ಶಿರಸಿಯಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪತ್ರಕರ್ತ ರವಿ ನಾಯ್ಕ ಅವರಿಗೆ ಮಾಧ್ಯಮ ಶ್ರೀ ಪ್ರಶಸ್ತಿ ಪ್ರದಾನ ಮಾಡಿದರು. ಶಿವರಾಮ ಹೆಬ್ಬಾರ್, ಎಂ.ಬಿ. ಮದನ ಗೌಡ , ನಿಂಗಪ್ಪ ಚಾವಡಿ, ಗುರು ಅಡಿ, ಕೃಷ್ಣಮೂರ್ತಿ ಕೆರೆಗದ್ದೆ, ಎಲ್.ಎಂ. ಹೆಗಡೆ ಇತರರಿದ್ದರು.
- ಶಿವಾನಂದ ತಗಡೂರು ಅಭಿಪ್ರಾಯ
- ಶಿರಸಿಯಲ್ಲಿ ಪತ್ರಿಕಾ ದಿನಾಚರಣೆ
ಪತ್ರಕರ್ತರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದಾಗ ಅವರು ಸಮಾಜದ ಅಮೂಲ್ಯ ಆಸ್ತಿಯಾಗುತ್ತಾರೆ. ಸಮಾಜಕ್ಕೆ ರೋಗ ಬಂದಾಗ ಅದನ್ನು ಗುಣಪಡಿಸುವ ಶಕ್ತಿ ಪತ್ರಕರ್ತನಲ್ಲಿದೆ. ಸಮಾಜವು ಪತ್ರಕರ್ತರನ್ನು ಸದಾ ಗಮನಿಸುತ್ತಿರುತ್ತದೆ. ಆದ್ದರಿಂದ ಪ್ರತಿಯೊಬ್ಬ ಪತ್ರಕರ್ತರೂ ತಮ್ಮ ಬರಹ, ವರದಿ ಹಾಗೂ ನಡೆ-ನುಡಿಯಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.
ತಾಲೂಕಿನ ಗೌಡಳ್ಳಿಯ ಚಂದನ ಪಪೂ ಕಾಲೇಜ್‌ನಲ್ಲಿ ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಶಿರಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಗಳ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡ ಪತ್ರಿಕಾ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿವರಾಮ ಹೆಬ್ಬಾರ ಕಾರ್ಮಿಕ ಸಚಿವರಾಗಿದ್ದ ವೇಳೆ ಇಲಾಖೆಯಲ್ಲಿ ಅನೇಕ ಬದಲಾವಣೆ ಜಾರಿಗೊಳಿಸಿ, ಪತ್ರಿಕಾ ವಿತರಕರು ಅಪಘಾತದಲ್ಲಿ ಮೃತಪಟ್ಟರೆ ಅವರಿಗೆ ಪರಿಹಾರ ಮತ್ತು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಅವರಿಗೆ ಇಲಾಖೆಯಿಂದ ಚಿಕಿತ್ಸಾ ವೆಚ್ಚವನ್ನು ಭರಿಸಿದ್ದರು. ಅವರು ಜಾರಿಗೊಳಿಸಿ ಕಾರಣಕ್ಕೆ ಅದು ಇನ್ನೂ ಮುಂದುವರಿದುಕೊಂಡು ಹೋಗುತ್ತಿದೆ ಎಂದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಮಾಧ್ಯಮ ಶ್ರೀ ಪ್ರಶಸ್ತಿಯನ್ನು ಹಿರಿಯ ವರದಿಗಾರ ರವಿ ನಾಯ್ಕ ಅವರಿಗೆ ಪ್ರದಾನ ಮಾಡಿ ಮಾತನಾಡಿದ ಶಾಸಕ ಶಿವರಾಮ ಹೆಬ್ಬಾರ್, ಪತ್ರಕರ್ತರ ಲೇಖನಿ ಸಮಾಜದ ಸಂಘರ್ಷಗಳಿಗೆ ತುಪ್ಪ ಸುರಿಯುವಂತಿರದೇ, ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಂತಿರಬೇಕು. ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯವರು ಪತ್ರಿಕಾ ರಂಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾಲಿಡುತ್ತಿರುವುದು ಸಂತಸದ ವಿಷಯ. ಹಿರಿಯ ಪತ್ರಕರ್ತರ ಆದರ್ಶ, ತತ್ವ ಹಾಗೂ ಸಿದ್ಧಾಂತಗಳನ್ನು ಯುವ ಪತ್ರಕರ್ತರು ಮಾದರಿಯಾಗಿ ಸ್ವೀಕರಿಸಬೇಕು ಎಂದರು.
ಮಿಯಾರ್ಡ್ಸ್ ಸಂಸ್ಥೆಯ ಸಂಸ್ಥಾಪಕ ಎಲ್.ಎಂ. ಹೆಗಡೆ ಮಾತನಾಡಿ, ಆರ್ಥಿಕ ಸಮಸ್ಯೆಗಳ ಕಾರಣದಿಂದ ನಮ್ಮ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಯಾವುದೇ ವಿದ್ಯಾರ್ಥಿಯನ್ನು ಶಿಕ್ಷಣದಿಂದ ವಂಚಿಸುವುದಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನರಸಿಂಹ ಅಡಿ ಮಾತನಾಡಿ, ಪ್ರಬುದ್ಧತೆಯಿಂದ ಪತ್ರಕರ್ತರ ಹಿತಾಸಕ್ತಿಯನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಸಂಘವನ್ನು ಮುನ್ನಡೆಸುವ ದೃಢಸಂಕಲ್ಪ ನಮ್ಮ ಮುಂದಿದೆ ಎಂದರು.
ಚಂದನ ಪಪೂ ಕಾಲೇಜ್ ಅಧ್ಯಕ್ಷ ವಿ.ಜಿ. ಜೋಶಿ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಬಿ. ಮದನ ಗೌಡ ಕಾರ್ಯದರ್ಶಿ ನಿಂಗಪ್ಪ ಚಾವಡಿ ಇತರರು ಉಪಸ್ಥಿತರಿದ್ದರು. ಶಿರಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಕೆರೆಗದ್ದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಬೆಟ್ಟಕೊಪ್ಪ ನಿರ್ವಹಿಸಿದರು.
ಜಿಲ್ಲಾ ಉಪಾಧ್ಯಕ್ಷ ಬಸವರಾಜ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ಮಾರುತಿ ನಾಯ್ಕ ಹೊನ್ನಾವರ ಕಾರ್ಯಕ್ರಮ ನಿರ್ವಹಿಸಿದರು.
ಶಿರಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಸಂದೇಶ ಭಟ್ಟ ಬೆಳಖಂಡ, ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ ಹೆಗಡೆ, ಕಾರ್ಯದರ್ಶಿ ಮಂಜುನಾಥ ಈರಗೊಪ್ಪ, ಗುರುಪ್ರಸಾದ ಶಾಸಿ ಸೇರಿದಂತೆ ಹಲವರು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು.
ಪ್ರಶಸ್ತಿ ಪ್ರದಾನ
ಶಿರಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡುವ ಪ್ರತಿಷ್ಠಿತ ಮಾಧ್ಯಮ ಶ್ರೀ ಪ್ರಶಸ್ತಿಯನ್ನು ಉಪ ಸಂಪಾದಕ ರವಿ ನಾಯ್ಕ ಅವರಿಗೆ ನೀಡಿ, ಗಣ್ಯರು ಸನ್ಮಾನಿಸಿದರು. ಹಿರಿಯ ಉಪ ಸಂಪಾದಕ ಗಣೇಶ ಮುರೇಗಾರ ಅವರಿಗೆ ಗೋಲ್ಡನ್ ಪೆನ್ ಪುರಸ್ಕಾರ ನೀಡಿ ಗೌರವಿಸಲಾಯಿತು. ದಿ.ಮತ್ತಿಗಾರ ಸುಬ್ಬಣ್ಣ ದತ್ತಿನಿಧಿ ಪುರಸ್ಕಾರವನ್ನು ಹಿರಿಯ ಉಪ ಸಂಪಾದಕ ಯೋಗೀಶ ಹೆಗಡೆ ಗಡಿಹಳ್ಳಿ, ದಿ. ಲಕ್ಷ್ಮೀ ಗೋಪಾಲಕೃಷ್ಣ ಭಟ್ಟ ದತ್ತಿನಿಧಿ ಪುರಸ್ಕಾರವನ್ನು ಹಿರಿಯ ಪತ್ರಿಕಾ ವಿತರಕ ಎಸ್.ಎಸ್. ಧಾರೇಶ್ವರ, ಕಬ್ನಳ್ಳಿ ದಿ. ಸರೋಜಾ ಮತ್ತು ಛತ್ರಪತಿ ಹೆಗಡೆ ದತ್ತಿನಿಧಿ ಪುರಸ್ಕಾರವನ್ನು ವರದಿಗಾರ ಮಹಾದೇವ ನಾಯ್ಕ ಅವರಿಗೆ ನೀಡಲಾಯಿತು.