ಗೋಕರ್ಣದ ಅಶೋಕೆಯ ಶ್ರೀರಾಮಚಂದ್ರಾಪುರ ಮಠದಲ್ಲಿ 33ನೇ ಅನ್ನಬ್ರಹ್ಮ ಚಾತುರ್ಮಾಸ್ಯ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಧರ್ಮಸಭೆಯಲ್ಲಿ ಬೆಂಗಳೂರಿನ ಖ್ಯಾತ ಸಿಎಂಆರ್ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ.ಎಂ.ಎಸ್. ಶಿವಕುಮಾರ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.
- ರಾಘವೇಶ್ವರ ಶ್ರೀಗಳಿಂದ ಪ್ರವಚನದಲ್ಲಿ ದಾರ್ಶನಿಕರ ಸಂಸ್ಮರಣೆ
ಭೋಜನಂ ಅಗ್ನಿಹೋತ್ರ ಸಮೋ ವಿಧಿಃ. ನಿತ್ಯ ನಾವು ಮಾಡುವ ಊಟ ಅಥವಾ ಭೋಜನ ಎನ್ನುವುದು ಅಗ್ನಿಹೋತ್ರಕ್ಕೆ ಸಮಾನವಾದ ಯಜ್ಞವಿಧಿ ಆಗಿದೆ. ಯುಕ್ತವಾದ ಕಾಲ, ದೇಶ, ಮಾತ್ರಾ (ಪ್ರಮಾಣ) ಮತ್ತು ಸ್ತುತಿಭಾವ ಮುಖೇನ ಭೋಜನವನ್ನು ಕೈಗೊಂಡಲ್ಲಿ 33 ಕೋಟಿ ದೇವತೆಗಳು ತೃಪ್ತರಾಗುತ್ತಾರೆ ಎಂದು 33ನೇ ಅನ್ನಬ್ರಹ್ಮ ಚಾತುರ್ಮಾಸ್ಯ ವ್ರತಬದ್ಧರಾದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ಚಾತುರ್ಮಾಸ್ಯ ನಿಮಿತ್ತ ಅಶೋಕೆಯ ಶ್ರೀ ರಾಮಚಂದ್ರಾಪುರ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಧರ್ಮಸಭೆಯಲ್ಲಿ ಶ್ರೀಗಳು ಶರೀರದ ಉಪಸ್ತಂಭವಾದ ಆಹಾರ ಅಥವಾ ಭೋಜನ ವಿಧಿಯನ್ನು ಶ್ರೇಷ್ಠ ದಾರ್ಶನಿಕರ ಉಲ್ಲೇಖಗಳ ಮೂಲಕ ವಿವರಿಸಿದರು.
ಭಾವಪ್ರಕಾಶ ಎಂಬ ಆಯುರ್ವೇದ ಶಾಸ್ತ್ರ ಭೋಜನ ನಿತ್ಯ ತ್ರಿಕಾಲದಲ್ಲಿ ಮಾಡುವ ಅಗ್ನಿಹೋತ್ರ ಯಜ್ಞವಿಧಿ ಎಂದಿದೆ. ಪ್ರಾತಃ ಕಾಲದಲ್ಲಿ ದೇವತೆಗಳು, ಮಧ್ಯಾಹ್ನ ಮನುಷ್ಯರು ಮತ್ತು ಸಾಯಂಕಾಲ ಪಿತೃಗಳಿಗೆ ಇದು ಅರ್ಪಿತ. ಜಟಾಯು ತನ್ನ ಅಂತ್ಯ ಕಾಲದಲ್ಲಿರುವಾಗ ಪ್ರಭು ಶ್ರೀರಾಮ ನಿನಗೆ ಅಗ್ನಿಹೋತ್ರ ಸಮಫಲ ಒದಗಿ ಬರಲಿ ಎಂಬುದಾಗಿ ಆಶೀರ್ವಾದವನ್ನು ಅನುಗ್ರಹಿಸಿದ. ಆದರೆ, ವರ್ತಮಾನದಲ್ಲಿ ಅಗ್ನಿಹೋತ್ರ ಆಚರಣೆ ಬಹು ಕಷ್ಟಸಾಧ್ಯ ಮತ್ತು ವಿರಳಾತಿ ವಿರಳ ಅನುಷ್ಠಾನವಾಗಿ ಪರಿಣಮಿಸಿದೆ. ಯುಕ್ತ ವಿಧಿದ್ವಾರ ಸರಿಯಾಗಿ ಭೋಜನ ಮಾಡುವವನನ್ನು ಮಹರ್ಷಿ ಚರಕರು ಸಹ ಅಗ್ನಿಹೋತ್ರಿ ಎಂಬುದಾಗಿ ವಿಶ್ಲೇಷಿಸಿದ್ದಾರೆ.
ನಿತ್ಯಯಜ್ಞ ಮತ್ತು ಆತ್ಮಯಾಜಿ: ವೇದ, ಉಪನಿಷತ್, ಆಚಾರ್ಯ ಬೋಧಾಯನರು, ಸ್ವಯಂ ಶ್ರೀ ಶಂಕರಾಚಾರ್ಯ ಗುರುವರ್ಯರು ಸೇರಿದಂತೆ ಸಮಸ್ತ ಭಾರತೀಯ ಸನಾತನ ಸಂಸ್ಕೃತಿ ಭೋಜನಕ್ಕೆ ನಿತ್ಯಯಜ್ಞ, ಆತ್ಮಯಜ್ಞ ಎಂಬ ದೈವಿಕ ಮಹತ್ವ ನೀಡಿದೆ. ಈ ಯಜ್ಞದಲ್ಲಿ ಶರೀರ ಯಜ್ಞಶಾಲೆ. ದೇಹದ ಒಳಗಿನ ಜಠರಾಗ್ನಿಯೇ ಸಾಕ್ಷಾತ್ ಅಗ್ನಿಸ್ವರೂಪ. ಭೋಜನವೇ ಹವಿಸ್ಸು ಎನ್ನಲಾಗಿದೆ. ಶಾಸ್ತ್ರಕಾರರಾದ ಬೋಧಾಯನರ ಪ್ರಕಾರ ತನ್ನೊಳಗಿನ ಅಗ್ನಿಯಲ್ಲಿ ನಿತ್ಯ ಭೋಜನ ಎಂಬ ಯಜ್ಞ ಮಾಡುವವನನ್ನು ಅವರು ‘ಆತ್ಮಯಾಜಿ’ ಎಂದಿದ್ದಾರೆ. ಈ ಆತ್ಮಯಾಜಿ ಕೈಗೊಳ್ಳುವ ವಿಧಿವತ್ತಾದ ಭೋಜನ ಎಂಬ ಯಜ್ಞ ಎಲ್ಲ ಯಜ್ಞಗಳಲ್ಲಿ ಶ್ರೇಷ್ಠವಾದುದು. ದೇವತಾ ಸ್ತುತಿಗೈದು ಊಟವನ್ನು ದೇವತೆಗಳಿಗೆ ಸಮರ್ಪಿಸಿ ಉಣ್ಣುವುದರಿಂದ ‘ತ್ರಯಃ ತ್ರಿಂಶತ್ ಕೋಟಿ ದೇವಾಃ ತೃಪ್ತಂತಿ’. ಇಂತಹ ವಿಧಿ ಪ್ರಯುಕ್ತ ಭೋಜನಯಜ್ಞ 33 ಕೋಟಿ ದೇವಾನುದೇವತೆಗಳನ್ನು ತೃಪ್ತಿ ಪಡಿಸುತ್ತದೆ ಎನ್ನುವುದು ಆಚಾರ್ಯ ಶ್ರೇಷ್ಠರ ಉಲ್ಲೇಖವಾಗಿದೆ. ಇಂತಹ ಭೋಜನದಿಂದ ನಮ್ಮ ಅರಿವಿಗೆ ಬಾರದೆ ಕೃತಪಾಪ ಜಠರಾಗ್ನಿಯಲ್ಲಿ ಉರಿದು ನಾಶವಾಗುವ ಫಲ ಲಭಿಸುತ್ತದೆ. ಇದನ್ನು ಬಿಟ್ಟು ನಿರ್ವಿಧಿದ್ವಾರಾ ಸುಮ್ಮನೆ ಉಣ್ಣುವವನನ್ನು ಭೋಜನವೇ ಪಾಪಿಯಾಗಿಸುತ್ತದೆ.
ಭಗವಾನ್ ಅಗ್ನಿ ಮತ್ತು ಈಶ್ವರ: ‘ಜಠರೋ ಭಗವಾನ್ ಅಗ್ನಿಃ ಈಶ್ವರಃ ಅನ್ನಸ್ಯ ಪಾಚಕಃ. ಜಠರದಲ್ಲಿರುವ ಬೆಂಕಿ ಭಗವಾನ್ ಅಗ್ನಿರೂಪ. ಭೋಜನವನ್ನು ದಹಿಸುವವ ಸಾಕ್ಷಾತ್ ಈಶ್ವರ ಎಂದು ವೇದೋಪನಿಷತ್‌ಗಳು ವರ್ಣಿಸಿವೆ. ಭೋಜನದ ಪ್ರತಿ ತುತ್ತು ಜಠರಾಗ್ನಿಗೆ ಸಮರ್ಪಿಸುವ ಹವಿಸ್ಸುಗಳಾಗಿವೆ. ಇದೇ ಹಿನ್ನೆಲೆಯಲ್ಲಿ ಗೀತೆಯಲ್ಲಿ ಭಗವಾನ್ ಶ್ರೀಕೃಷ್ಣ ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ’ ಎಂಬ ಉಪದೇಶ ನೀಡಿದ್ದಾನೆ ಎಂದು ಶ್ರೀಗಳು ದೈಹಿಕ ಯಜ್ಞದ ಪ್ರಾಧಾನ್ಯವನ್ನು ಮನದಟ್ಟಾಗಿಸಿದರು.
ಜಠರದಲ್ಲಿ ಅಗ್ನಿದೇವ ಮತ್ತು ಸ್ವಯಂ ಈಶ್ವರನ ವಾಸ ಇರುವುದರಿಂದ ಆಹಾರ ಮತ್ತು ಭೋಜನ ಪವಿತ್ರವಾದ ಹವಿಸ್ ಆಗಿರುವುದರಿಂದ ನಾವು ಹೊರಗಿನಿಂದ ಬಾಯಿಯ ಒಳಗೆ ಬಿಡುವ ಪ್ರತಿ ವಸ್ತುವಿನ ಬಗ್ಗೆ ಬಹುವಾದ ಜಾಗೃತಿ ವಹಿಸಬೇಕು. ನಾವು ಒಳಸೇರಿಸುವ ವಸ್ತು ಕರಗಿ ಅದ್ವೈತವನ್ನು ಸಾಧಿಸದಿದ್ದರೆ ಭೋಜನಯಜ್ಞ ವಿಫಲ. ಸಾತ್ವಿಕ ಭೋಜನ ಅದ್ವೈತವನ್ನು ಉಂಟುಮಾಡಿ ನಮ್ಮನ್ನು ದೇವತಾ ಕೃಪೆಗೆ ಕಾರಣವಾಗಿಸುತ್ತದೆ. ಅದೇ ಬೇಡದ ಅನುಚಿತ ಕರಗದಂತಹ ಆಹಾರವನ್ನು ಹವಿಸ್ಸಾಗಿ ಜಠರಾಗ್ನಿಗೆ ಅರ್ಪಿಸುವುದರಿಂದ ರಾಕ್ಷಸತ್ವ ನಮ್ಮನ್ನು ಆವರಿಸುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ನಿತ್ಯ ಯಜ್ಞವಾದ ಭೋಜನವನ್ನು ಯುಕ್ತವಾಗಿ ಅರಿಯದಿದ್ದರೆ ವೇದ ಓದಿದರೂ ಪ್ರಯೋಜನಕ್ಕೆ ಬಾರದು. ಭೋಜನವನ್ನು ಭಾವ ಮತ್ತು ಬಾಹ್ಯ ಎರಡೂ ಪ್ರಕಾರದಿಂದ ಸರಿಯಾಗಿ ಅಥೈಸಿಕೊಂಡವ ವೇದವರಿತ ಜ್ಞಾನಿಗೆ ಸಮಾನ ಎಂದು ಜ್ಞಾನಾಗ್ರೇಸರ ಶಾಸ್ತ್ರಜ್ಞರು ತಿಳಿಸಿದ್ದಾರೆ. ಇಂತಹ ಸನಾತನ ಶ್ರೇಷ್ಠರ ನುಡಿ ಯಾವತ್ತೂ ಹುಸಿಯಾಗದು. ಕಾರಣ ವಿಧಿ ಪ್ರಧಾನವಾದ ನಿತ್ಯದ ಊಟ ಯಜ್ಞವಾಗಲಿ. ಹೀಗೆ ಭೋಜನ ಎನ್ನುವುದು ನಿರಂತರ ತಪಸ್ಸಾಗಬಲ್ಲದು ಎಂದು ರಾಘವೇಶ್ವರ ಶ್ರೀಗಳು ಆಶೀರ್ವಾದವಿತ್ತರು.
ಧರ್ಮಸಭೆಯಲ್ಲಿ ಬೆಂಗಳೂರಿನ ಖ್ಯಾತ ಸಿಎಂಆರ್ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ.ಎಂ.ಎಸ್. ಶಿವಕುಮಾರ ದಂಪತಿ ಭಾಗವಹಿಸಿ ಶ್ರೀಗಳ ಆಶೀರ್ವಾದ ಪಡೆದರು.
ಚಂದ್ರಶೇಖರ ದಂಟಿನಮನೆ ಕುಟುಂಬದವರು ಗುರುಭಿಕ್ಷಾ ಸೇವೆ ನೆರವೇರಿಸಿದರು. ಭಂಡಾರಿ ಸಮಾಜದವರಿಂದ ಸ್ವರ್ಣ ಪಾದುಕಾ ಪೂಜೆ ನಡೆಯಿತು. ಸಮಾಜ ಅಧ್ಯಕ್ಷ ಶಿವು ಭಂಡಾರಿ, ಸುಬ್ರಾಯ ಭಂಡಾರಿ ಮನುವಳ್ಳಿ, ಹರಿಹರ ಭಂಡಾರಿ ಕಡತೋಕಾ ಮತ್ತು ಭಂಡಾರಿ ಸಮಾಜದ ಅಪಾರ ಸದಸ್ಯರು ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಜಿ.ವಿ. ಹೆಗಡೆ, ಸತೀಶ ಭಟ್ಟ ಧಾರೇಶ್ವರ, ದಿನಪ್ರಧಾನರಾದ ಪಾದೇಕಲ್ಲು ವಿಷ್ಣು ಭಟ್ಟ ದಂಪತಿ ಉಪಸ್ಥಿತರಿದ್ದರು.