ಮುರ್ಡೇಶ್ವರದಲ್ಲಿ ಏರ್ಪಡಿಸಿದ್ದ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭವನ್ನು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಉದ್ಘಾಟಿಸಿದರು. ಸಚಿವ ಮಂಕಾಳ ವೈದ್ಯ, ಚಂದ್ರಶೇಖರ ಗೌಡ, ಸತೀಶ ಶೇಟ್ ಇತರರು ಇದ್ದರು.
ಭಟ್ಕಳ: ಪಂಚೇಂದ್ರಿಯಗಳನ್ನು ಹತೋಟಿಯಲ್ಲಿಡದವನು ಚಟಕ್ಕೆ ದಾಸನಾಗುತ್ತಾನೆ. ನಾವು ಸಂಘಟಿಸುವ ಎಂಟು ದಿನಗಳ ಮದ್ಯವರ್ಜನ ಶಿಬಿರದಲ್ಲಿ ಅವರಲ್ಲಿರುವ ಧರ್ಮ ಪ್ರಜ್ಞೆಯನ್ನು ಎಚ್ಚರಿಸಿ ಮಾನಸಿಕ ಪರಿವರ್ತನೆ ಮೂಲಕ ವ್ಯಸನ ಮುಕ್ತರನ್ನಾಗಿ ಮಾಡುತ್ತೇವೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದರು.
ಮುರ್ಡೇಶ್ವರದ ಶ್ರೀ ರಾಘವೇಶ್ವರ ಹವ್ಯಕ ಸಭಾಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ 2,016ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶಿಬಿರದಿಂದ ಹೊರ ಹೋಗುವವರು ಪುನಃ ವ್ಯಸನಕ್ಕೆ ಅಂಟಿಕೊಳ್ಳದೆ ಒಳ್ಳೆಯ ಜೀವನ ನಡೆಸಿಕೊಂಡು ಹೋಗಬೇಕು. ಧರ್ಮಸ್ಥಳದ ಮದ್ಯವರ್ಜನಾ ಶಿಬಿರದಲ್ಲಿ ಬಲವಂತವಾಗಿ ಇಲ್ಲವೇ ದೇವರ ಮೇಲೆ ಆಣೆ ಮಾಡಿಸಿ ಮದ್ಯಬಿಡಿಸುವ ಬದಲಾಗಿ ಮಾನಸಿಕ ಪರಿವರ್ತನೆಯಿಂದ ಮದ್ಯ ಬಿಡಿಸಲು ಪ್ರೇರೆಪಿಸಲಾಗುತ್ತದೆ ಎಂದರು.
ಭಟ್ಕಳ ಹಾಗೂ ಹೊನ್ನಾವರ ಆಳಿದ ರಾಣಿ ಚೆನ್ನಾಭೈರಾದೇವಿ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಿಸಲು ಸಚಿವ ಮಂಕಾಳ ವೈದ್ಯ ಜಾಗ ಗುರುತಿಸಿ ನೀಡಿದರೆ ಸ್ಮಾರಕ ನಿರ್ಮಾಣ ಮಾಡುವುದಾಗಿ ಹೆಗ್ಗಡೆ ಅವರು ತಿಳಿಸಿದರು.
ಸಚಿವ ಮಂಕಾಳ ವೈದ್ಯ ಮಾತನಾಡಿ, ಸರ್ಕಾರದಿಂದ ಆಗದಿರುವ ಕೆಲಸಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಟ್ರಸ್ಟ್ ಮಾಡುತ್ತಿದೆ. ಗ್ರಾಮೀಣ ಭಾಗದ ಜನರನ್ನು ಮೀಟರ್ ಬಡ್ಡಿ ವ್ಯವಹಾರದಿಂದ ಮುಕ್ತರನ್ನಾಗಿ ಮಾಡಿದ ಕೀರ್ತಿ ಧರ್ಮಸ್ಥಳ ಟ್ರಸ್ಟ್‌ಗೆ ಸಲ್ಲುತ್ತದೆ. ಪೂಜ್ಯರ ಎಲ್ಲಾ ಸಮಾಜಮುಖಿ ಕಾರ್ಯಗಳಿಗೂ ನನ್ನ ಬೆಂಬಲ ಸದಾ ಇರುತ್ತದೆ. ನನ್ನ ಕ್ಷೇತ್ರದಲ್ಲಿ ಒಂದು ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸುವಂತೆ ಅವರು ಪೂಜ್ಯರಲ್ಲಿ ಮನವಿ ಮಾಡಿದರು. ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಗೌರವ ಅಧ್ಯಕ್ಷ ಚಂದ್ರಶೇಖರ್ ಗೌಡ, ಅಧ್ಯಕ್ಷ ಸತೀಶ ಶೇಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ನಟರಾಜ, ಶ್ರೀಕೇತ್ರ ಗಾಮಾಭಿವೃದ್ದಿ ಟ್ರಸ್ಟ ನಿರ್ದೇಶಕರಾದ ವಿವೇಕ ಪಾಯಸ, ಆನಂದ ಸುವರ್ಣ ಮಾತನಾಡಿದರು.
ಬೈಲೂರು ಗ್ರಾಪಂ ಅಧ್ಯಕ್ಷ ಕೃಷ್ಣ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಮುರ್ಡೇಶ್ವರ ಪಿಎಸ್‌ಐ ನವೀನ ಕುಮಾರ, ಪರ್ತಕರ್ತ ರಾಧಕೃಷ್ಣ ಭಟ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ರಾಜು ನಾಯ್ಕ, ಎಸ್.ಎಸ್. ಕಾಮತ್‌ಉಪಸ್ಥಿತರಿದ್ದರು.