ಶಿರಸಿ: ನಾಡ ಕಚೇರಿಗಳಲ್ಲಿ ಆಧಾರ್ ಕಾರ್ಡ್ ಮಾಡಿಸುವಿಕೆಯನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸಿರುವುದು ತಾಲೂಕಿನ ಸಾರ್ವಜನಿಕರಿಗೆ ಸಮಸ್ಯೆ ಆಗಿದೆ. ಆಧಾರ್ ಕಾರ್ಡ್ ಸಲುವಾಗಿ ನಗರಗಳತ್ತ ಮುಖ ಮಾಡಬೇಕಾಗಿದೆ.
ತಾಲೂಕಿನ ಎಲ್ಲ ಹೋಬಳಿಗಳಲ್ಲಿರುವ ನಾಡ ಕಚೇರಿಯಲ್ಲಿ ಆಧಾರ್ ಪ್ರಾಧಿಕಾರ ಆಧಾರ್ ಕೇಂದ್ರವನ್ನು ಆರಂಭಿಸಿತ್ತು. ಆದರೆ, 2019ರ ವೇಳೆ ಸಿಬ್ಬಂದಿಯ ಕೊರತೆ, ಆಧಾರ್ ಕಾರ್ಡ್ ಮಾಡಿಸುವ ಯಂತ್ರೋಪಕರಣಗಳ ಕೊರತೆ, ಬಯೋಮೆಟ್ರಿಕ್ ಮಾಡುವ ಸಮಸ್ಯೆಯಿಂದ ನಾಡಕಚೇರಿಯ ಆಧಾರ್ ಕಾರ್ಡ್ ಕೇಂದ್ರಗಳ ಬಗ್ಗೆ ಆಸಕ್ತಿ ಮುಂದುವರಿಸಿಲ್ಲ. ಕೇವಲ ತಹಸೀಲ್ದಾರ್ ಕಾರ್ಯಾಲಯದಲ್ಲಿರುವ ಆಧಾರ್ ಸೇವಾ ಕೇಂದ್ರ, ಅಂಚೆ ಕಚೇರಿ ಹಾಗೂ ಕರ್ನಾಟಕ ಬ್ಯಾಂಕ್ನಲ್ಲಿ ಮಾತ್ರ ಆಧಾರ್ ಕಾರ್ಡ್ ನೀಡಲಾಗುತ್ತಿದೆ. ಆದಾಗ್ಯೂ, ಸೌಲಭ್ಯಗಳು ಲಭ್ಯ ಇದ್ದ ನಾಡ ಕಚೇರಿಯಲ್ಲಿಯೂ ಆಧಾರ್ ಕಾರ್ಡ್ ಸಂಬಂಧ ಪರಿಷ್ಕರಣೆ, ಹೊಸ ಆಧಾರ್ ಕಾರ್ಡ್ ನೀಡುವಿಕೆ ಮುಂದುವರಿಸಿಕೊಂಡು ಬರಲಾಗಿತ್ತು. ಈಗ ಕಳೆದ ನಾಲ್ಕು ತಿಂಗಳ ಈಚೆ ತಾಲೂಕಿನ ಬಹುತೇಕ ಎಲ್ಲ ನಾಡ ಕಚೇರಿಗಳಲ್ಲಿ ಆಧಾರ್ ಕಾರ್ಡ್ ಸೇವೆ ಸಂರ್ಪೂಣ ಸ್ಥಗಿತಗೊಂಡು ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ.
ತಾಲೂಕಿನಲ್ಲಿ ಕುಗ್ರಾಮಗಳು ಮತ್ತು ಬಡವರೇ ಜಾಸ್ತಿ ಇರುವ ಕಾರಣ ಆಧಾರ್ ಕಾರ್ಡ್ ಮಾಡಿಸುವ ಸಲುವಾಗಿ ನಗರದತ್ತ ಮುಖ ಮಾಡುವುದು ಸಾರ್ವಜನಿಕರಿಗೆ ಸಮಸ್ಯೆ ಆಗಿದೆ. ಮದುವೆ ಆಗಿ ಬಂದ ಯುವತಿಯರ ಹೆಸರು, ವಿಳಾಸ ಬದಲಾವಣೆ, ಆಧಾರ್ ಕಾರ್ಡ್ನ ಮೊಬೈಲ್ ಸಂಖ್ಯೆ ಬದಲಾವಣೆ, ಮಕ್ಕಳಲ್ಲಿ ಬಾಲ ಆಧಾರ್ ಕಾರ್ಡ್ನ್ನು ಆಯಾ ಕಾಲಕ್ಕೆ ಸರಿಯಾಗಿ ಬದಲಾವಣೆ ಮಾಡಬೇಕಿದೆ. ಹೀಗಾಗಿ, ಇದುವರೆಗೂ ಗ್ರಾಮದಲ್ಲಿ ಆಧಾರ ಬದಲಾವಣೆ ಮಾಡಬಹುದಾಗಿತ್ತಾದರೂ ಈಗ ನಗರಕ್ಕೇ ತೆರಳುವಂತಾಗಿದೆ. ವಯಸ್ಸಾದವರು, ಮಕ್ಕಳನ್ನು ಕರೆತಂದು ಅಂಚೆ ಕಚೇರಿ ಅಥವಾ ನಗರದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಸರತಿಯಲ್ಲಿ ದಿನರ್ಪೂತಿ ನಿಲ್ಲುವ ಪರಿಸ್ಥಿತಿ ಉಂಟಾಗಿದೆ.
ತಾಲೂಕಿನ ಸಂಪಖಂಡ ಹೋಬಳಿಯಲ್ಲಿ ದೂರ ದೂರದ ಮನೆಗಳ ಕುಗ್ರಾಮಗಳೇ ಜಾಸ್ತಿ ಇವೆ. ಬಂಡಲದಂತಹ ಜಟಿಲ ರಸ್ತೆಗಳನ್ನು ಹೊಂದಿರುವ ಹಳ್ಳಿಗಳ ಸಂಖ್ಯೆ ಜಾಸ್ತಿ ಇದೆ. ಜಾನ್ಮನೆಯಲ್ಲಿ ನಾಡ ಕಚೇರಿ ಇದ್ದು, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣ ಪತ್ರ, ನಿವಾಸ ಪ್ರಮಾಣಪತ್ರದಂತಹ ಕಾಗದ ಪತ್ರಗಳಿಗೆ ಇಲ್ಲಿಗೆ ಆಗಮಿಸುತ್ತಾರೆ. ಆದರೆ, ಇಲ್ಲಿಯ ಆಧಾರ್ ಸೇವಾ ಕೇಂದ್ರ ಕಳೆದ ಮೂರು ತಿಂಗಳಿನಿಂದ ಸ್ಥಗಿತಗೊಂಡಿದೆ.
ಆಧಾರ್ ಕಾರ್ಡ್ ಮಾಡಿಸಬೇಕೆಂದರೆ ವ್ಯಕ್ತಿಯ ಬೆರಳಚ್ಚು ಪಡೆಯಬೇಕು. ಆದರೆ, ಸಂಪಖಂಡದಲ್ಲಿ ಬೆರಳಚ್ಚು ಸಂಗ್ರಹಿಸುವ ಯಂತ್ರ ಈಗಿಲ್ಲ. ಕಳೆದ ಮೂರು ತಿಂಗಳ ಹಿಂದೆ ತಹಸೀಲ್ದಾರ್ ಕಚೇರಿಯ ಬೆರಳಚ್ಚು ಸಂಗ್ರಹ ಯಂತ್ರ ಕೈಕೊಟ್ಟಾಗ ಜಾನ್ಮನೆಯಲ್ಲಿದ್ದ ಬೆರಳಚ್ಚು ಸಂಗ್ರಹ ಯಂತ್ರವನ್ನು ಶಿರಸಿಗೆ ಒಯ್ಯಲಾಗಿದೆ. ಇದರಿಂದಾಗಿ ಆಧಾರ್ ಕಾರ್ಡ್ ಕೆಲಸಕ್ಕಾಗಿ ಬಂದವರು ಅನಿವಾರ್ಯವಾಗಿ ಶಿರಸಿಯತ್ತ ಮುಖ ಮಾಡಬೇಕಾಗಿದೆ.
ನಾಡ ಕಚೇರಿಯಲ್ಲೇ ಆಧಾರ್ ಕಾರ್ಡ್ ಮಾಡುವಾಗ ತ್ವರಿತ ಸೇವೆ ಸಿಗುತ್ತಿತ್ತು. ಈಗ ಮಕ್ಕಳು, ಮುದುಕರನ್ನೆಲ್ಲ ಕರೆದುಕೊಂಡು ನಗರಕ್ಕೆ ಹೋಗಿ ಅಲ್ಲಿ ಸರದಿಯಲ್ಲಿ ನಿಲ್ಲಬೇಕಿದೆ. ಈ ಮೊದಲಿನಂತೆಯೇ ನಾಡ ಕಚೇರಿಯಲ್ಲೇ ಆಧಾರ್ ಕಾರ್ಡ್ ಸಂಬಂಧ ಕೆಲಸ ಆಗುವಂತಾಗಬೇಕು.ಸುರೇಶ ನಾಯ್ಕ ಬಲವಳ್ಳಿ, ರೈತ
ಆಧಾರ್ ಕಾರ್ಡ್ ಮಾಡಿಸುವಿಕೆ, ಬದಲಾವಣೆಯನ್ನು ಈಗ ಶಿರಸಿಯ ತಹಸೀಲ್ದಾರ್ ಕಾರ್ಯಾಲಯ, ಅಂಚೆ ಕಚೇರಿಯಲ್ಲಿ ಮಾಡಲಾಗುತ್ತಿದೆ. ನಾಡಕಚೇರಿಯಲ್ಲಿ ಈಗ ಆಧಾರ್ ಕಾರ್ಡ್ ಯಂತ್ರೋಪಕರಣಗಳಿಲ್ಲ.ಪಟ್ಟರಾಜ ಗೌಡ ತಹಸೀಲ್ದಾರ್, ಶಿರಸಿ