ಕಾರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂವಿಧಾನ ಪೀಠಿಕೆಯ ಶಿಲಾ ಫಲಕ ಅಳವಡಿಸಲಾಯಿತು.
ಕಾರವಾರ: ಅಂಬೇಡ್ಕರ್ ಅವರ ಈ ಸಮಾನತೆಯ ಸಂದೇಶವನ್ನು ಪ್ರತಿಯೊಬ್ಬರೂ ದೈನಂದಿನ ಚಟುವಟಿಕೆಗಳ ಎಲ್ಲ ಕ್ಷೇತ್ರಗಳಲ್ಲೂ ಅಳಡಿಸಿಕೊಂಡು, ತಮಗಿಂತ ಹಿಂದುಳಿದವರು ತಮ್ಮ ಜೊತೆಗೆ ಸಮಾನವಾಗಿ ಅಭಿವೃದ್ಧಿ ಹೊಂದಲು ಅಗತ್ಯವಿರುವ ಅವಕಾಶಗಳನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆಯಿಂದ ದೋಬಿಘಾಟ್ ರಸ್ತೆಯ ದೈವಜ್ಞ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಬಿ.ಆರ್ ಅಂಬೇಡ್ಕರ್ ರವರ 135 ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದ ಎಲ್ಲಾ ಸಮುದಾಯಗಳು, ಎಲ್ಲಾ ಕ್ಷೇತ್ರಗಳಲ್ಲೂ ಸಮಾನವಾಗಿ ಅಭಿವೃದ್ದಿ ಹೊಂದಲಿ ಎಂಬ ಉದ್ದೇಶದಿಂದ ಅಂಬೇಡ್ಕರ್ ಅವರು ಮಹಿಳೆಯರು, ಕಾರ್ಮಿಕರು, ಹಿಂದುಳಿದ ವರ್ಗದ ಜನತೆ ಸೇರಿದಂತೆ ಪ್ರತಿಯೊಬ್ಬರಿಗೂ ಸಂವಿಧಾನದ ಮೂಲಕ ಸಮಾನ ಅವಕಾಶಗಳು ದೊರೆಯುವಂತೆ ಮಾಡಿದ್ದಾರೆ ಎಂದರು.
ಅಂಕೋಲಾದ ಕೆ.ಎಲ್.ಇ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಮಂಜುನಾಥ ಇಟಗಿ ವಿಶೇಷ ಉಪನ್ಯಾಸ ನೀಡಿದರು. ಅಂಬೇಡ್ಕರ್ ಅವರು ದೇಶದ ಅರ್ಥ ವ್ಯವಸ್ಥೆಯನ್ನು ಬಲಪಡಿಸಿದ್ದಾರೆ. 32 ಪದವಿಗಳನ್ನು ಪಡೆದಿದ್ದರು ಎಂದರು.
ಜಿಪಂ ಸಿಇಒ ದಿಲೀಶ್ ಶಶಿ, ಎಸ್‌ಪಿ ದೀಪನ್ ಎಂ.ಎನ್, ಎಡಿಸಿ ಸಾಜಿದ್ ಮುಲ್ಲಾ, ಜಿಪಂ ಉಪ ಕಾರ್ಯದರ್ಶಿ ಅಲ್ಲಾಭಕ್ಷ್, ಮುಖ್ಯ ಯೋಜನಾಕಾರಿ ಸೋಮಶೇಖರ ಮೇಸ್ತ, ನಗರಸಭೆ ಪೌರಾಯುಕ್ತ ಜಗದೀಶ್ ಹುಲಿಗೆಜ್ಜಿ, ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ನಾಗರಾಜ ನಾಯ್ಕ, ಜಿಲ್ಲಾ ಸಮಾಜ ಕಲ್ಯಾಣಾಕಾರಿ ವೈ.ಕೆ.ಉಮೇಶ್, ಪ.ಜಾತಿ ಪಂಗಡದ ಮುಖಂಡರಾದ ದೀಪಕ ಕುಡಾಳಕರ್, ಎಲಿಷಾ ಎಲಕಪಾಟಿ, ನಾಗರಾಜ ತಳವಾರ ಇದ್ದರು.
ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾದ ಜಿಲ್ಲೆಯ ಅಭ್ಯರ್ಥಿಗಳನ್ನು ಸನ್ಮಾನಿಸಲಾಯಿತು.ವೇದಿಕೆ ಕಾರ್ಯಕ್ರಮದ ಪೂರ್ವದಲ್ಲಿ ಜಿಲ್ಲಾಽಕಾರಿ ಕಚೇರಿ ಆವರಣದಲ್ಲಿ, ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬುಜಗಜೀವನ ರಾಮ್ ಅವರ ಭಾವಚಿತ್ರಗಳ ಮೆರವಣಿಗೆ ನಡೆಯಿತು.