ಅನಂತ ನಾಗ್ ಮನೆ ಇರುವ ಪ್ರದೇಶ
- ಮಲ್ಲಾಪುರದಲ್ಲಿ ಅನಂತ ನಾಗ್ ಮನೆ
- ಹೊನ್ನಾವರದಲ್ಲಿ ನಾಲ್ಕು ವರ್ಷ ಶಿಕ್ಷಣ ಪಡೆದ ನಾಗ್
ಸುಭಾಸ ಧೂಪದಹೊಂಡ ಕಾರವಾರ: ದೇಶದ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿ ದಾದಾ ಸಾಹೇಬ್ ಪಾಲ್ಕೆ ಪುರಸ್ಕಾರಕ್ಕೆ ಭಾಜನರಾದ ಅನಂತ ನಾಗ್ ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ಪುತ್ರ ಎಂಬುದು ವಿಶೇಷ.
ಅನಂತ ನಾಗ್ ಅವರ ಹೆಸರು ಅನಂತ ನಾಗರಕಟ್ಟೆ. ಚಿತ್ರ ರಂಗದಲ್ಲಿ ಅವರು ಅನಂತ ನಾಗ್ ಆದರು. ಅವರು ಪ್ರಾಥಮಿಕ ಶಿಕ್ಷಣವನ್ನು ಹೊನ್ನಾವರದಲ್ಲಿ ಪಡೆದಿದ್ದರು. ಉತ್ತರ ಕನ್ನಡದಲ್ಲಿಯೇ ತಮ್ಮ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಮುಂದಾಗಿದ್ದರು. ತಮ್ಮ ಸಿನಿಮಾ ಜಗತ್ತಿನ ಉತ್ತುಂಗದ ಕಾಲದಲ್ಲಿಯೂ ಉತ್ತರ ಕನ್ನಡದ ನಂಟನ್ನು ಉಳಿಸಿಕೊಂಡಿದ್ದರು.
ಅನಂತ ನಾಗ್ ಕೊಂಕಣಿ ಮಾತನಾಡುವ ಸಾರಸ್ವತ ಸಮುದಾಯದವರು. ಅವರ ತಂದೆ ಸದಾನಂದ ನಾಗರಕಟ್ಟೆ ಅವರು ಭಟ್ಕಳ ಶಿರಾಲಿಯ ಚಿತ್ರಾಪುರ ಮಠದಲ್ಲಿ ಮ್ಯಾನೇಜರ್ ಆಗಿದ್ದರು. ಆಗ ಅವರು ತಮ್ಮ ಪತ್ನಿ ಮಕ್ಕಳ ಜೊತೆ ಹೊನ್ನಾವರದ ರಥ ಬೀದಿಯಲ್ಲಿರುವ ಲೀಲಾಬಾಯಿ ಕೊಪ್ಪಿಕರ್ ಅವರ ಮನೆಯಲ್ಲಿ ಬಾಡಿಗೆಗೆ ಇದ್ದರು. ಆಗ ಅನಂತ ನಾಗ್ 5 ರಿಂದ 8 ನೇ ತರಗತಿಯವರೆಗೆ ನಾಲ್ಕು ವರ್ಷ ಹೊನ್ನಾವರದಲ್ಲಿಯೇ ಕಲಿತಿದ್ದರು. ಸದಾನಂದ ನಾಗರಕಟ್ಟೆ ಅವರು ಭಜನೆಗಳನ್ನು ಹೇಳುತ್ತಿದ್ದರು. ಅನಂತ ನಾಗ್ ಅವರ ತಾಯಿ ಆನಂದಿ ಹಾರ್ಮೋನಿಯಂ ನುಡಿಸುತ್ತಿದ್ದರು ಎಂದು ಹೊನ್ನಾವರದ ಹಿರಿಯರು ನೆನಪಿಸಿಕೊಳ್ಳುತ್ತಾರೆ.
ಹೊನ್ನಿನಷ್ಟೇ ಅಮೂಲ್ಯ:
`ಹೊನ್ನಾವರದಲ್ಲಿದ್ದ ನಾಲ್ಕು ವರ್ಷಗಳು ನನಗೆ ಹೊನ್ನಿನಷ್ಟೇ ಅಮೂಲ್ಯ. ಆಗ ಇಲ್ಲಿದ್ದ ನಾಲ್ಕು ವರ್ಷಗಳು ಇಂದಿಗೂ ನನ್ನ ಸ್ಮೃತಿ ಪಟಲದಲ್ಲಿ ಅಚ್ಚಾಗಿದೆ' ಎಂದು ಅನಂತ ನಾಗ್ ಹೊನ್ನಾವರದ ಬಗ್ಗೆ ವಿವಿಧೆಡೆ ಮಾತನಾಡಿದ್ದಾರೆ. ಪ್ರೌಢ ಶಿಕ್ಷಣವನ್ನು ಅವರು ಮುಂಬೈನಲ್ಲಿ ಮುಂದುವರಿಸಿದರು. ಆದರೂ ಅವರ ಕುಟುಂಬ ಉತ್ತರ ಕನ್ನಡದ ಸಂಬAಧ ಕಳೆದುಕೊಂಡಿರಲಿಲ್ಲ. ಅನಂತ ನಾಗ್ ಅವರ ಆ ಹಳೆಯ ಮನೆ ಇಂದಿಗೂ ಮಲ್ಲಾಪುರದಲ್ಲಿದೆ. ಅನಂತ ನಾಗ್ ಅವರು ಈಗಲೂ ಆಗಾಗ ಚಿತ್ರಾಪುರ ಶಿರಾಲಿ ಮಠಕ್ಕೆ ಬಂದು ಅವರು ಆಶೀರ್ವಾದ ಪಡೆಯುತ್ತಾರೆ. ಅಲ್ಲಿನ ವಿಶೇಷ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ.
ಅವರ ತಂದೆ ಸದಾನಂದ ನಾಗರಕಟ್ಟೆ ಅವರು ಕುಮಟಾ-ಹೊನ್ನಾವರ ಸಮೀಪದ ಮಲ್ಲಾಪುರದ ದುರ್ಗಾ ದತ್ತ ಮಂದಿರದ ಹಿಂದೆ ಮನೆಯೊಂದನ್ನು ಹೊಂದಿದ್ದರು. ನಂತರ ಅನಂತ ನಾಗ್ ಅವರು ಅದನ್ನು ನವೀಕರಣ ಮಾಡಿದ್ದರು. ಉತ್ತರ ಕನ್ನಡಕ್ಕೆ ಬಂದಾಗ ಆಗಾಗ ಅಲ್ಲಿಗೆ ಬಂದು ಹೋಗುತ್ತಿರುತ್ತಾರೆ ಎನ್ನುತ್ತಾರೆ ಅವರ ಜೊತೆ ಒಡನಾಟ ಹೊಂದಿರುವ ಛಾಯಾ ಉಬ್ಬೇಕರ್. ಪ್ರತಿ ವರ್ಷ ಅವರು ಇಲ್ಲಿನ ದೇವಸ್ಥಾನಗಳಿಗೆ ಬರುತ್ತಿದ್ದರು. ಆಗಲೂ ನಮ್ಮ ಮನೆಗೆ ಬರುತ್ತಿದ್ದರು ಎನ್ನುತ್ತಾರೆ ಛಾಯಾ ಅವರು.
ಉತ್ತರ ಕನ್ನಡದಿಂದ ಚುನಾವಣೆಗೆ ನಿಂತಿದ್ದ ಅನಂತ ನಾಗ್
ಅನಂತ ನಾಗ್ ಉತ್ತರ ಕನ್ನಡ ಜಿಲ್ಲೆಯಿಂದ ಚುನಾವಣೆಗೂ ಸ್ಪರ್ಧೆ ಮಾಡಿದ್ದರು. ಕೈಗಾ ಅಣು ವಿದ್ಯುತ್ ಸ್ಥಾವರ, ಶರಾವತಿ ಟೇಲರೇಸ್, ಸೀಬರ್ಡ್ ನೌಕಾ ಯೋಜನೆಯ ವಿರುದ್ಧ ಹೋರಾಟ ನಡೆದ ಕಾಲವಾಗಿತ್ತು. ಆಗ ಆನಂತ ನಾಗ್ ಅವರು ಉತ್ತರ ಕನ್ನಡ (ಆಗಿನ ಕೆನರಾ) ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಜನತಾ ದಳದ ಅಭ್ಯರ್ಥಿಯಾಗಿದ್ದ ಅವರು ಭರ್ಜರಿ ಪ್ರಚಾರ ನಡೆಸಿದ್ದರು. ಆಗ ಅವರಿಗೆ 2,09,003 ಮತಗಳು ಬಿದ್ದಿದ್ದವು. ಆದರೆ, ಅವರು ಗೆಲ್ಲಲು ಸಾಧ್ಯವಾಗಿಲ್ಲ. 2,40,571 ಮತ ಪಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿ ಡಿ.ದೇವರಾಯ ನಾಯಕ ಜಯಗಳಿಸಿದ್ದರು. ಇನ್ನೊಂದು ವಿಶೇಷ ಎಂದರೆ ಖ್ಯಾತ ಸಾಹಿತಿ ಶಿವರಾಮ ಕಾರಂತ ಅವರೂ ಅದೇ ಚುನಾವಣೆಯಲ್ಲಿ ಉತ್ತರ ಕನ್ನಡದಿಂದ ಸ್ಪರ್ಧೆ ಮಾಡಿದ್ದರು. ಶಿವರಾಮ ಕಾರಂತ ಅವರು 58,902 ಮತಗಳನ್ನು ಪಡೆದಿದ್ದರು.
ಚಿತ್ರಾಪುರ ಶ್ರೀ ಹರ್ಷ
ಚಿತ್ರಾಪುರ ಮಠದ ಭಕ್ತರಾದ ಅನಂತ ನಾಗರಕಟ್ಟೆ ಅವರಿಗೆ ದೇಶದ ಅತ್ಯುನ್ನತ ಗೌರವ ಲಭಿಸಿರುವುದಕ್ಕೆ ಪೀಠಾಽಪತಿಗಳಾದ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಅನಂತ ನಾಗ್ ಅವರು ಇಡೀ ಸಮೂದಾಯಕ್ಕೇ ಹೆಮ್ಮೆ ತಂದಿದ್ದಾರೆ ಎಂದು ತಮ್ಮ ಹೇಳಿಕೆ ನೀಡಿದ್ದಾರೆ.