- ಹಲವು ರಾಜ್ಯಗಳಲ್ಲಿ ಮತದಾರರ ಹಕ್ಕು ಕಸಿದ ಬಿಜೆಪಿ
- ಎಸ್‌ಐಆರ್‌ಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ
ಕಾರವಾರ: ಚುನಾವಣಾ ಆಯೋಗ ನೀಡಿದ ಮಾರ್ಗಸೂಚಿಯಂತೆ ಎಸ್‌ಐಆರ್ ನಡೆಯುತ್ತಿರುವಾಗ ರಾಜ್ಯ ಬಿಜೆಪಿ ಭಯ ಪಡುತ್ತಿರುವುದೇಕೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಅಂಜಲಿ ನಿಂಬಾಳಕರ್ ಸವಾಲು ಹಾಕಿದರು.
ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆಗೆ ಸಂಬಂಧಪಟ್ಟಂತೆ ಕಾಂಗ್ರೆಸ್‌ನ ಕಲ್ಯಾಣ ಕರ್ನಾಟಕದ ಮೇಲುಸ್ತುವಾರಿಯೂ ಆಗಿರುವ ಅವರು ಸೋಮವಾರ ಕಾರವಾರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಕರ್ನಾಟಕದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಪೂರ್ಣ ಬೆಂಬಲ ನೀಡುತ್ತಿದೆ. ಬಿಎಲ್‌ಎ 2ಗಳು ಬಿಎಲ್‌ಒಗಳನ್ನು ಸಂಪರ್ಕಿಸಿ ಮತದಾರರ ಪಟ್ಟಿಯಲ್ಲಿ ಯಾರದೇ ಹೆಸರು ತಪ್ಪಿ ಹೋಗದಂತೆ ಕ್ರಮ ವಹಿಸಲಾಗುತ್ತಿದೆ. ಚುನಾವಣಾ ಆಯೋಗ ಘೋಷಿಸಿದ 11 ದಾಖಲೆಗಳಲ್ಲಿ ಒಂದಾದ ಕಾಯಂ ರಹವಾಸಿ ಪ್ರಮಾಣಪತ್ರವನ್ನು ಕಾನೂನುಬದ್ಧವಾಗಿ ನೀಡಲಾಗುತ್ತಿದೆ ಆದರೆ, ಅದಕ್ಕೆ ಬಿಜೆಪಿ ಭಯಪಡುವುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಬಿಹಾರದಲ್ಲಿ ಎಸ್‌ಐಆರ್ ಮಾಡಿ 65 ಲಕ್ಷ ಮತದಾರರನ್ನು ಹೊರಗಿಡಲಾಗಿತ್ತು. ಎರಡನೇ ಹಂತದಲ್ಲಿ 12 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಎಸ್‌ಐಆರ್ ನಡೆದಿದ್ದು, 5.57 ಕೋಟಿ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಬಿಜೆಪಿ ಸಿಬಿಐ, ಇಡಿ, ಐಟಿ ಮುಂತಾದ ಸಂಸ್ಥೆಗಳನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದೆ. ಅದರಲ್ಲಿ ಚುನಾವಣಾ ಆಯೋಗವೂ ಸೇರಿದೆ ಎಂದು ಆರೋಪಿಸಿದರು.
ಹಿಂದುಳಿದವರು, ಅಲ್ಪಸಂಖ್ಯಾತರು, ಬಡವರು ಕಾಂಗ್ರೆಸ್ ಮತದಾರರಾಗಿದ್ದಾರೆ. ಅವರ ಹೆಸರನ್ನು ಪಟ್ಟಿಯಿಂದ ಕೈಬಿಟ್ಟಲ್ಲಿ ಬಿಜೆಪಿಗೆ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರ ನಡೆದಿದೆ. ಕಾಂಗ್ರೆಸ್ ಜವಾಬ್ದಾರಿಯುತ ರಾಜಕೀಯ ಪಕ್ಷವಾಗಿ, ಸಂವಿಧಾನದಲ್ಲಿ ನಂಬಿಕೆ ಇಟ್ಟು. ಸ್ವಾಯತ್ತ ಸಂಸ್ಥೆಯಾದ ಚುನಾವಣಾ ಆಯೋಗದ ಗೌರವ ಕಾಪಾಡಲು ಬದ್ಧವಾಗಿದೆ. ಕರ್ನಾಟಕದಲ್ಲಿ ಮತದಾರರ ಹೆಸರುಗಳು ತಪ್ಪಿ ಹೋಗಬಾರದು ಎಂದರೆ ಎಲ್ಲರೂ ಎಸ್‌ಐಆರ್‌ನಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಲಾಗುತ್ತಿದೆ ಎಂದರು.
ಶಾಸಕ, ಎಸ್‌ಐಆರ್‌ನ ಉತ್ತರ ಕನ್ನಡ ಉಸ್ತುವಾರಿ ಭೀಮಣ್ಣ ನಾಯ್ಕ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.95 ಕ್ಕಿಂತ ಹೆಚ್ಚು ಮನೆಗಳಿಗೆ ಇನ್ಯುಮರೇಶನ್ ಫಾರ್ಮ್ ತಲುಪಿದ್ದು, ಶೇ.75 ರಷ್ಟು ಫಾರ್ಮ್ಗಳನ್ನು ವಾಪಸ್ ಪಡೆದು, ಆನ್‌ಲೈನ್‌ನಲ್ಲಿ ಅಳವಡಿಸಲಾಗಿದೆ. ನಾವು ಪ್ರತಿ ತಾಲೂಕಿಗೂ ಓಡಾಡಿ ಯಾವುದೇ ಅರ್ಹ ಮತದಾರರು ತಪ್ಪದಂತೆ ನೋಡಿಕೊಳ್ಳುತ್ತಿದ್ದೇವೆ. ಬಿಜೆಪಿ ಮತದಾರರ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ್ ಮಾತನಾಡಿ ಎಲ್ಲ ಮತಗಟ್ಟೆಗಳಿಗೆ ಬಿಎಲ್‌ಎ 2 ಗಳನ್ನು ನೇಮಿಸಲಾಗಿದೆ. 19 ಬ್ಲಾಕ್ ಗಳಲ್ಲಿ ಕಾರ್ಯಾಗಾರ ನಡೆಸಲಾಗಿದೆ ಎಮದರು. ಕಾಂಗ್ರೆಸ್ ಪ್ರಮುಖರಾದ ಸುಷ್ಮಾ ರಾಜಗೋಪಾಲ ರೆಡ್ಡಿ, ಆರ್.ಎಚ್.ನಾಯ್ಕ, ರಾಮಾ ಮೊಗೇರ, ಜ್ಯೋತಿ ಪಾಟೀಲ, ಗಣಪತಿ ಗೌಡ, ವಿಶ್ವ ಗೌಡ ಸುದ್ದಿಗೋಷ್ಠಿಯಲ್ಲಿದ್ದರು.