ಶಿರಸಿ&ಸಿದ್ದಾಪುರ ತಾಲೂಕುಗಳ ಗಡಿ ಪ್ರದೇಶ ಸರಕುಳಿಯಲ್ಲಿ ಅಘನಾಶಿನಿ ನದಿ ಸೇತುವೆ ಮಟ್ಟಕ್ಕೆ ಹರಿಯುತ್ತಿರುವುದು. 
ಉತ್ತರ ಕನ್ನಡ

ಸೇತುವೆ ಮಟ್ಟ ತಲುಪಿದ ಅಘನಾಶಿನಿ

ವಿನಯ ಆಶೋಕ ನಾಯ್ಕ
ಶಿರಸಿ: ತಾಲೂಕಿನಲ್ಲಿ ಗುರುವಾರ ಸುರಿದ ಭಾರಿ ಗಾಳಿ&ಮಳೆಯ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಗ್ರಾಮೀಣ ಭಾಗದ ಹಲವು ಪ್ರದೇಶಗಳು ಜಲಾವೃತವಾಗಿವೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳ&ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಹೊಲ&ಗದ್ದೆಗಳು ನೀರಿನಿಂದ ಆವೃತವಾಗಿವೆ.
ಇಲ್ಲಿಯ ನೆಗ್ಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಟಗುಣಿ ಬಳಿ ಸೇತುವೆ ಎದುರಿನಲ್ಲಿ ಮಣ್ಣು ಕುಸಿತವಾದ ಕಾರಣ ಸುತ್ತಮುತ್ತಲ ಹಳ್ಳಿಗಳಿಗೆ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ.
ಅಘನಾಶಿನಿ ನದಿ ಮೈದುಂಬಿ ಹರಿಯುತ್ತಿದ್ದು, ನದಿಯ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಶಿರಸಿ&ಸಿದ್ದಾಪುರ ತಾಲೂಕಿನ ಗಡಿ ಪ್ರದೇಶವಾದ ಸರಕುಳಿಯಲ್ಲಿ ನೀರು ಸೇತುವೆಯ ಮಟ್ಟಕ್ಕೆ ಹರಿದಿದೆ. ನದಿ ತೀರದ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಸ್ಥಳಿಯ ಆಡಳಿತ ಸಾರ್ವಜನಿಕರಿಗೆ ಸೂಚನೆ ನೀಡಿದೆ.
ಭಾರಿ ಮಳೆಯಿಂದ ಗ್ರಾಮೀಣ ಭಾಗದ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಕೆಲ ರಸ್ತೆಗಳು ಜಲಾವೃತವಾಗಿದ್ದು, ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ಹಲವು ಕಡೆಗಳಲ್ಲಿ ಕೃಷಿ ಭೂಮಿಗಳು ನೀರಿನಲ್ಲಿ ಮುಳುಗಿದ್ದು, ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಬಿರುಗಾಳಿಯೊಂದಿಗೆ ಸುರಿದ ಮಳೆಯಿಂದ ಹಲವು ಗ್ರಾಮಗಳಲ್ಲಿ ವಿದ್ಯುತ್​ ತಂತಿಗಳ ಮೇಲೆ ಮರದ ಕೊಂಬೆಗಳು ಬಿದ್ದ ಪರಿಣಾಮ ವಿದ್ಯುತ್​ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಅನೇಕ ಗ್ರಾಮಗಳು ಕತ್ತಲಲ್ಲಿ ಮುಳುಗಿದ್ದು, ಗ್ರಾಮೀಣ ಪ್ರದೇಶದ ನಿವಾಸಿಗಳು ಪರದಾಡುವಂತಾಗಿದೆ.