ಕಾರವಾರ: ಸರ್ಕಾರದ ಮಲತಾಯಿ ಧೋರಣೆಯಿಂದ ಅನುದಾನಿತ ಪಿಯು ಕಾಲೇಜ್‌ಗಳು ಬಳಲುತ್ತಿವೆ. ಅತ್ತ ಸರ್ಕಾರದ ಅನುದಾನವೂ ಸಿಗದೇ ಇತ್ತ ಖಾಸಗಿಯಂತೆ ಡೊನೇಶನ್ ಪಡೆಯಲಾರದೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ. ಇದರಿಂದ ವರ್ಷದಿಂದ ವರ್ಷಕ್ಕೆ ಕಾಲೇಜ್‌ಗಳ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದೆ.
ಅನುದಾನಿತ ಪಿಯು ಕಾಲೇಜ್‌ಗಳಲ್ಲಿ ಉಪನ್ಯಾಸಕರ ನಿವೃತ್ತಿಯ ನಂತರ ಮರು ನೇಮಕಾತಿಗೆ ಸರ್ಕಾರ ಅನುಮತಿಯನ್ನೇ ನೀಡುತ್ತಿಲ್ಲ. ಹೊಸ ನೇಮಕಾತಿಯಂತೂ ಇಲ್ಲವೇ ಇಲ್ಲ. ಉತ್ತರ ಕನ್ನಡದ 30 ಅನುದಾನಿತ ಪದವಿಪೂರ್ವ ಕಾಲೇಜ್‌ಗಳಲ್ಲಿ 213 ಉಪನ್ಯಾಸಕ ಹುದ್ದೆಗಳು ಮಂಜೂರಾಗಿದ್ದು, ಅವುಗಳಲ್ಲಿ 81 ಹುದ್ದೆಗಳು ಖಾಲಿ ಇವೆ. ಕಾರವಾರ ತಾಲೂಕಿನ ಗ್ರಾಮೀಣ ಭಾಗದ ನಾಲ್ಕು ಕಾಲೇಜ್‌ಗಳಲ್ಲಿ 27 ರಷ್ಟು ಹುದ್ದೆಗಳು ಖಾಲಿ ಇವೆ. ಇದರಿಂದ ಅತಿಥಿ ಉಪನ್ಯಾಸಕರಿಂದಲೇ ಕಾಲೇಜ್‌ಗಳು ನಡೆಯುವ ಪರಿಸ್ಥಿತಿ ಇದೆ. ಕೆಲವು ಕಾಲೇಜ್‌ಗಳಲ್ಲಂತೂ ಪ್ರಾಂಶುಪಾಲರಾಗಲೂ ಕಾಯಂ ಉಪನ್ಯಾಸಕರಿಲ್ಲದ ಪರಿಸ್ಥಿತಿ ಇದೆ. ಅತಿಥಿ ಉಪನ್ಯಾಸಕರಿಗೆ ಗೌರವಯುತ ವೇತನ ನೀಡುವಷ್ಟೂ ಕೆಲವು ಕಾಲೇಜ್ ಆಡಳಿತ ಮಂಡಳಿಗಳು ಸಶಕ್ತವಾಗಿಲ್ಲ. ಇದರಿಂದ ವರ್ಷದಿಂದ ವರ್ಷಕ್ಕೆ ಅನುದಾನಿತ ಕಾಲೇಜ್‌ಗಳ ಗುಣಮಟ್ಟ ಕುಸಿಯುತ್ತಿದೆ.
ತಾರತಮ್ಯವೇಕೆ..?
ಕೆಲ ದಶಕಗಳ ಹಿಂದೆ ತಾಲೂಕು ಕೇಂದ್ರಗಳಲ್ಲಿ ಮಾತ್ರ ಸರ್ಕಾರಿ ಪಿಯು ಕಾಲೇಜ್‌ಗಳಿದ್ದವು. ದೂರ ಹೋಗಿ ಕಲಿಯಲಾರದೇ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೈಸ್ಕೂಲ್ ನಂತರ ವಿದ್ಯಾಭ್ಯಾಸ ಮೊಟಕುಗೊಳಿಸುತ್ತಿದ್ದರು. ಅದನ್ನು ತಪ್ಪಿಸಲು ಊರಿನ ಹಿರಿಯರು ಯಾರಿಂದಲೋ ಭೂಮಿ ದಾನ ಪಡೆದು, ಕಷ್ಟಪಟ್ಟು ದೇಣಿಗೆ ಸಂಗ್ರಹಿಸಿ ಕಟ್ಟಡ ಕಟ್ಟಿ, ಅಽಕಾರಿಗಳ ಬಳಿ ಬೇಡಿಕೊಂಡು ಅನುಮತಿ ಪಡೆದು ಪಿಯು ಕಾಲೇಜ್‌ಗಳನ್ನು ಪ್ರಾರಂಭಿಸಿದ್ದರು. ಆ ಪಿಯು ಕಾಲೇಜ್‌ಗಳು ಸಾವಿರಾರು ಗ್ರಾಮೀಣ ಪ್ರತಿಭೆಗಳು ಅರಳಲು ಕಾರಣವಾಗಿವೆ. ಸರ್ಕಾರ ಒಂದು ಹಂತದದಲ್ಲಿ ಅವುಗಳಿಗೆ ವೇತನಾನುದಾನ ಮಂಜೂರು ಮಾಡಿತು. ಎಂದರೆ ಉಪನ್ಯಾಸಕರ ವೇತನವನ್ನು ಸರ್ಕಾರ ಭರಿಸುತ್ತಿತ್ತು. ಆದರೆ, `ವೇತನ ಹೊರತಾಗಿ ಕಟ್ಟಡ ಅಥವಾ ಇತರ ಯಾವುದೇ ಮೂಲ ಸೌಕರ್ಯಕ್ಕೂ ಸರ್ಕಾರ ಅನುದಾನ ನೀಡದು. ವೇತನಾನುದಾನಕ್ಕೂ ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಕೊಕ್ಕೆ ಹಾಕಿದೆ. 13 ವರ್ಷಗಳಿಂದ ಅನುದಾನಿತ ಕಾಲೇಜ್‌ಗಳಿಗೆ ಹೊಸ ನೇಮಕಾತಿಗೆ ಅನುಮತಿಯನ್ನೇ ನೀಡಿಲ್ಲ. ನೀವು ದೇಣಿಗೆ ಪಡೆದು ನಡೆಸಿ ಎಂಬ ಉತ್ತರ ಬರುತ್ತಿದೆ. ಎಷ್ಟೆಂದು ದೇಣಿಗೆ ಸಂಗ್ರಹಿಸೋಣ...?ಡೊನೇಶನ್ ಪಡೆಯಲು ಕಾನೂನಿನ ಅಡ್ಡಿ ಬರುತ್ತದೆ.ಅಲ್ಲಿ ಕಲಿತಂತೆ ಇಲ್ಲಿಯೂ ವಿದ್ಯಾರ್ಥಿಗಳು ಕಲಿಯುತ್ತಾರೆ. ಸರ್ಕಾರ ತಾರತಮ್ಯ ಮಾಡುವುದೇಕೆ..?' ಎಂದು ಅನುದಾನಿತ ಪಿಯು ಕಾಲೇಜ್ ಒಂದರ ಆಡಳಿತ ಮಂಡಳಿ ಅಧ್ಯಕ್ಷರು ಅಲವತ್ತುಕೊಂಡರು.
ಫಲಿತಾಂಶ ಕುಸಿತ:
ಕಳೆದ ಏಪ್ರಿಲ್‌ನಲ್ಲಿ ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಯ ಖಾಸಗಿ ಹಾಗೂ ಸರ್ಕಾರಿ ಕಾಲೇಜ್‌ಗಳಿಗಿಂತ ಅನುದಾನಿತ ಪಿಯು ಕಾಲೇಜ್‌ಗಳ ಫಲಿತಾಂಶ ಕಡಿಮೆಯಾಗಿದೆ. ಸರ್ಕಾರಿ ಕಾಲೇಜ್‌ಗಳ ಫಲಿತಾಂಶ ಶೇ.91.2 ರಷ್ಟಾಗಿದ್ದರೆ, ಖಾಸಗಿ ಕಾಲೇಜ್‌ಗಳಲ್ಲಿ ಶೇ. 96.6 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆದರೆ, ಅನುದಾನಿತ ಪಿಯು ಕಾಲೇಜ್‌ಗಳ ಫಲಿತಾಂಶ ಶೇ. 88.5 ರಷ್ಟಾಗಿದೆ.
ಪದವಿ ಕಾಲೇಜ್‌ಗಳಲ್ಲಿದ್ದ ಪದವಿಪೂರ್ವ ವಿಭಾಗಗಳನ್ನು 2001 ರಲ್ಲಿ ಸರ್ಕಾರದ ನೀತಿಯಂತೆ ಬೇರ್ಪಡಿಸಲಾಯಿತು. ಅವುಗಳನ್ನು ಅನುದಾನಿತ ಬೇರ್ಪಟ್ಟ ಪದವಿಪೂರ್ವ ಕಾಲೇಜ್‌ಗಳು ಎಂದು ಗುರುತಿಸಲಾಗಿದೆ. ಆದರೆ, ಹೆಸರಿಗೆ ಮಾತ್ರ. ಅಂಥ ಕಾಲೇಜ್‌ಗಳಿಗೆ ಹೊಸ ಉಪನ್ಯಾಸಕ ಹುದ್ದೆಗಳನ್ನೇ ಸೃಜಿಸಿಲ್ಲ. ಕೆಲವು ಕಾಲೇಜ್‌ಗಳಿಗೆ ಪದವಿ ವಿಭಾಗಗಳಿಂದ ಬಂದ ಉಪನ್ಯಾಸಕರಿದ್ದರೆ ಇನ್ನು ಕೆಲವು ಕಾಲೇಜ್‌ಗಳಲ್ಲಿ ಒಂದು ಹುದ್ದೆಯೂ ಇಲ್ಲ. ಜಿಲ್ಲೆಯ 30 ಅನುದಾನಿತ ಪಪೂ ಕಾಲೇಜ್‌ಗಳ ಪೈಕಿ 9 ಪದವಿ ಕಲೇಜ್‌ಗಳಿಂದ ಬೇರ್ಪಟ್ಟ ಪದವಿಪೂರ್ವ ಕಾಲೇಜ್‌ಗಳಾಗಿವೆ. ಹೆಚ್ಚಿನ ಕಾಲೇಜ್‌ಗಳಲ್ಲಿ ಅನುದಾನಕ್ಕೊಳಪಟ್ಟ ಒಂದು ಉಪನ್ಯಾಸಕ ಹುದ್ದೆಯೂ ಇಲ್ಲ. 20 ವರ್ಷ ಅನುಭವ ಇರುವ ಉಪನ್ಯಾಸಕರು ಇನ್ನೂ 20 ಸಾವಿರಕ್ಕಿಂತ ಕಡಿಮೆ ವೇತನ ಪಡೆಯುತ್ತಿದ್ದಾರೆ.
ಕಾರ್ಯಭಾರದ ಗೋಳು
ಪಿಯು ಉಪನ್ಯಾಸಕರಿಗೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕಾರ್ಯಭಾರವನ್ನು ನಿಗದಿ ಮಾಡಲಾಗಿದೆ. ವಾರಕ್ಕೆ ಕನಿಷ್ಠ 20 ತಾಸು ಪಾಠ ಮಾಡಬೇಕು ಎಂಬ ನಿಯಮವಿದೆ. ಗ್ರಾಮೀಣ ಭಾಗದ ಕಾಲೇಜ್‌ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುತ್ತದೆ. ಕಾರ್ಯಭಾರ ಇಲ್ಲದ ಕಾರಣ ನೀಡಿ ಎರಡು, ಮೂರು ಕಾಲೇಜ್‌ಗಳಿಗೆ ಉಪನ್ಯಾಸಕರನ್ನು ನಿಯೋಜಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಅನುದಾನಿತ ಪಿಯು ಕಾಲೇಜ್‌ಗಳಿಗೆ ನಿವೃತ್ತಿ ಹಾಗೂ ಬೇರೆ ಕಾರಣಗಳಿಂದ ತೆರವಾದ ಹಲವು ಹುದ್ದೆಗಳ ನೇಮಕಾತಿಗೆ ಸರ್ಕಾರದಿಂದ ಅನುಮತಿ ಬಂದಿಲ್ಲ. ಆಡಳಿತ ಮಂಡಳಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡು ಕಾಲೇಜ್ ನಡೆಸಬೇಕಿದೆ.