ಕಾರವಾರ: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆದು ಜಿಲ್ಲೆಯ 6 ವಿಧಾನಸಭಾ ಕ್ಷೇತ್ರದ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದೆ. ಜಿಲ್ಲೆಯಲ್ಲಿ 5,70,006 ಪುರುಷರು, 5,69,614 ಮಹಿಳೆಯರು 3 ತೃತೀಯ ಲಿಂಗಿಗಳು ಸೇರಿ ಒಟ್ಟು 11,39,623 ಮತದಾರರ ಹೆಸರನ್ನು ಸೇರಿಸಲಾಗಿದೆ.
ಜಿಲ್ಲೆಯಲ್ಲಿ ಮೊದಲು 12.30 ಲಕ್ಷ ಹೆಸರುಗಳು ಮತದಾರರ ಪಟ್ಟಿಯಲ್ಲಿದ್ದವು. ಅವುಗಳಲ್ಲಿ 44,051 ಮೃತರ ಹೆಸರುಗಳಿದ್ದವು. 45,581 ಮತದಾರರು ಬೇರೆ ವಿಧಾನಸಭಾ ಕ್ಷೇತ್ರಕ್ಕೆ ವಲಸೆ ಹೋಗಿದ್ದರು. ಎರಡೆರಡು ಕಡೆ ಹೆಸರಿರುವ 12,731 ಮತದಾರರನ್ನು ಕೈಬಿಡಲಾಗಿತ್ತು. ಆಗಸ್ಟ್ 24 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿತ್ತು. ಅದರಲ್ಲಿ 11,23,022 ಹೆಸರುಗಳಿದ್ದವು. ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. 65, 330 ಮತದಾರರಿಗೆ ಖುದ್ದಾಗಿ ಹಾಜರಾಗಿ ದಾಖಲೆಗಳನ್ನು ಹಾಜರು ಮಾಡುವಂತೆ ನೋಟಿಸ್ ಜಾರಿ ಮಾಡಲಾಗಿತ್ತು. ದಾಖಲೆ ಪರಿಶೀಲನೆಯ ನಂತರ 16,601 ಹೆಸರುಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟಾರೆ ಜಿಲ್ಲೆಯಲ್ಲಿ 90,414 ಹೆಸರುಗಳನ್ನು ಕಡಿಮೆ ಮಾಡಲಾಗಿದೆ.
ಜನಸಂಖ್ಯೆಗೆ ಹೋಲಿಸಿದರೆ ಅತಿ ಹೆಚ್ಚು ಮತದಾರರಿರುವ ಜಿಲ್ಲೆಗಳ ಪೈಕಿ ಉತ್ತರ ಕನ್ನಡವೂ ಒಂದು. ಜಿಲ್ಲೆಯಲ್ಲಿ 2026 ರಲ್ಲಿ 16.20 ಲಕ್ಷ ಮತದಾರರು ಇರಬಹುದು ಎಂದು ಅಂದಾಜಿಸಲಾಗಿದೆ. ಅವರಲ್ಲಿ 11.39 ಲಕ್ಷ ಎಂದರೆ ಶೇ 70.31 ರಷ್ಟು ಮತದಾರರಾಗಿದ್ದಾರೆ. ಎಂದರೆ ಶೇ.29.69 ರಷ್ಟು ಜನ 18 ವರ್ಷದೊಳಗಿನವರಾಗಿದ್ದಾರೆ. ಕರ್ನಾಟಕದ ಜನಸಂಖ್ಯೆಗೆ ಹೋಲಿಸಿದರೆ ಶೇ.66.11 ರಷ್ಟು ಮಾತ್ರ ಮತದಾರರಾಗಿದ್ದಾರೆ. ಉಡುಪಿ, ದಕ್ಷಿಣ ಕನ್ನಡ, ರಾಮನಗರ, ಹಾಗೂ ಚಿತ್ರದುರ್ಗ ಜಿಲ್ಲೆಗಳು ಉತ್ತರ ಕನ್ನಡಕ್ಕಿಂತ ಹೆಚ್ಚು ಮತದಾರರ ಪ್ರಮಾಣವನ್ನು ಹೊಂದಿವೆ.
ಜಿಲ್ಲೆಯಲ್ಲಿ 85 ವರ್ಷ ಮೇಲ್ಪಟ್ಟವರಿಗಿಂತ ಯುವ ಜೆನ್ ಜಿ ಮತದಾರರ ಸಂಖ್ಯೆಯೇ ಹೆಚ್ಚಿದೆ. ಈ ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ 18 ರಿಂದ 19 ವರ್ಷ ವಯಸ್ಸಿನ 8,935 ಪುರುಷ, 8,634 ಮಹಿಳೆ ಸೇರಿ ಒಟ್ಟು 17,569 ಹೆಸರುಗಳನ್ನು ಹೊಸದಾಗಿ ಸೇರಿಸಲಾಗಿದೆ. 3816 ಪುರುಷ, 5724 ಮಹಿಳೆ ಸೇರಿ ಒಟ್ಟು 9540 ಮತದಾರರು 85 ವರ್ಷಕ್ಕಿಂತ ಮೇಲ್ಪಟ್ಟವರು ಎಂದು ಗುರುತಿಸಲಾಗಿದೆ. ಒಟ್ಟಾರೆ ಮತದಾರರ ಪೈಕಿ 1101 ಪುರುಷ, 52 ಮಹಿಳೆ ಸೇರಿ 1153 ಸೇವಾ ಮತದಾರರಿದ್ದಾರೆ. 9,272 ಪುರುಷ, 6289 ಮಹಿಳೆ ಸೇರಿ ಒಟ್ಟು 15,561 ಅಂಗವಿಕಲ ಮತದಾರರಿದ್ದಾರೆ.
ಜಿಲ್ಲೆಯಲ್ಲಿ 50 ಸಾವಿರಕ್ಕೂ ಅಽಕ ಜನ ವಿದೇಶಗಳಲ್ಲಿ ವಾಸವಿದ್ದವರಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ಸಾಮಾನ್ಯ ಮಾಹಿತಿ ಆದರೆ. ಮತದಾರರ ಪಟ್ಟಿಯಲ್ಲಿ ಇಬ್ಬರು ಮಾತ್ರ ಎನ್ಆರ್ಐ ಮತದಾರರು ಎಂದು ಗುರುತಿಸಿಕೊಂಡಿದ್ದಾರೆ. ಶಿರಸಿಯಲ್ಲಿ ಒಬ್ಬ ಪುರುಷ ಹಾಗೂ ಒಬ್ಬ ಮಹಿಳೆಯ ಹೆಸರು ಮಾತ್ರ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ರಾಜ್ಯದಲ್ಲಿ 3252 ಎನ್ಆರ್ಐ ಮತದಾರರ ಹೆಸರಿದ್ದು, ಅದರಲ್ಲಿ ಬೆಂಗಳೂರು ಮಹಾ ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನವರು ನೋಂದಾಯಿಸಿಕೊಂಡಿದ್ದಾರೆ.
ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ ಪ್ರತಿ 1 ಸಾವಿರ ಪುರುಷರಿಗೆ 999 ಮಹಿಳೆಯರಿದ್ದಾರೆ. ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಲಿಂಗಾನುಪಾತ ಹೆಚ್ಚಿದೆ. ಎಂದರೆ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿದ್ದಾರೆ. ಕಾರವಾರದಲ್ಲಿ ಲಿಂಗಾನುಪಾತ ಪ್ರತಿ 1000 ಪುರುಷರಿಗೆ 1040 ಇದ್ದರೆ, ಕುಮಟಾ ಕ್ಷೇತ್ರದಲ್ಲಿ 1008, ಶಿರಸಿ ಕ್ಷೇತ್ರದಲ್ಲಿ 1006 ಇದೆ. ಭಟ್ಕಳದಲ್ಲಿ ಅತಿ ಕಡಿಮೆ ಎಂದರೆ 973, ಯಲ್ಲಾಪುರದಲ್ಲಿ 980 ಹಾಗೂ ಹಳಿಯಾಳದಲ್ಲಿ 990 ಲಿಂಗಾನುಪಾತವಿದೆ.
ಫಾರ್ಮ್ ನಂಬರ್ 7 ಆಧರಿಸಿ, ಪರಿಶೀಲನೆ ನಡೆಸಿದ ಇಆರ್ಒ ಅವರು ಒಟ್ಟು 575 ಹೆಸರುಗಳನ್ನು ಅನರ್ಹ ಎಂದು ಪಟ್ಟಿ ಮಾಡಿದ್ದಾರೆ. ಹಳಿಯಾಳದಲ್ಲಿ 128, ಕಾರವಾರ-87, ಕುಮಟಾ-129, ಭಟ್ಕಳ-106, ಶಿರಸಿ-82 ಹೆಸರುಗಳನ್ನು ಪಟ್ಟಿ ಮಾಡಲಾಗಿದೆ.
ಕ್ಷೇತ್ರ ಮಹಿಳೆ ಪುರುಷ ಒಟ್ಟು ಮತದಾರರು
ಹಳಿಯಾಳ 85,606 84,760 1,70,367
ಕಾರವಾರ 98,736 1,02,733 2,01,469
ಕುಮಟಾ 89,203 89,909 1,79,114
ಭಟ್ಕಳ 1,10,492 1,07,511 2,18,003
ಶಿರಸಿ 97,253 97,791 1,95,044
ಯಲ್ಲಾಪುರ 88,716 86,910 1,75,626