ಶಾಸಕ ಸತೀಶ ಸೈಲ್ ಫಲಾನುಭವಿಗಳಿಗೆ ಇಲೆಕಟ್ರಿಕ್ ಆಟೋ ವಿತರಿಸಿದರು.
- ಫಲಾನುಭವಿಗಳ ಪಟ್ಟಿ ಪರಿಶೀಲನೆ ಮಾಡುವಂತೆ ಸೂಚನೆ
- ಒಮ್ಮೆ ಪಡೆದವರಿಗೆ ಮತ್ತೊಮ್ಮೆ ಸೌಲಭ್ಯ ನೀಡದಿರಲು ಸೂಚನೆ
ಕಾರವಾರ: ಅರ್ಹರು ಮತ್ತು ತೀರಾ ಅಗತ್ಯವಿರುವವರಿಗೆ ಆದ್ಯತೆಯ ಮೇರೆಗೆ ಸೌಲಭ್ಯ ಒದಗಿಸಲು ಕ್ರಮ ವಹಿಸಬೇಕು.ಈ ಮೊದಲು ಸೌಲಭ್ಯ ಪಡೆದಿರುವ ಮಾಹಿತಿ ಬಂದಲ್ಲಿ ಕೊಟ್ಟ ಸಾಮಗ್ರಿಯನ್ನು ಹಿಂಪಡೆಯಲಾಗುವುದು ಎಂದು ಶಾಸಕ ಸತೀಶ ಸೈಲ್ ಎಚ್ಚರಿಸಿದರು.
ನಗರಸಭೆ ಆವರದಲ್ಲಿ ಸೋಮವಾರ ಆಯೋಜಿಸಿದ್ದ ಅಮೃತ ನಗರೋತ್ಥಾನ ಹಂತ 4 ರ ಯೋಜನೆಯಡಿ ಫಲಾನುಭವಿಗಳಿಗೆ ಇಲೆಕ್ಟ್ರಿಕ್ ಆಟೋ, ತ್ರಿಚಕ್ರ ವಾಹನ ಹಾಗೂ ಸಿಂಟೆಕ್ಸ್ ಗಳನ್ನು ವಿತರಿಸಿ ಅವರು ಮಾತನಾಡಿದರು.
ನಗರದ ಬಡ ಹಾಗೂ ಮಧ್ಯಮ ವರ್ಗದ ಜನರ ಆರ್ಥಿಕ ಸಬಲೀಕರಣ ಮತ್ತು ಮೂಲಸೌಕರ್ಯಗಳ ವೃದ್ಧಿಗಾಗಿ ಶ್ರಮಿಸಲಾಗುವುದು. ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿರುವಂತೆ ನೋಡಿಕೊಳ್ಳಬೇಕು. ಸರ್ಕಾರದಿಂದ ವಾಹನ ಪಡೆದ ಬಗ್ಗೆ ಆರ್‌ಟಿಒ ಅವರಿಂದ ಮರುಪರಿಶೀಲನೆ ಮಾಡಬೇಕು ಎಂದು ನಗರಸಭೆ ಪೌರಾಯುಕ್ತರಿಂದ ಸೂಚಿಸಿದರು.
ಎಂಎಲ್‌ಸಿ ಗಣಪತಿ ಡಿ. ಉಳ್ವೇಕರ್ ಮಾತನಾಡಿ, ಪ್ರತಿ ವರ್ಷ ಸರ್ಕಾರದ ಅನುದಾನದಲ್ಲಿ ಪ.ಜಾತಿ ಮತ್ತು ಪ.ಪಂಗಡದವರ ಅಭಿವೃದ್ಧಿಗಾಗಿ ಒಟ್ಟಾರೆ ಶಾಸಕರ ಪ್ರದೇಶಾಭಿವೃದ್ಧಿ ನಿಽಯ ಶೇ. 24.10 ಅನುಧಾನ ಹಾಗೂ ಹಿಂದುಳಿದ ವರ್ಗದವರ ಕಲ್ಯಾಣಕ್ಕಾಗಿ ಶೇ. 7.5 ಅನುದಾನವನ್ನು ಕಾಯ್ದಿರಿಸಲಾಗುತ್ತದೆ. ಈ ಕಾಯ್ದಿರಿಸಿದ ವಿಶೇಷ ಅನುದಾನದ ಅಡಿ ಇಂಥ ಸೌಲಭ್ಯ ವಿತರಿಸಲಾಗುತ್ತದೆ ಎಂದರು. ನಗರಸಭೆ ಪೌರಾಯುಕ್ತ ಜಗದೀಶ ಹುಲಿಗೆಜ್ಜಿ, ಎಇಇ ಸದಾನಂದ ಸಾಳೇಹಿತ್ತಲ್, ನಾರಾಯಣ ನಾಯಕ ಇದ್ದರು.
1.90 ಕೋಟಿ ರೂ. ಸಾಮಗ್ರಿ
ಅಮೃತ ನಗರೋತ್ಥಾನದ 4ನೇ ಹಂತದ ಯೋಜನೆಯಡಿ ಬಡ ಜನರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುವಂತೆ ತಲಾ 5.40 ಲಕ್ಷ ರೂ. ಮೌಲ್ಯದ 11 ಎಲೆಕ್ಟ್ರಿಕ್ ಆಟೋಗಳು, ಒಟ್ಟು 24 ಲಕ್ಷದ 14 ತ್ರಿಚಕ್ರ ವಾಹನಗಳು, 965 ಸಿಂಟೆಕ್ಸ್ ಟ್ಯಾಂಕ್‌ಗಳು ಸೇರಿದಂತೆ ಒಟ್ಟು 1.90 ಕೋಟಿ ರೂ ಸಾಮಗ್ರಿಗಳನ್ನು ವಿತರಿಸಲಾಯಿತು. 2025-26 ನೇ ಎಸ್.ಎಫ್.ಸಿ ಯೋಜನೆಯಡಿ ಆಶಾ ನಿಕೇತನದ ಕಿವುಡ ಹಾಗೂ ಮೂಕ ಮಕ್ಕಳ ವಸತಿ ಶಾಲೆಗೆ ಪಿಠೋಪಕರಣಗಳನ್ನು ವಿತರಿಸಿಲಾಯಿತು.