನು ಪೀಠಾಧಿಪತಿಗಳಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಬಿಡುಗಡೆ ಮಾಡಿದರು. ಸಂತೋಷ ಹೆಗಡೆ, ಗಣೇಶ ಜೆ.ಎಲ್., ಹರಿಪ್ರಸಾದ ಪೆರಿಯಾಪು, ಡಿ.ಡಿ.ಶರ್ಮ, ಪ್ರದೀಪ ನಾಯಕ, ಮಹೇಶ ಶೆಟ್ಟಿ, ಆರ್.ಎಸ್.ಹೆಗಡೆ ಹರಗಿ, ಮಂಜುನಾಥ ಸುವರ್ಣಗದ್ದೆ, ಚಂದನ ಶಾಸಿ ಮತ್ತಿತರ ಪ್ರಮುಖರಿದ್ದರು. 
ಉತ್ತರ ಕನ್ನಡ

ಅನ್ನಬ್ರಹ್ಮ ಚಾತುರ್ಮಾಸ್ಯಜು. 29ರಿಂದ Chaturmasya

ಪ್ರಮುಖ ಮುಖ್ಯಾಂಶಗಳು

  • ಸೆಪ್ಟೆಂಬರ್ 26ರವರೆಗೆ ವಿವಿಧ ಕಾರ್ಯಕ್ರಮ
  • ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀ ಭಾಗಿ
  • ಆಮಂತ್ರಣ ಪತ್ರಿಕೆ ಲೋಕಸಮರ್ಪಣೆ
ಗೋಕರ್ಣ: ಮನುಷ್ಯ ಒಳಗೊಂಡಂತೆ ಪ್ರಾಣ ಇರುವ ಸೃಷ್ಟಿಯ ಸಮಸ್ತ ಪ್ರಾಣಿಗಳು ಅನ್ನದ ಹಿಂದೆ ಓಡುತ್ತಾ ಅನ್ನವನ್ನೇ ಆಶ್ರಯಿಸಿವೆ. ಇದರಿಂದಾಗಿ ‘ಅನ್ನಗತ ಪ್ರಾಣಾಃ’ ಎಂಬುದಾಗಿ ಚರಕ ಸಂಹಿತೆ ಉಲ್ಲೇಖಿಸಿದೆ.
ಸಕಲ ಪ್ರಾಣಿಗಳ ಪ್ರಾಣವಾದ ಅನ್ನವೇ ಬ್ರಹ್ಮ ಎಂಬ ವೈದಿಕ ಪ್ರಯೋಗದ ಸುಜ್ಞಾನ ಪ್ರಕಾಶವನ್ನು ಸರ್ವರಲ್ಲಿ, ಸರ್ವತ್ರ ಪಸರಿಸುವ ಉದ್ದೇಶದಿಂದ ಈ ವರ್ಷದ 33ನೇ ಚಾತುರ್ಮಾಸ್ಯವನ್ನು (Chaturmasya) ‘ಅನ್ನಬ್ರಹ್ಮ ಚಾತುರ್ಮಾಸ್ಯ’ ಎಂಬ ಹೆಸರಿನಿಂದ ಆಚರಿಸಲಾಗುವುದು ಎಂದು ಶ್ರೀ ರಾಮಚಂದ್ರಾಪುರ ಮಠದ ಪೀಠಾಧಿಪತಿಗಳಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಇಲ್ಲಿನ ಅಶೋಕೆಯ ಮೂಲಮಠ ಪರಿಸರದಲ್ಲಿ ಬುಧವಾರ ಆಯೋಜಿಸಿದ್ದ ಧರ್ಮಸಭೆಯಲ್ಲಿ ಈ ವರ್ಷ ಆಷಾಢ ಪೌರ್ಣಿಮೆ ಜುಲೈ 29ರಿಂದ ಭಾದ್ರಪದ ಪೌರ್ಣಿಮೆ ಸೆಪ್ಟೆಂಬರ್ 26ರವರೆಗೆ ನಡೆಯಲಿರುವ 33ನೇಚಾತುರ್ಮಾಸ್ಯದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ, ಸರ್ವರನ್ನು ಅನುಗ್ರಹಿಸಿದರು.

ಅನ್ನಂ ಬ್ರಹ್ಮೇತಿ ವ್ಯಜನಾತ್

ಅನ್ನವೇ ದೇವರು. ಅನ್ನವೇ ಬ್ರಹ್ಮ ಎಂಬ ಸುಜ್ಞಾನದ ಅರಿವಾಗಲಿ ಎನ್ನುವುದೇ ಈ ಚಾತುರ್ಮಾಸ್ಯದ ಧ್ಯೇಯವಚನ.
ಅನ್ನವೇ ಬ್ರಹ್ಮ ಎಂಬ ಸುಜ್ಞಾನವನ್ನು ಭೃಗು ಮಹರ್ಷಿಗಳು ತಮ್ಮ ತಪಸ್ಸಿನಿಂದ ಮೊಟ್ಟ ಮೊದಲ ಬಾರಿಗೆ ವಿಶ್ವದಲ್ಲಿ ಸ್ಫುರಿಸಲು ಕಾರಣರಾದರು. ನಾವು ಸೇವಿಸುವ ಅನ್ನ ಹೇಗೆ ಬ್ರಹ್ಮತ್ವ ಪಡೆಯ ಬಲ್ಲದು.
ಹೇಗೆ ಇಹಕ್ಕೆ ಮಾತ್ರವಲ್ಲ, ಪರ ಮತ್ತು ಮುಕ್ತಿಗೂ ಸಾಧನ ಆಗಬಲ್ಲದು ಎನ್ನುವುದರ ಅರಿವಿನ ಜಾಗೃತಿಯೇ ಈ ಅನ್ನಬ್ರಹ್ಮ ಚಾತುರ್ಮಾಸ್ಯದ ಪ್ರಧಾನ ಆಚರಣೆಯಾಗಿದೆ ಎಂದರು.

ಸರ್ವೇ ಅನ್ನಂ ಪ್ರತಿಷ್ಠಿತಮ್

ನಮ್ಮ ಜೀವನ, ತುಷ್ಟಿ, ಪುಷ್ಟಿ, ಪ್ರತಿಭೆ, ಪ್ರಸನ್ನತೆ ಮೇಧಾಶಕ್ತಿ, ಸ್ವಸ್ವರ್ಯ ಇತ್ಯಾದಿ ಬದುಕಿನ ಎಲ್ಲ ಸುಲಕ್ಷಣಗಳು ಸರ್ವೇ ಅನ್ನಂ ಪ್ರತಿಷ್ಠಿತಂ. ಈ ಎಲ್ಲ ಸುಗುಣವೂ ಅನ್ನದಲ್ಲಿ ಪ್ರತಿಷ್ಠಾಪಿತವಾಗಿವೆ.
ಕಾರಣ ನಾವು ನಿತ್ಯ ಮಾಡುವ ಊಟ ಕೇವಲ ತುತ್ತಿನ ಚೀಲ ತುಂಬುವ ವ್ಯರ್ಥ ಕೆಲಸವಾಗಬಾರದು. ಮಾನವರನ್ನು ಹೊರತಾಗಿಸಿ ಸೃಷ್ಟಿಯ ಎಲ್ಲ ಪ್ರಾಣಿ ಯಥೋಚಿತವಾದ, ಯಥಾಕಾಲದ ಆಹಾರ ಕ್ರಮಕ್ಕೆ ಮಾತ್ರವೇ ಬದ್ಧವಾಗಿದೆ.
ಎಷ್ಟು ಹೊತ್ತಿಗೋ, ಏನನ್ನೋ ಮತ್ತು ಯಥಾಯೋಗ್ಯವಲ್ಲದ ಬೇಡಾದುದನ್ನು ಉಣ್ಣುವ ಕೆಟ್ಟ ಚಾಳಿಯ ಕಾರಣದಿಂದಾಗಿ ಇವತ್ತಿನ ಮಾನವ ಜನಾಂಗ ರೋಗ ರುಜಿನಗಳ ಭಂಡಾರವಾಗಿದೆ.
ಈ ಹಿನ್ನೆಲೆಯಲ್ಲಿ ಅನ್ನ ಅಮೃತ ಆಗಲು,ಅನ್ನ ದೇವರಾಗಲು ಮತ್ತು ಅನ್ನವೇ ಬ್ರಹ್ಮ ಆಗಲು ನಮ್ಮ ಪೂರ್ವ ಸಂಹಿತೆಗಳು ಆಹಾರ ಸೂತ್ರವನ್ನು ತಿಳಿಸಿವೆ.
ನಾವು ಸೇವಿಸುವ ಆಹಾರ ಅಥವಾ ಅನ್ನದ ಸಮಯ, ಪ್ರಮಾಣ, ವಾತಾವರಣ, ಮುಖ್ಯವಾಗಿ ಯಾವುದನ್ನು ಮೊದಲು ಮತ್ತು ಯಾವುದನ್ನು ನಂತರ ಸೇವಿಸುವ ವಿಧಾನಗಳ ಅನುಸರಣೆಯಿಂದ ಮಾತ್ರ ಊಟವೂ ನಿತ್ಯದ ತಪಸ್ಸಾಗಿ, ಅನ್ನವೂ ಬ್ರಹ್ಮವಾಗಬಲ್ಲದು.
ಈ ಸಂವತ್ಸರದ ಚಾತುರ್ಮಾಸ್ಯ ವಿವಿಧ ಗ್ರಂಥಗಳ ಮೂಲಕ ಆಹಾರ ಸೂತ್ರವನ್ನು ಪರಿಚಯಿಸಿ ಹಲವು ಪ್ರವಚನಗಳಿಂದ ಆಹಾರ ಕ್ರಮದ ದರ್ಶನವನ್ನು ಒದಗಿಸಲಿದೆ ಎಂದರು.
ಆಮಂತ್ರಣ ಪತ್ರಿಕೆ ಲೋಕಸಮರ್ಪಣೆ ಧರ್ಮಸಭೆಯಲ್ಲಿ ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತಾಧ್ಯಕ್ಷ ಜೆ.ಎಲ್. ಗಣೇಶ, ಹರಿಪ್ರಸಾದ ಪೆರಿಯಾಪು, ಪ್ರಸನ್ನಕುಮಾರ ಟಿ.ಜಿ., ಮತ್ತಿತರ ಪ್ರಮುಖರಿದ್ದರು.
ಚಾತುರ್ಮಾಸ್ಯದ ಪ್ರಧಾನ ಸಂಯೋಜಕ ಚಂದನ ಶಾಸಿ ಮತ್ತಿತರ ಸದಸ್ಯರು ನಿರ್ವಹಿಸಿದರು.