ಅಂಕೋಲಾದಲ್ಲಿ ನಕಲಿ ದಾಖಲೆ fake documents ಸೃಷ್ಟಿಸಿ ಜಮೀನು ಮಾರಾಟ ಮಾಡಿದವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಬಾಳೆಗುಳಿ, ಬೊಗ್ರಿಬೈಲ್ ಮತ್ತು ಶಿರಕುಳಿ ಗ್ರಾಮಸ್ಥರು ಶಿರಸ್ತೇದಾರ ಅನುಪಮಾ ನಾಯ್ಕಗೆ ಮನವಿ ಸಲ್ಲಿಸಿದರು
ಅಂಕೋಲಾ: ತಾಲೂಕಿನ ಅಲಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಗ್ರಿಬೈಲಿನಲ್ಲಿ ನಕಲಿ ದಾಖಲೆ fake documents ಸೃಷ್ಟಿಸುವ ಮೂಲಕ ಜಮೀನು ಮಾರಾಟ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳ ಬೇಕು ಎಂದು ಬಾಳೆಗುಳಿ, ಬೊಗ್ರಿಬೈಲ್ ಮತ್ತು ಶಿರಕುಳಿ ಗ್ರಾಮಸ್ಥರು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದರು.
ಬೊಗ್ರಿಬೈಲ್ ಗ್ರಾಮದ ಸರ್ವೇ ನಂಬರ್ 25 ಹಿಸ್ಸಾ 1 ರ ಅಂದಾಜು 7.26 ಎಕರೆ ಜಮೀನನ್ನು ಶಿವಮೊಗ್ಗ ಜಿಲ್ಲೆಯ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಲಾಗಿದ್ದು, ಜಮೀನಿನ ಮಾಲೀಕರ ಕುಟುಂಬದವರಿಗೆ ಗೊತ್ತಿಲ್ಲದೇ ನಡೆದಿರುವ ಅಕ್ರಮ ಮಾರಾಟ ಚಟುವಟಿಕೆಯ ಹಿಂದೆ ದೊಡ್ಡ ಜಾಲವೇ ಕೆಲಸ ಮಾಡಿರುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮೃತ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸಷ್ಟಿಸಿ ಜಮೀನಿನ ಮಾರಾಟದ ಪ್ರಕ್ರಿಯೆಗಳು ನಡೆದಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಹಿಂದೆಯೂ ಬೊಗ್ರಿಬೈಲ್ ಸುತ್ತ ಮುತ್ತ ಇಂತಹ ಪ್ರಕರಣಗಳು ನಡೆದಿದ್ದು, ಅಮಾಯಕರು ತಮ್ಮ ಭೂಮಿಯನ್ನು ಕಳೆದುಕೊಂಡಿದ್ದಾರೆ, ಎಷ್ಟೋ ಜನರು ಕೋರ್ಟ್, ಕಚೇರಿಗಳಿಗೆ ಅಲೆಯುವಂತಾಗಿದೆ. ಜನರು ತಮ್ಮ ಜಮೀನುಗಳ ಸುರಕ್ಷತೆಯ ಕುರಿತಂತೆ ಚಿಂತೆಯಲ್ಲಿ ಮುಳುಗುವಂತಾಗಿದೆ. ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಬಿಜೆಪಿ ಪ್ರಮುಖ ನಾಗೇಶ ಕಿಣಿ ಮಾತನಾಡಿ, ಮಾರಾಟ ಮಾಡಲಾಗಿರುವ ಜಮೀನಿಗೆ ಸಂಬಂಧಿಸಿದ ಕುಟುಂಬದವರು ಮಠಾಕೇರಿಯ ವಿಳಾಸದವರಾಗಿದ್ದು, ವಿಜಯಪುರದ ವಿಳಾಸ ಇರುವ ದಾಖಲೆ ಸೃಷ್ಟಿಸಿ ವಾರಸಾ ಮಾಡಲಾಗಿದೆ. ಬದುಕಿದ್ದರೆ 130 ವಷರ್ ದಾಟುವ ವ್ಯಕ್ತಿಗಳ ವಯಸ್ಸನ್ನು 65 ವಷರ್ ಎಂದು ತೋರಿಸಿ ಸತ್ತವರನ್ನು ದಾಖಲೆಗಳಲ್ಲಿ ಬದುಕಿಸುವ ಕೃತ್ಯ ನಡೆದಿದೆ. ಅಧಿಕಾರಿಗಳು ಸೇರಿದಂತೆ ಈ ಕತ್ಯದಲ್ಲಿ ಯಾರೆಲ್ಲ ಶಾಮೀಲಾಗಿದ್ದಾರೆ ಎನ್ನುವುದು ತನಿಖೆಯಾಗಲಿ ಎಂದು ಆಗ್ರಹಿಸದರು.
ತಹಸೀಲ್ದಾರ್ ಪರವಾಗಿ ಶಿರಸ್ತೇದಾರ ಅನುಪಮಾ ನಾಯ್ಕ ಮನವಿ ಸ್ವೀಕರಿಸಿದರು. ಜಮೀನಿನ ಮಾಲೀಕರಾಗಿದ್ದ ಮಠಾಕೇರಿಯ ಹರಿ ಪೈ ಕುಟುಂಬದ ವಿಜಯ ಪೈ, ಬೊಗ್ರಿಬೈಲ್ ಗ್ರಾಮದ ಗೋವಿಂದ ಗೌಡ, ಸವಿತಾ ಕಲ್ಮಠ ಉಪಸ್ಥಿತರಿದ್ದರು.