ಮುಂಡಗೋಡ: ಫೈನಾನ್ಸ್ ಮಾಲೀಕ ಮಹಬೂಬಲಿ ಜಮಖಂಡಿ ಅವರನ್ನು ಕೊಲೆಗೈದ ಅಪರಾಧಿಗೆ ಜೀವಾವಧಿ ಶಿಕ್ಷೆ, 10 ಸಾವಿರ ರೂ. ದಂಡ ಹಾಗೂ ಕೊಲೆಗೆ ಸಹಕರಿಸಿದ ಇಬ್ಬರು ಅಪರಾಧಿಗಳಿಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ ತಲಾ 3 ಸಾವಿರ ರೂ. ದಂಡ ವಿಧಿಸಿ ಶಿರಸಿ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ ಕಿಣಿ ಸೋಮವಾರ ತೀರ್ಪು ಪ್ರಕಟಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಪಟ್ಟಣದ ಇಂದ್ರಾನಗರದ ನಿವಾಸಿ ಮಹಬೂಬಲಿ ಜಮಖಂಡಿ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದರು. ಲಕ್ಕೋಳ್ಳಿ ಗ್ರಾಮದ ಇಬ್ರಾಹಿಂ ಶಿಗ್ಗಾಂವಿ ಎಂಬುವವರಿಗೆ ಸಾಲ ನೀಡಿದ್ದರು. ಸಾಲ ಮರುಪಾವತಿ ಮಾಡುವಂತೆ ಇಬ್ರಾಹಿಂ ಪತ್ನಿ ನಾಜಿಯಾಬಾನುಗೆ ಕರೆ ಮಾಡಿ ಪೀಡಿಸುತ್ತಿದ್ದರು. ಹೀಗಾಗಿ, 2021ರ ಡಿಸೆಂಬರ್ 31ರಂದು ಆತನನ್ನು ಮನೆಗೆ ಕರೆಸಿಕೊಂಡು ಕೊಲೆ ಮಾಡಿ ಅಂದಲಗಿ ಸನಿಹದ ಸೇತುವೆ ಬಳಿ ಮೃತದೇಹ ಹಾಗೂ ಬೈಕ್ ಅನ್ನು ಬಿಸಾಕಿದ್ದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ರಾಹಿಂ ಶಿಗ್ಗಾಂವಿ, ಆತನ ಪತ್ನಿ ನಾಜಿಯಾಬಾನು ಶಿಗ್ಗಾಂವಿ ಹಾಗೂ ಶರೀಫ ಶಿಗ್ಗಾಂವಿ ಎಂಬುವವರನ್ನು ಬಂಧಿಸಿದ್ದರು. ಆರೋಪಿಗಳು ಕೊಲೆ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಇಬ್ರಾಹಿಂ ಶಿಗ್ಗಾಂವಿಗೆ ಜಿವಾವಧಿ ಶಿಕ್ಷೆ, 10 ಸಾವಿರ ರೂ. ದಂಡ, ನಾಜಿಯಾಬಾನು ಮತ್ತು ಶರೀಫಗೆ ತಲಾ ಮೂರು ವರ್ಷ ಜೈಲು ಶಿಕ್ಷೆ ಹಾಗೂ 3 ಸಾವಿರ ರೂ.ದಂಡ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಸರ್ಕಾರದ ಪರ ವಕೀಲ ರಾಜೇಶ ಮಳಗಿಕರ ವಾದ ಮಂಡಿಸಿದ್ದರು. ಅಂದಿನ ಸಿಪಿಐ ಸಿದ್ದಪ್ಪ ಸಿಮಾನಿ, ಪಿಎಸ್ಐ ಬಸವರಾಜ ಮಬನೂರ ಹಾಗೂ ಎನ್.ಡಿ. ಜಕ್ಕಣ್ಣವರ ಸಮರ್ಪಕ ದಾಖಲೆಗಳೊಂದಿಗೆ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿ ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.