ದಾಂಡೇಲಿಯಲ್ಲಿ ಪೂರ್ಣಗೋಳ್ಳದ ವಸತಿ ಯೋಜನೆಯ ಮನೆಗಳು  
ಉತ್ತರ ಕನ್ನಡ

ಜಿಲ್ಲೆಯ 63 ಸಾವಿರ ಕುಟುಂಬಗಳಿಗಿಲ್ಲ ಸ್ವಂತ ಸೂರು!!

23 ಸಾವಿರ ಕುಟುಂಬಗಳಿಗೆ ನಿವೇಶನವೇ ಇಲ್ಲ. ಆದರೆ, ಸರ್ಕಾರ ಜಿಲ್ಲೆಯಲ್ಲಿ ಹಂಚಿದ್ದು, 28 ನಿವೇಶನ ಮಾತ್ರ

ಸುಭಾಸ ಧೂಪದಹೊಂಡ ಕಾರವಾರ ಪ್ರತಿಯೊಬ್ಬರಿಗೂ ಸ್ವಂತ ಮನೆ ಹೊಂದುವ ಕನಸಿರುತ್ತದೆ. ಆದರೆ, ಉತ್ತರ ಕನ್ನಡವರಿಗೆ ಸ್ವಂತ ಮನೆ ಎಂಬುದು ಕನ್ನಡಿಯೊಳಗಿನ ಗಂಟಾಗಿದೆ.

ಜಿಲ್ಲೆಯಲ್ಲಿ ಅರಣ್ಯ ಭೂಮಿ ಹಾಗೂ ನಿರ್ಬಂಧಿತ ಭೂಮಿಗಳು ಹೆಚ್ಚಿರುವ ಕಾರಣಕ್ಕೆ ಸರ್ಕಾರದ ಯಾವುದೇ ವಸತಿ ಯೋಜನೆಗಳು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಕರ್ನಾಟಕ ಗೃಹ ಮಂಡಳಿ ಹಾಗೂ ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರಗಳು ಜಿಲ್ಲೆಯಲ್ಲಿ ಹೊಸ ವಸತಿ ಯೋಜನೆ ಕೈಗೆತ್ತಿಕೊಳ್ಳದೇ ದಶಕ ಕಳೆದಿದೆ. ರಾಜೀವ ಗಾಂಧಿ ವಸತಿ ನಿಗಮದ ಅಡಿ ಮನೆಗಳ ನಿರ್ಮಾಣಕ್ಕೆ ವಿವಿಧ ಯೋಜನೆಯಲ್ಲಿ ಸಹಾಯಧನ ನೀಡಲಾಗುತ್ತದೆ. ಆದರೆ, ಅದನ್ನು ಪಡೆಯಲು ಸ್ವಂತ ನಿವೇಶನ ಹೊಂದಿದವರೇ ಹೆಚ್ಚು. ಇನ್ನು ಕೊಳಚೆ ಅಭಿವೃದ್ಧಿ ಮಂಡಳಿಯಿಂದ ಹಳಿಯಾಳ, ದಾಂಡೇಲಿಯಲ್ಲಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆಯಾದರೂ ಅವುಗಳು ಇದುವರೆಗೂ ಹಂಚಿಕೆಯಾಗಿಲ್ಲ.

ಎಷ್ಟು ಜನರಿಗೆ ಮನೆಯಿಲ್ಲ..?

ಜಿಲ್ಲೆಯಲ್ಲಿ ಪ್ರಸ್ತುತ ಮಾಹಿತಿಯಂತೆ 4.01 ಲಕ್ಷ ರೇಶನ್ ಕಾರ್ಡ್ಗಳಿವೆ ಎಂದರೆ ನಾಲ್ಕು ಲಕ್ಷ ಕುಟುಂಬಗಳಿವೆ. ಅದರಲ್ಲಿ ರಾಜೀವ ಗಾಂಧಿ ವಸತಿ ನಿಗಮದ ಸರ್ವೇಯಂತೆ 63,730 ಕುಟುಂಬಗಳಿಗೆ ಸ್ವಂತ ಮನೆಯಿಲ್ಲ. ಅದರಲ್ಲಿ 26,687 ಕುಟುಂಬಗಳಿಗೆ ಮನೆ ಕಟ್ಟಿಕೊಳ್ಳಲು ಸ್ವಂತ ನಿವೇಶನವೂ ಇಲ್ಲ. ಅದರಲ್ಲಿ 2599 ಎಸ್‌ಸಿ, 401 ಎಸ್‌ಟಿ 4767 ಅಲ್ಪ ಸಂಖ್ಯಾತ ಕುಟುಂಬಗಳಿವೆ. ಇನ್ನೂ 37,043 ಕುಟುಂಬಗಳಿಗೆ ಸ್ವಂತ ನಿವೇಶನವಿದ್ದರೂ ಮನೆಯಿಲ್ಲ.

28 ಮಾತ್ರ ನಿವೇಶನ

ಜಿಲ್ಲೆಯಲ್ಲಿ 26 ಸಾವಿರಕ್ಕೂ ಅಽಕ ನಿವೇಶನ ರಹಿತರಿದ್ದಾರೆ. ಆದರೆ, ನಿವೇಶನ ರಹಿತರಿಗೆ ಹಕ್ಕು ಪತ್ರ ನೀಡುವ ಕಾರ್ಯಗಳು ಯಾವುದೇ ಸ್ಥಳೀಯ ಸಂಸ್ಥೆಗಳಿಂದ ನಡೆಯುತ್ತಿಲ್ಲ. ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ 65,185 ನಿವೇಶನಗಳನ್ನು ವಿವಿಧ ವರ್ಗದವರಿಗೆ ಹಂಚಲಾಗಿದೆ. ಕೆಲವು ಜಿಲ್ಲೆಯಲ್ಲಿ 5 ಸಾವಿರವರೆಗೂ ನಿವೇಶನ ಹಂಚಲಾಗಿದೆ. ಉತ್ತರ ಕನ್ನಡದಲ್ಲಿ ಈ ಸಂಖ್ಯೆ 28 ಮಾತ್ರ. ಗ್ರಾಮೀಣ ಭಾಗದಲ್ಲಿ ಶಿರಸಿಯ ದೊಡ್ನಳ್ಳಿಯಲ್ಲಿ 14 ನಿವೇಶನಗಳನ್ನು ಹಂಚಲಾಗಿದೆ. ಶಹರ ಪ್ರದೇಶದಲ್ಲಿ ಸಿದ್ದಾಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 14 ನಿವೇಶನಗಳನ್ನು ವಿತರಿಸಲಾಗಿದೆ.ವಸತಿ ಯೋಜನೆ ಜಾರಿಗೆ ಜೊಯಿಡಾದಲ್ಲಿ 2 ಎಕರೆ ಸರ್ಕಾರಿ ಜಾಗ,ಹಳಿಯಾಳದಲ್ಲಿ 7.25 ಎಕರೆ ಖಾಸಗಿ ಜಾಗ ಲಭ್ಯವಿದೆ. ಸಿದ್ದಾಪುರದಲ್ಲಿ 3.75 ಎಕರೆ ಖಾಸಗಿ ಜಾಗ ಗುರುತಿಸಲಾಗಿದೆ. ದಾಂಡೆಲಿ, ಸಿದ್ದಾಪುರ, ಮುಂಡಗೋಡ ಹಾಗೂ ದಾಂಡೇಲಿ ನಗರ ವ್ಯಾಪ್ತಿಯಲ್ಲಿ ಒಟ್ಟು 163 ಎಕರೆ ಜಾಗ ಗುರುತಿಸಲಾಗಿದೆ. ಆದರೆ, ಅವುಗಳನ್ನು ಹಂಚಲು ವಿಳಂಬ ಮಾಡಲಾಗುತ್ತಿದೆ.

ತಾಲೂಕುವಾರು ವಸತಿ ರಹಿತರು

ತಾಲೂಕು ವಸತಿ ರಹಿತರು ನಿವೇಶನ ರಹಿತರು

  1. ಕಾರವಾರ 859 3536

  2. ಜೊಯಿಡಾ 1908 114

  3. ಹಳಿಯಾಳ 5038 828

  4. ಯಲ್ಲಾಪುರ 3446 270

  5. ಮುಂಡಗೋಡ 5293 411

  6. ಶಿರಸಿ 5978 1259

  7. ಅಂಕೋಲಾ 2606 2223

  8. ಕುಮಟಾ 3105 4150

  9. ಸಿದ್ದಾಪುರ 4136 337

  10. ಹೊನ್ನಾವರ 2111 8256

  11. ಭಟ್ಕಳ 2249 4888

  12. ದಾಂಡೇಲಿ 314 415

............