ಹಳಿಯಾಳದ ಗ್ರಾಮದೇವಿ ಮೈದಾನದಲ್ಲಿ ಆಯೋಜಿಸಿದ್ದ ವಿರಾಟ ಹಿಂದು ಸಮಾವೇಶ ಕಾರ್ಯಕ್ರಮದಲ್ಲಿ ಕಲಬುರ್ಗಿ ವಿಭಾಗದ ಪ್ರಾಂತ ಪ್ರಮುಖ ಶ್ರೀನಿವಾಸ ಮಾತನಾಡಿದರು. ಸುಬ್ರಹ್ಮಣ್ಯ ಸ್ವಾಮೀಜಿಗಳು, ಉದಯ ಜಾಧವ ಇತರರಿದ್ದಾರೆ.
ಹಳಿಯಾಳ: ದೇಶದಲ್ಲಿ ಜಾತಿ ವ್ಯವಸ್ಥೆ ಮತ್ತು ಅಸ್ಪಶ್ಯತೆಯಂತಹ ಆಚರಣೆಗಳು ನಿರ್ಮೂಲನೆಯಾದರೇ ಮಾತ್ರ ಸಂಘಟಿತ ಹಿಂದು ಸಮಾಜ ನಿರ್ಮಾಣ ಸಾಧ್ಯ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಲಬುರ್ಗಿ ವಿಭಾಗದ ಪ್ರಾಂತ ಪ್ರಮುಖ ಶ್ರೀನಿವಾಸ ಹೇಳಿದರು.
ಪಟ್ಟಣದಲ್ಲಿ ಗುರುವಾರ ಸಂಜೆ ಪುರಸಭೆ ಎದುರಿನ ಗ್ರಾಮದೇವಿ ಮೈದಾನದಲ್ಲಿ ಆಯೋಜಿಸಿದ್ದ ವಿರಾಟ್ ಹಿಂದು ಸಮಾವೇಶದಲ್ಲಿ ಅವರು ಮಾತನಾಡಿದರು.
ಹಿಂದು ಧರ್ಮದ ಮೇಲೆ ಸಾವಿರಾರು ವರ್ಷ ದಾಳಿ, ದೌರ್ಜನ್ಯ ನಡೆದರು ಧರ್ಮ ನಾಶವಾಗಿಲ್ಲ. ಏಕೆಂದರೇ ವಸುದೈವ ಕುಟುಂಬಕಂ ಮತ್ತು ಸರ್ವೆಜನ ಸುಖಿನೋ ಭವಂತು ಎನ್ನುವ, ಸಕಲ ಜೀವಿಗಳಲ್ಲಿ ,ಮಣ್ಣು, ಗಾಳಿ , ಕಲ್ಲು ಹೀಗೆ ಪ್ರತಿಯೊಂದು ವಸ್ತುವಿನಲ್ಲೂ ದೇವರನ್ನು ಕಾಣುವ ಸನಾತನ ಹಿಂದು ಧರ್ಮ ಎಂದು ಇನ್ನೊಬ್ಬರಿಗೆ ಕೆಡುಕನ್ನು ಬಯಸುವುದಿಲ್ಲ, ಹಿಂಸೆಗೆ ಪ್ರಚೋದನೆ ನೀಡುವುದಿಲ್ಲ. ಹೀಗಾಗಿ ಹಿಂದು ಧರ್ಮ ಜೀವಂತವಿದೆ. ಬಾಂಗ್ಲಾದಲ್ಲಿ ತುಳಿತಕ್ಕೊಳಗಾಗುತ್ತಿರುವ ಹಿಂದುಗಳ ಕಷ್ಟದಲ್ಲಿ ಭಾಗಿಯಾಗೋಣ ಎಂದು ಕರೆ ನೀಡಿದರು.
ಕೆಕೆ ಹಳ್ಳಿ ಶ್ರೀ ಗುರು ನಿತ್ಯಾನಂದ ಆಶ್ರಮದ ಸುಬ್ರಹ್ಮಣ್ಯ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ವಿರಾಟ ಹಿಂದು ಸಮಾವೇಶ ಸಮಿತಿ ಅಧ್ಯಕ್ಷ ಉದಯ ಜಾಧವ ಮಾತನಾಡಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಸ್ವಾಮಿಜಿಗಳ ಪಾದಪೂಜೆ ಮತ್ತು ಸಾಮೂಹಿಕ ಮಾತಾಪಿತೃಗಳ ಪಾದಪೂಜೆ ನೆರವೇರಿತು. ವಿಧಿವಿಧಾನಗಳನ್ನು ಉಮಾಶಂಕರ ಮದ್ನಳ್ಳಿಮಠ ರವರು ತಿಳಿಸಿದರು.
ವಿಶ್ವಹಿಂದು ಪರಿಷತ್ ಭಜರಂಗದ ಕಾರ್ಯಕರ್ತರಿಂದ ಸಾಮೂಹಿಕ ಶ್ರೀ ಹನುಮಾನ್ ಚಾಲಿಸಾ ಪಠಣ ಕಾರ್ಯಕ್ರಮ ನಡೆಯಿತು.
ಡಾ. ಎಂ.ಜಿ. ಗೋಖಲೆ, ಸಮಿತಿ ಉಪಾಧ್ಯಕ್ಷ ಶಿವು ಶೆಟ್ಟರ, ರುಕ್ಮಾಯಿ ಕೆ. ಪೂಜಾರಿ ಇದ್ದರು. ಯಲ್ಲಪ್ಪ ಮಾಲವಣಕರ ಕಾರ್ಯಕ್ರಮ ನಿರ್ವಹಿಸಿದರು.