ಅಂಕೋಲಾದ ಶ್ರೀ ಶಾಂತಾದುರ್ಗಾ ಹಾಗೂ ಶ್ರೀ ವೆಂಕಟರಮಣ ರಥೋತ್ಸವವು (Festival) ವಿಜೃಂಭಣೆಯಿಂದ ನೆರವೇರಿತು. 
ಉತ್ತರ ಕನ್ನಡ

Festival ಗಮನಸೆಳೆದ ದಹಿಂಕಾಲ ಉತ್ಸವದ ರೂಪಕ

ಅಂಕೋಲಾ: ನಾಮಧಾರಿ ಸಮಾಜದ ದಹಿಂಕಾಲ ಉತ್ಸವ (Festival) ಶುಕ್ರವಾರ ಸಂಭ್ರಮ ಸಡಗರದಿಂದ ನಡೆಯಿತು.
ಅನಾದಿಕಾಲದಿಂದಲೂ ನಾಮಧಾರಿ ಸಮಾಜದ ದಹಿಂಕಾಲ ಉತ್ಸವ ನಡೆಯುತ್ತಿದ್ದು, ಈ ವರ್ಷ ವಿಶೇಷವಾಗಿ ಹಲವು ರೂಪಕಗಳು ಅತ್ಯಂತ ಗಮನ ಸೆಳೆದವು. 
ಶ್ರೀ ಶಾಂತಾದುರ್ಗಾ ಹಾಗೂ ಶ್ರೀ ವೆಂಕಟರಮಣ ರಥೋತ್ಸವವು ಇಲ್ಲಿಯ ಕೇಂದ್ರಬಿಂದುವಾಗಿದ್ದು, ಶುಕ್ರವಾರ ಬೆಳಗ್ಗೆ 10 ಗಂಟೆಗೆ ಎನ್.ಎಂ. ನಾಯ್ಕ ಹಾಗೂ ಅಶೋಕ ತಿಮ್ಮಣ್ಣ ನಾಯ್ಕ ಉಪಸ್ಥಿತಿಯಲ್ಲಿ ಶ್ರೀ ವೆಂಕಟರಮಣ ದೇವರ ಅಭಿಷೇಕ ಮತ್ತು ಪೂಜಾ ಕಾರ್ಯಕ್ರಮಗಳು ನಡೆದವು. 
ಶ್ರೀ ಶಾಂತಾದುರ್ಗಾ ದೇವರ ಅಭಿಷೇಕ ಹಾಗೂ ಸಂಜೆ ರಥೋತ್ಸವವು ಸಂಪ್ರದಾಯದಂತೆ ದಿ.ವಿ.ಜಿ. ನಾಯ್ಕ ಶಾನುಭೋಗ ಅವರ ಮನೆತನದವರಾದ ವಾಸುದೇವ ಗಣಪತಿ ನಾಯ್ಕ ಹಿರಿತನದಲ್ಲಿ ನೆರವೇರಿತು. 
ದಹಿಂಕಾಲದ ಆಕರ್ಷಕವಾಗಿ ಆನೆಯ ರೂಪಕ ಗಮನ ಸೆಳೆದವು. ತಿರುಪತಿ ವೆಂಕಟರಮಣ ದೇವರ ಸ್ತಬ್ಧಚಿತ್ರ, ಶ್ರೀ ನಾರಾಯಣಗುರು ಸ್ತಬ್ಧಚಿತ್ರ, ವೀರಗಾಸೆ, ವರಾಹ ರೂಪಕ, ಗುರುಡಾವತಾರ, ಎಸ್. ಬಂಗಾರಪ್ಪನವರ ಸ್ತಬ್ಧಚಿತ್ರ, ಕಾಳಿಂಗ ಮರ್ದನ, ವಿಷ್ಣು ಅವತಾರ ಹಾಗೇ ವಿವಿಧ ರೂಪಕಗಳು ಮೆರವಣಿಗೆಯಲ್ಲಿ ಆಕರ್ಷಕವಾಗಿತ್ತು.
 ಶ್ರೀ ಶಾಂತಾದುರ್ಗಾ ದೇವಿಯ ರಥವು ವೆಂಕಟರಮಣ ದೇವಸ್ಥಾನಕ್ಕೆ ತೆರಳಿ ಅಲ್ಲಿಂದ ವಿಶೇಷವಾಗಿ ವೆಂಕಟರಮಣ, ಶಾಂತಾದುರ್ಗಾ ಜೋಡಿರಥಗಳು ಒಟ್ಟಿಗೆ ಆಗಮಿಸಿತು.
ಅಂಗಡಿಕಾರರು ತಮ್ಮ ಅಂಗಡಿಯ ಎದುರು ತಳಿರು ತೋರಣ ಹಾಕಿ ದೇವರಿಗೆ ಪುಜೆ ಸಲ್ಲಿಸಿದರು.
ಅಲ್ಲಿಂದ ಸಾಗಿಬಂದ ಜೋಡಿರಥ ಶ್ರೀ ಶಾಂತಾದುರ್ಗಾ ದೇವಸ್ಥಾನಕ್ಕೆ ತೆರಳಿ ನಂತರ ಅಲ್ಲಿಂದ ಶ್ರೀ ವೆಂಕಟರಮಣ ದೇವರ ರಥ ಆಡುಕಟ್ಟೆಯಲ್ಲಿ ಆಸೀನವಾಯಿತು.
ನಾಮಧಾರಿ ದಹಿಂಕಾಲ ಉತ್ಸವ ಸಮಿತಿ ಅಧ್ಯಕ್ಷ ಡಾ. ಕರುಣಾಕರ ನಾಯ್ಕ, ಕಾರ್ಯದರ್ಶಿ ಮಂಜುನಾಥ ವಿ. ನಾಯ್ಕ, ಕರ್ನಾಟಕ ಆರ್ಯ ಈಡಿಗ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಎಲ್. ನಾಯ್ಕ, ತಾಲೂಕು ನಾಮಧಾರಿ ಅಭಿವೃದ್ಧಿ ಒಕ್ಕೂಟದ ಅಧ್ಯಕ್ಷ ನಾಗೇಶ ನಾಯ್ಕ ಆಚಾ ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು.