ಕಾರವಾರದಲ್ಲಿ ಪ್ರತಿಭಟನಾಕಾರರನ್ನು ಬಂಧಿಸಲಾಯಿತು.  
ಉತ್ತರ ಕನ್ನಡ

40 ಪ್ರತಿಭಟನೆಕಾರರ ಬಂಧನ

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಪ್ರತಿಭಟನೆ
  • ಎಡ ಸಂಘಟನೆಗಳ ಪ್ರಮುಖರ ಬಂಧನ ಬಿಡುಗಡೆ
ಕಾರವಾರ: ಸಿಐಟಿಯು ನೇತೃತ್ವದ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ಜೈಲ್ ಭರೋ ಚಳುವಳಿ ನಡೆಸಲಾಯಿತು.
ನಗರದ ಪ್ರಮುಖ ಬೀದಿಗಳಲ್ಲಿ ಕೆಂಪು ಬಾವುಟ ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸಿದ ರೈತ, ಕಾರ್ಮಿಕ, ಕೂಲಿಕಾರರ ಸಂಘಟನೆಗಳ ಪ್ರಮುಖರು. ಜಿಲ್ಲಾಧಿಕಾರಿ ಕಚೇರಿಯ ಎದುರು ಸೇರಿದರು. ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಜಿಲ್ಲಾಧಿಕಾರಿ ಕಚೇರಿಯ ಗೇಟ್‌ಗೆ ನುಗ್ಗಲು ಯತ್ನಿಸಿದ 40 ಪ್ರತಿಭಟನಾಕಾರರನ್ನು ಪೊಲೀಸ್ ವಾಹನದಲ್ಲಿ ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು.
ಈ ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ಸಿಐಟಿಯು ಕ್ವಿಟ್ ಇಂಡಿಯಾ ಚಳುವಳಿಯ ನೇನಪಿಗಾಗಿ ದೇಶಾದ್ಯಂತ ಈ ಚಳುವಳಿ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರ್ಕಾರ ಕಾರ್ಪೊರೇಟ್ ಸಂಸ್ಥೆಗಳ ಪರವಾಗಿ ಕಾರ್ಯ ನಿರ್ವಹಿಸುತ್ತಿದೆ. ಕಾರ್ಪೊರೇಟ್‌ಗಳೇ ದೇಶ ಬಿಟ್ಟು ತೊಲಗಿ ಎಂಬುದು ನಮ್ಮ ಪ್ರಮುಖ ಘೋಷಣೆಯಾಗಿದೆ. ಹೊಸ ಕಾರ್ಮಿಕ ಕಾಯ್ದೆ ಕಾರ್ಪೊರೇಟ್ ಕಂಪನಿಗಳ ಪರವಾಗಿದೆ. ಅದನ್ನು ಜಾರಿ ಮಾಡದಂತೆ ಸಾಕಷ್ಟು ಹೋರಾಟ ನಡೆಸಿದರೂ ಕಿವಿಗೆ ಹಾಕಿಕೊಳ್ಳದ ಕೇಂದ್ರ ಸರ್ಕಾರ ಕಾರ್ಮಿಕರಿಗೆ ಅನ್ಯಾಯ ಮಾಡಿದೆ ಎಂದರು.
ಜೆಸಿಟಿಯು ರಾಜ್ಯ ಕಾರ್ಯದರ್ಶಿ ಸುನಂದಾ ಮಾತನಾಡಿ, ಪರಿಷ್ಕೃತ ಕನಿಷ್ಠ ವೇತನ ಜಾರಿಗೆ ರಾಜ್ಯ ಸರ್ಕಾರದಿಂದ ಆದೇಶವಾಗಿದೆ. ಆದರೆ, ಅದನ್ನು ಜಾರಿ ಮಾಡಿಲ್ಲ. ಅದನ್ನು ತಡೆ ಹಿಡಿಯುವ ಪ್ರಯತ್ನ ನಡೆದಿದೆ. ಸರ್ಕಾರಿ ಉದ್ದಿಮೆಗಳನ್ನು, ಕಂಪನಿಗಳನ್ನು ಕೇಂದ್ರ ಸರ್ಕಾರ ಖಾಸಗೀಕರಣ ಮಾಡುತ್ತಿದೆ. ಬಂಡವಾಳಶಾಹಿಗಳಿಗೆ ಕೆಂಪು ಹಾಸು ಹಾಕಿ ಅವರಿಗೆ ದೊಡ್ಡ ಪ್ರಮಾಣದದಲ್ಲಿ ರೈತರ ಭೂಮಿ ನೀಡಲಾಗುತ್ತಿದೆ. ತೆರಿಗೆ ವಿನಾಯಿತಿ. ನೀಡಲಾಗುತ್ತಿದೆ.
ಗಾಂಧಿಜಿ ಹೆಸರಿನ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಬದಲಿಸಿ ರಾಮನ ಹೆಸರನ್ನು ಇಡಲಾಗಿದೆ. ಹಲವು ಸೌಲಭ್ಯಗಳನ್ನು ರದ್ದು ಮಾಡಲಾಗಿದೆ. 2025 ರ ವಿದ್ಯುತ್ ಕಾಯ್ದೆಯೂ ಗ್ರಾಹಕರ ವಿರೋಧಿಯಾಗಿದೆ. ಎಲ್ಲ ವಿಷಯಗಳನ್ನು ಆಧರಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು. ಸಂಘಟನೆಯ ಪ್ರಮುಖರಾದ ಶಾಂತಾರಾಮ ನಾಯಕ, ಶ್ಯಾಮನಾಥ ನಾಯ್ಕ ಇತರರು ಪ್ರತಿಭಟನೆಯಲ್ಲಿದ್ದರು.