ಕಾರವಾರ: ಕಳೆದ 9.5 ವರ್ಷದಿಂದ ಉತ್ತರ ಕನ್ನಡ ಪೊಲೀಸ್ ಇಲಾಖೆಯ ಬಾಂಬ್ ನಿಷ್ಟ್ರಿಯ ದಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ `ಬೆಳ್ಳಿ' ಹೆಸರಿನ ಶ್ವಾನ ಅನಾರೋಗ್ಯದಿಂದ ಬುಧವಾರ ಮೃತಪಟ್ಟಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಯಿತು.
ಕುಮಟಾದಲ್ಲಿ 2021 ರಲ್ಲಿ ಹುಸಿ ಬಾಂಬ್ ಪತ್ತೆ ಸೇರಿ ಹಲವು ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಬೆಳ್ಳಿಗೆ ಕಳೆದ ಕೆಲ ದಿನಗಳ ಹಿಂದೆ ಹೊಟ್ಟೆಯಲ್ಲಿ ಕ್ಯಾನ್ಸರ್ ಗಡ್ಡೆ ಕಾಣಿಸಿಕೊಂಡಿತ್ತು. ಸಾಕಷ್ಟು ಚಿಕಿತ್ಸೆಯ ನಂತರವೂ ಶ್ವಾನ ಬುಧವಾರ ಕೊನೆಯುಸಿರೆಳೆದಿದೆ. ಅದರ ಮೇಲ್ವಿಚಾರಕರಾದ ಪ್ರದೀಪ ನಾಯ್ಕ ಹಾಗೂ ನಿತ್ಯಾನಂದ ಗೌಡ ಅಕ್ಷರಶಃ ಕಣ್ಣೀರು ಹಾಕಿದರು.
10 ವರ್ಷ ವಯಸ್ಸಿನ ಬೆಳ್ಳಿ ತನ್ನ ಮೂರನೇ ತಿಂಗಳಲ್ಲಿ ಎಂದರೆ 2013 ರ ಡಿಸೆಂಬರ್ ತಿಂಗಳಲ್ಲಿ ಪೊಲೀಸ್ ಇಲಾಖೆ ಸೇರಿತ್ತು. ಲ್ಯಾಬ್ರಡಾರ್ ಜಾತಿಯ ಶ್ವಾನಕ್ಕೆ ಬೆಂಗಳೂರಿನ ಆಡುಗೋಡಿಯಲ್ಲಿ 9 ತಿಂಗಳು ತರಬೇತಿ ನೀಡಲಾಗಿತ್ತು. ನಂತರ 2014 ರ ನವೆಂಬರ್‌ನಲ್ಲಿ ಕಾರವಾರ ಬಾಂಬ್ ನಿಷ್ಟ್ರಿಯ ದಳದಲ್ಲಿ ಕರ್ತವ್ಯಕ್ಕೆ ಹಾಜರಾಗಿತ್ತು. ಶೀಘ್ರದಲ್ಲಿ ಬಾಂಬ್ ಪತ್ತೆಯಲ್ಲಿ ಹೆಸರುವಾಸಿಯಾಗಿತ್ತು. 600 ಕ್ಕೂ ಅಧಿಕ ಭದ್ರತಾ ಪರಿಶೀಲನೆಗೆ ಬೆಳ್ಳಿಯನ್ನು ಬಳಸಿಕೊಳ್ಳಲಾಗಿತ್ತು.
ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ ಕಾರ್ಯಕ್ರಮ, ಬೆಳಗಾವಿ ಅಧಿವೇಶನ, ಜಿಲ್ಲೆಗೆ ಯೋಗಿ ಆದಿತ್ಯನಾಥ ಭೇಟಿ, ಅಮಿಷಾ ಭೇಟಿ ಮುಂತಾದ ಕಾರ್ಯಕ್ರಮಗಳಲ್ಲಿ ಭದ್ರತಾ ಕಾರ್ಯದಲ್ಲಿ ಬೆಳ್ಳಿ ಪಾಲ್ಗೊಂಡಿತ್ತು. ಮಂಗಳೂರು ಪೊಲೀಸ್ ವಲಯದ ಬಾಂಬ್ ಪತ್ತೆ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದಿತ್ತು.
ಅಂತ್ಯ ಸಂಸ್ಕಾರ:
ಎಸ್‌ಪಿ ಎನ್.ವಿಷ್ಣುವರ್ಧನ, ಎಎಸ್‌ಪಿ ಸಿ.ಟಿ.ಜಯಕುಮಾರ್, ಡಿಎಆರ್ ಡಿವೈಎಸ್‌ಪಿ ದಿಲೀಪ ಎಸ್.ವಿ. ಹಾಗೂ ಇತರ ಹಿರಿಯ ಅಧಿಕಾರಿಗಳು ಆಗಮಿಸಿ ಪೊಲೀಸ್ ಮೈದಾನದಲ್ಲಿ ಶ್ವಾನಕ್ಕೆ ಅಂತಿಮನ ನಮನ ಸಲ್ಲಿಸಿದರು. ನಂತರ ಮೂರು ಬಾರಿ ಗುಂಡು ಹಾರಿಸಿ, ಪೊಲೀಸ್ ಬ್ಯಾಂಡ್ ನುಡುಸಿ, ಮೌನಾಚರಣೆ ಮಾಡಿ ಗೌರವ ಸಲ್ಲಿಸಲಾಯಿತು. ಉತ್ತರ ಕನ್ನಡ ಪೊಲೀಸ್ ಬಾಂಬ್ ನಿಷ್ಟ್ರಿಯ ದಳದಲ್ಲಿ ಅಣಶಿ ಹಾಗೂ ಶೈನಿ ಎಂಬ ಇನ್ನೆರಡು ಪೊಲೀಸ್ ಶ್ವಾನಗಳಿವೆ. ಅಪರಾಧ ಪತ್ತೆ ವಿಭಾಗದಲ್ಲಿ ಇನ್ನೂ ಮೂರು ಶ್ವಾನಗಳಿವೆ. ಶ್ವಾನಗಳ ನಿರ್ವಹಣೆಗೆ ದಿನಕ್ಕೆ 300 ರೂ. ಭತ್ತೆ ನೀಡಲಾಗುತ್ತದೆ.