ಹೊನ್ನಾವರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಾಂತ ಮೂಡಲಮನೆ ಅವರ ಐದು ಪುಸ್ತಕಗಳನ್ನು ವಿನಾಯಕ ಹೆಗಡೆ, ಡಾ. ಶ್ರೀಪಾದ ಶೆಟ್ಟಿ, ಕೃಷ್ಣಮೂರ್ತಿ ಭಟ್, ಜಿ.ಯು. ಭಟ್, ಎಸ್.ಎಚ್. ಗೌಡ , ಇತರರು ಬಿಡುಗಡೆಗೊಳಿಸಿದರು.
ಹೊನ್ನಾವರ: ಲೋಕಾಂತಕ್ಕೆ ತೆರೆದುಕೊಳ್ಳುವಾಗ ಏಕಾಂತ ಮರೆಯಾಗುತ್ತದೆ. ಮನುಷ್ಯತ್ವದ ಕುರಿತು ತುಡಿತವಿರುವ ಸಾಹಿತಿಯಿಂದ ಉತ್ತಮ ಕೃತಿ ಸಾಧ್ಯವಾಗುತ್ತದೆ ಎಂದು ಸಾಹಿತಿ ಡಾ. ಶ್ರೀಪಾದ ಶೆಟ್ಟಿ ಹೇಳಿದರು.
ಪಟ್ಟಣದಲ್ಲಿ ಸತ್ವಾಧಾರ ಫೌಂಡೇಷನ್ ಆಶ್ರಯದಲ್ಲಿ ಆಯೋಜಿಸಿದ್ದ ಪ್ರಶಾಂತ ಮೂಡಲಮನೆ ಅವರ ಐದು ಪುಸ್ತಕಗಳಾದ ‘ಪಾರಿಜಾತ’, ‘ಹುಲಿ ಬೇಟೆ ಕೆಂಚ’, ‘ಸಪ್ಪೋಡ್ತಿ’, ‘ಮಿಂಚುಳ್ಳಿ’ ಹಾಗೂ ‘ಅಪ್ಪ ಅಂದ್ರೆ ನಂಗಿಷ್ಟ’ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಪತ್ರಕರ್ತ ಜಿ.ಯು. ಭಟ್ ಮಾತನಾಡಿ, ಸಾಹಿತಿಗೆ ಸಾಮಾಜಿಕ ಜವಾಬ್ದಾರಿ ಇರಬೇಕು. ಸಾಹಿತ್ಯದಲ್ಲಿ ಸಂಖ್ಯೆ ಮುಖ್ಯ ಅಲ್ಲ. ಪುಸ್ತಕಗಳು ಹೆಚ್ಚು ಪ್ರಕಟಗೊಳ್ಳುತ್ತದೆ. ಆದರೆ, ಓದುವವರಿಲ್ಲ. ಇದು ಈ ನೆಲದ ಈಗಿನ ಪರಿಸ್ಥಿತಿ ಆಗಿದೆ. ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಕೃತಿಗಳು ಬರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಿ.ಎ. ವಿನಾಯಕ ಹೆಗಡೆ ಮಾತನಾಡಿದರು. ಕೃತಿಕಾರ ಪ್ರಶಾಂತ ಮೂಡಲಮನೆ ಪ್ರಾಸ್ತಾವಿಕವಾಗಿ ಮಾತನಾಡಿ, ಪುಸ್ತಕವನ್ನು ಪ್ರಕಟಿಸುವುದು ಬಹುದಿನಗಳ ಕನಸಾಗಿತ್ತು. ಈ ಕನಸು ನನ್ನ ಹಿತೈಷಿಗಳ ಸಹಕಾರದಿಂದ ಇಂದು ನನಸಾಗಿದೆ ಎಂದರು.
ಉಪನ್ಯಾಸಕ ನಾಗರಾಜ ಹೆಗಡೆ ಅಪಗಾಲ ಕೃತಿ ಪರಿಚಯಿಸಿದರು. ಎಂಪಿಇ ಸೊಸೈಟಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್, ಕಸಾಪ ಅಧ್ಯಕ್ಷ ಎಸ್.ಎಚ್. ಗೌಡ, ತೆರಿಗೆ ಸಲಹೆಗಾರರಾದ ಸಂಧ್ಯಾ ಹೆಗಡೆ ಕೂಜಳ್ಳಿ, ಶಿಕ್ಷಕಿ ಮಮತಾ ಹೆಗಡೆ, ಉಪನ್ಯಾಸಕ ಚಿದಾನಂದ ಭಂಡಾರಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಕೃತಿಕಾರ ಪ್ರಶಾಂತ ಮೂಡಲಮನೆ ಅವರನ್ನು ಗೌರವಿಸಲಾಯಿತು. ಸತ್ವಾಧಾರ ಫೌಂಡೇಷನ್ ಸಂಸ್ಥಾಪಕ ಗಣೇಶ ಜೋಶಿ, ಅದ್ವಿಕಾ ಹೆಗಡೆ, ವಿದ್ಯಾಧರ ಕಡತೋಕ ಕಾರ್ಯಕ್ರಮ ನಿರ್ವಹಿಸಿದರು.