ಆರ್‌ಟಿಐ ಆಯುಕ್ತರು ಕಾರವಾರದಲ್ಲಿ ಸಭೆ ನಡೆಸಿದರು.  
ಉತ್ತರ ಕನ್ನಡ

19 ಮಾಹಿತಿ ಹಕ್ಕು ಕಾರ್ಯಕರ್ತರು ಕಪ್ಪು ಪಟ್ಟಿಯಲ್ಲಿ

ಸುಭಾಸ ಹೆಗಡೆ ಧೂಪದಹೊಂಡ
ಕಾರವಾರ : ಮಾಹಿತಿ ಹಕ್ಕು ಕಾಯ್ದೆ ಹೋರಾಟದ ಮೂಲಕ ಜಾರಿಯಾಗಿದ್ದಾಗಿದೆ. ಭ್ರಷ್ಟಾಚಾರ, ದುರಾಡಳಿತ ತಡೆಯಲು ಇದೊಂದು ಪ್ರಮುಖ ಅಸ್ತ್ರವಾಗಿದೆ. ಸಾರ್ವಜನಿಕ ಹಿತಾಸಕ್ತಿಯ, ಸದ್ದುದ್ದೇಶಕ್ಕಾಗಿ ಅದನ್ನು ಬಳಸಿಕೊಳ್ಳಿ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಡಾ. ಹರೀಶ್ ಕುಮಾರ್ ಸಾರ್ವಜಿಕರಿಗೆ ಕರೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಅಧಿಕಾರಿಗಳ ಸಭೆ ನಡೆಸಿದರು. ನಂತರ ಸಾರ್ವಜನಿಕರ ಜೊತೆ ಸಂವಾದ ನಡೆಸಿ, ಮಾಧ್ಯಮದವರ ಜೊತೆ ಮಾತನಾಡಿದರು. ಕಾಯ್ದೆಯಡಿ ಅರ್ಜಿಗಳಿಗೆ ನಿಗದಿತ ಅವಧಿಯೊಳಗೆ ಮಾಹಿತಿ ಒದಗಿಸುವುದು ಎಲ್ಲ ಇಲಾಖೆಯ ಅಧಿಕಾರಿಗಳ ಕಡ್ಡಾಯ ಜವಾಬ್ದಾರಿಯಾಗಿದೆ. ಅದು ತಪ್ಪಿದಲ್ಲಿ ಅಧಿಕಾರಿಗಳು ಗಂಭೀರ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾಯ್ದೆ ಜಾರಿಯಾಗಿ 20 ವರ್ಷವಾಗಿದೆ. ಆದರೆ, ಇದುವರೆಗೂ ಜಾರಿ ಸಮರ್ಪಕವಾಗಿ ಆಗುತ್ತಿಲ್ಲ. ಹಾಗಾಗಿ ಮೇಲ್ಮನವಿ ಅರ್ಜಿಗಳನ್ನು ವಿಚಾರಣೆ ಮಾಡುವ ಜೊತೆಗೆ, ಅಧಿಕಾರಿಗಳಿಗೆ ಕಾಯ್ದೆಯ ಜ್ಞಾನ ನೀಡಿ ಎಚ್ಚರಿಕೆ ನೀಡಲು ನಾವು ಬಂದಿದ್ದೇವೆ. ಇದುವರೆಗೆ 27 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಕಾಯ್ದೆ ಜಾರಿಯಲ್ಲಿರುವ ಲೋಪಗಳ ಪಟ್ಟಿ ಮಾಡಿ ಸರ್ಕಾರದಕ್ಕೆ ಅವುಗಳನ್ನು ಬದಲಿಸಲು ಶಿಫಾರಸು ಮಾಡಿದ್ದೇವೆ.
ಎಲ್ಲ ಇಲಾಖೆಗಳಲ್ಲಿ ಫಲಕ ಅಳವಡಿಸಬೇಕು. ಅಧಿಕಾರಿ, ಸಿಬ್ಬಂದಿ ಕಾಯ್ದೆಯ ಬಗ್ಗೆ ಅರಿತುಕೊಳ್ಳಬೇಕು. ಮೇಲ್ಮನವಿ ಅಧಿಕಾರಿಗಳು ಕಾಲಕಾಲಕ್ಕೆ ಮೇಲ್ಮನವಿ ಅರ್ಜಿಗಳನ್ನು ವಿಚಾರಣೆ ನಡೆಸಬೇಕು. ಕೆಡಿಪಿ ಸಭೆಯಲ್ಲಿ ಒಂದು ವಿಷಯ ಸೂಚಿಯಾಗಿ ಇದನ್ನು ತೆಗೆದುಕೊಳ್ಳಬೇಕು ಎಂಬುದು ನಮ್ಮ ಆಶಯ ಎಂದರು.
ಕಾಯ್ದೆಯಂತೆ ಮಾಹಿತಿ ನೀಡದ ಅಧಿಕಾರಿಗಳಿಗೆ 25 ಸಾವಿರ ರೂ.ವರೆಗೂ ದಂಡ ವಿಽಸುವ, ಅವರ ಮೇಲೆ ಕರ್ತವ್ಯ ಲೋಪದ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುವ ಅಧಿಕಾರ ಆಯೋಗಕ್ಕಿದೆ. ಉದ್ದೇಶಪೂರ್ವಕವಾಗಿ ಮಾಹಿತಿ ನೀಡದೇ ಅಧಿಕಾರಿ ಲೋಪ ಎಸಗಿದರೆ, ಅರ್ಜಿದಾರನಿಗೆ 1 ಲಕ್ಷದವರೆಗೂ ಪರಿಹಾರ ಕೊಡಿಸಲು ಅವಕಾಶವಿದೆ. ಆ ಕಾರ್ಯವನ್ನು ಆಯೋಗ ನಿರಂತರವಾಗಿ ನಡೆಸಿಕೊಂಡು ಬಂದಿದೆ. ಇದುವರೆಗೆ ರಾಜ್ಯದಲ್ಲಿ 10843 ಪ್ರಕರಣಗಳಲ್ಲಿ ಅಧಿಕಾರಿಗಳಿಗೆ 10.38 ಕೋಟಿ ರೂ. ದಂಡ ವಿಽಸಲಾಗಿದ್ದು, 2.70 ಕೋಟಿ ರೂ.ದಂಡ ಆಕರಿಸಲಾಗಿದೆ ಎಂದು ಎಚ್ಚರಿಸಿದರು.
19 ಜನ ಕಪ್ಪು ಪಟ್ಟಿಯಲ್ಲಿ
ಗುಣಮಟ್ಟದ ಹೆಚ್ಚು ಅರ್ಜಿಗಳು ಬರಬೇಕು. ಅವುಗಳು ಶೀಘ್ರ ವಿಲೇವಾರಿ ಆಗಬೇಕು ಎಂಬುದು ಆಯೋಗದ ಉದ್ದೇಶ. ದುರುದ್ದೇಶದಿಂದ, ಅಧಿಕಾರಿಗಳನ್ನು ಬೆದರಿಸುವುದು ಹಣ ಕೇಳುವಂಥ ಕಾರ್ಯಕ್ಕೆ ಮಾಹಿತಿ ಹಕ್ಕುಗಳನ್ನು ಬಳಸಿಕೊಳ್ಳುವರ ಅಂಗಡಿಗೆ ನಾವು ಬೀಗ ಹಾಕುತ್ತೇವೆ. ಇದುವರೆಗೆ ದುರುದ್ದೇಶದಿಂದ ಅರ್ಜಿ ಹಾಕುವ 26 ಆಯೋಗ ಕಪ್ಪು ಪಟ್ಟಿಗೆ ಸೇರಿಸಿದೆ. ಅದರಲ್ಲಿ 7 ಜನ ಹೈಕೋರ್ಟ್‌ನಿಂದ ಆದೇಶಕ್ಕೆ ತಡೆ ತಂದಿದ್ದು, ಇನ್ನೂ 19 ಜನ ಕಪ್ಪು ಪಟ್ಟಿಯಲ್ಲಿದ್ದಾರೆ ಎಂದು ತಿಳಿಸಿದರು.
ಬೆಳಗಾವಿಯ ಪ್ರಾದೇಶಿಕ ಆಯುಕ್ತ ನಾರಾಯಣ ಚೆನ್ನಾಳ, ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಪಂ ಸಿಇಒ ಡಾ.ದಿಲೀಶ್ ಶಶಿ, ಎಡಿಸಿ ಸಾಜಿದ್ ಮುಲ್ಲಾ ಇದ್ದರು.

524 ಅರ್ಜಿ ಬಾಕಿ

ಆಯುಕ್ತ ಬದ್ರುದ್ದೀನ್ ಅವರು ಮಾತನಾಡಿ, ಹಿಂದೆ ಕೋವಿಡ್ ಹಾಗೂ ಕಾಯಂ ಆಯುಕ್ತರು ಇಲ್ಲದ ಕಾರಣ ಮಾಹಿತಿ ಹಕ್ಕು ಆಯೋಗದಲ್ಲಿ ಪ್ರಕರಣಗಳ ವಿಚಾರಣೆ ವಿಳಂಬವಾಗಿತ್ತು. ವರ್ಷದ ಹಿಂದೆ ನಾವು ಬಂದಾಗ 55,400 ಮೇಲ್ಮನವಿ ಅರ್ಜಿಗಳು ಆಯೋಗದಲ್ಲಿ ಬಾಕಿ ಇದ್ದವು. ಒಂದು ವರ್ಷದಲ್ಲಿ 16 ಸಾವಿರದಷ್ಟು ಹೊರ ಅರ್ಜಿಗಳು ಬಂದಿದ್ದವು. 26,670 ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲಾಗಿದ್ದು, ಪ್ರಸ್ತುತ 28,730 ಮೇಲ್ಮನವಿ ಅರ್ಜಿಗಳು ಆಯೋಗದಲ್ಲಿ ಬಾಕಿ ಇವೆ.
ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ 164 , ಕಂದಾಯ ಇಲಾಖೆಯ 110 ಸೇರಿ ಒಟ್ಟು 524 ಅರ್ಜಿಗಳು ಆಯೋಗದಲ್ಲಿ ಬಾಕಿ ಇದ್ದು, ರಾಜ್ಯದಲ್ಲಿ 17 ನೇ ಸ್ಥಾನದಲ್ಲಿದೆ ಎಂದು ವಿವರಿಸಿದರು.