ಕಾರವಾರದ ಮಾಲಾದೇವಿ ಮೈದಾನದಲ್ಲಿ ಕ್ರಿಕೆಟ್‌ ಆಡಿದ ರಿತೇಶ ಅವರಿಗೆ ಕಾರವಾರ ಸ್ಪೋಟ್ಸ್‌ ಕ್ಲಬ್‌ನ ಕೋಚ್‌ ಗಿರೀಶ ನಾಯ್ಕ, ಅಸಿಸ್ಟೆಂಟ್‌ ಕೋಚ್‌ ಅಮಿತ್‌ ಕಾಮತ್‌ ಕಪ್‌ ಹಸ್ತಾಂತರಿಸಿದರು.  Cricket
ಉತ್ತರ ಕನ್ನಡ

ಕಾರವಾರದ ಹುಡುಗ ಈಗ ಕರ್ನಾಟಕ ರಣಜಿ ತಂಡದ ಸದಸ್ಯ

ಕಾರವಾರ: ಇಲ್ಲಿನ ಮಾಲಾದೇವಿ ಮೈದಾನದಲ್ಲಿ ಆಡಿ ಬೆಳೆದ ಹುಡುಗ ಈಗ ಕರ್ನಾಟಕ ರಣಜಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ರಿತೇಶ ಭಟ್ಕಳ ರಣಜಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಬೆಂಗಳೂರಿನ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ಕರ್ನಾಟಕ ಬುಲ್ಡೋಜರ್ ತಂಡದ ಮುಖ್ಯ ಕೋಚ್ ಆಗಿರುವ ರಿತೇಶ, ಬೂಟ್ ಕ್ಯಾಂಪ್ ಎಂಬ ಕ್ರಿಕೆಟ್ ಅಡಾಡೆಮಿಯನ್ನೂ ನಡೆಸುತ್ತಿದ್ದಾರೆ. ರಿತೇಶ ತಂದೆ ಲಕ್ಷ್ಮೀಶ ಅವರು ಕಾರವಾರ ಡಿಪ್ಲೊಮಾ ಕಾಲೇಜ್‌ನಲ್ಲಿ ರಿಜಿಸ್ಟ್ರಾರ್‌ ಆಗಿದ್ದರು ಎಂದು ಕಾಲೇಜ್‌ನ ನಿವೃತ್ತ ಪ್ರಾಂಶುಪಾಲ ವಿ.ಎಂ.ಹೆಗಡೆ ನೆನಪಿಸಿಕೊಳ್ಳುತ್ತಾರೆ. ಲಕ್ಷ್ಮೀಶ ಅವರು ಇಲ್ಲಿದ್ದಾಗ ಮಗ ರಿತೇಶ ಸೇಂಟ್ ಜೋಸೆಫ್‌ನಲ್ಲಿ ಪ್ರಾಥಮಿಕ ಹಾಗೂ ಹಿಂದು ಹೈಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣ ಓದಿದ್ದರು. ಇಲ್ಲಿನ ಮಾಲಾದೇವಿ ಮೈದಾನದಲ್ಲಿ ಕಾರವಾರ ಕ್ರಿಕೆಟ್‌ ಕ್ಲಬ್‌ನಿಂದ ಕೋಚಿಂಗ್‌ ಪಡೆದಿದ್ದರು. ಕ್ರಿಕೆಟ್ ಆಡಿ, ಕಲಿತಿದ್ದರು, ಬೆಳೆದಿದ್ದರು ಎಂದು ಕಾರವಾರದ ಕ್ರಿಕೆಟ್ ಪ್ರೇಮಿಗಳು ನೆನಪಿಸಿಕೊಳ್ಳುತ್ತಾರೆ.

"ರಿತೇಶ ಕ್ರಿಕೆಟ್ ಬಗ್ಗೆ ಅತ್ಯುತ್ಸಾಹ ಹೊಂದಿದ್ದರು. ಅವರ ಫೀಲ್ಡಿಂಗ್ ಅತ್ಯುತ್ತಮವಾಗಿತ್ತು. ಎರಡು ವರ್ಷಗಳ ಹಿಂದೆ ಕಾರವಾರ ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ಗಿರೀಶ ನಾಯ್ಕ ಅವರು ನಡೆಸಿದ `ಭೈರಾ' ಹೆಸರಿನ ಕ್ರಿಕೆಟ್ ಟೂರ್ನಮೆಂಟ್ ಒಂದರಲ್ಲಿ ಅವರನ್ನು ಕರೆಸಿದ್ದೆವು. ರಿತೇಶ ಕಾರವಾರ ಸ್ಪೋಟ್ಸ್ ಕ್ಲಬ್- ಎ ತಂಡದ ಪರವಾಗಿ ಆಡಿದ್ದರುʼ ಎಂದು ಕ್ಲಬ್‌ನ ಸಹ ಕೋಚ್‌ ಅಮಿತ್ ಕಾಮತ್ ನೆನಪಿಸಿಕೊಳ್ಳುತ್ತಾರೆ.