ಅಂಕೋಲಾ: ಸಹಕಾರ ಕ್ಷೇತ್ರ ಗದಗ ಜಿಲ್ಲೆಯಿಂದ ಪ್ರಾರಂಭವಾಗಿದ್ದರೂ ಉತ್ತರ ಕನ್ನಡದ ಕೊಡುಗೆ ಅಪಾರವಾಗಿದೆ. ಅತೀ ಹೆಚ್ಚು ರೈತರಿಗೆ ಬೆಳೆ ಸಾಲ ಕೊಟ್ಟ ಮಧ್ಯವರ್ತಿ ಬ್ಯಾಂಕ್ ನಮ್ಮದು ಎನ್ನುವುದು ಅಭಿಮಾನದ ಸಂಗತಿಯಾಗಿದೆ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ ಹೇಳಿದರು.
ಪಟ್ಟಣದ ಶ್ರೀ ಶಾಂತಾದುರ್ಗಾ ದೇವಸ್ಥಾನದ ಸಭಾಭವನದಲ್ಲಿ ಜಿ.ಎಸ್. ಹೆಗಡೆ ಅಜ್ಜೀಬಳ ಸಹಕಾರ ಪ್ರಶಸ್ತಿ ಪುರಸ್ಕೃತ ಭಾಸ್ಕರ ನಾರ್ವೆಕರ ಅವರಿಗೆ ಭಾನುವಾರ ಆಯೋಜಿಸಿದ್ದ ನಾಗರಿಕ ಸನ್ಮಾನ ಕಾರ್ಯಕ್ರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೃಷಿ ಕ್ಷೇತ್ರದ ಪುನಶ್ಚೇತನವಾದರೆ ಸಹಕಾರಿ ಕ್ಷೇತ್ರವೂ ಅಭಿವೃದ್ಧಿಯಾಗುತ್ತದೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಸೌಹಾರ್ದ ಸಹಕಾರಿಯನ್ನು ಹೊಂದಿರುವ ಅಂಕೋಲಾದಲ್ಲಿ ಅನೇಕ ಹಿರಿಯರ ಕೊಡುಗೆ ಸಹಕಾರ ಕ್ಷೇತ್ರವನ್ನು ಬಲಿಷ್ಠಗೊಳಿಸಿದೆ. ಸಹಕಾರ ಮನೋಭಾವದ ಭಾಸ್ಕರ ನಾರ್ವೆಕರ ಅವರು ಜಿ.ಎಸ್. ಹೆಗಡೆ ಅಜ್ಜೀಬಳ ಪ್ತಶಸ್ತಿಗೆ ಆಯ್ಕೆಯಾಗಿರುವುದು ಹೆಚ್ಚು ಸೂಕ್ತವಾಗಿದ್ದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅವರು ಗಣನೀಯ ಸೇವೆ ಸಲ್ಲಿಸಿದ್ದಾರೆ ಎಂದರು.
ಮಾಜಿ ಸಚಿವ ಆನಂದ ಅಸ್ನೋಟಿಕರ ಮಾತನಾಡಿ, ಭಾಸ್ಕರ ನಾರ್ವೆಕರ ಹಲವು ದಶಕದಿಂದ ಅಂಕೋಲಾ ಅರ್ಬನ್ ಬ್ಯಾಂಕಿನ ನಿರ್ದೇಶಕರಾಗಿ ಸತತ ಮೂರು ಬಾರಿ ಬ್ಯಾಂಕಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಹಕಾರಿ ರಂಗದಲ್ಲಿ ಅವರ ಸೇವೆ ಗುರುತಿಸಿ ಅಜ್ಜೀಬಳ ಹೆಗಡೆ ಪ್ರಶಸ್ತಿಯನ್ನು ನೀಡಿರುವುದು ಹೆಮ್ಮೆಯ ವಿಷಯ ಎಂದರು.
ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ಳೇಕರ ಮಾತನಾಡಿ, ಕಳೆದ 30 ವರ್ಷಗಳಿಂದ ಭಾಸ್ಕರ ನಾರ್ವೆಕರ ಅವರನ್ನು ಹತ್ತಿರದಿಂದ ಬಲ್ಲೆ. ಸರ್ವ ಧರ್ವಿುಯರ ಜತೆ ಬೆರೆತು ಅಂಕೋಲಾದಲ್ಲಿ ಸಾಮರಸ್ಯ ಉಳಿಸಿಕೊಳ್ಳಲು ಶ್ರಮಿಸುತ್ತಿರುವ ಅವರು ಅಂಕೋಲಾ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಅನೇಕ ಅಭಿವೃದ್ಧಿ ಮಾಡುವುದರ ಜತೆಗೆ ಅಂಕೋಲಾ ಅರ್ಬನ್ ಬ್ಯಾಂಕ್ ಅಧ್ಯಕ್ಷರಾಗಿ ಉತ್ತಮ ಕಾರ್ಯನಿರ್ವಹಿಸಿದ್ದಾರೆ ಎಂದರು.
ಬಿಜೆಪಿಯ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಹಿರಿಯ ನ್ಯಾಯವಾದಿ ಸುಭಾಸ ಆರ್. ನಾರ್ವೆಕರ ಪ್ರಾಸ್ತಾವಿಕವಾಗಿ ಮಾತನಾಡಿದರು.ಪ್ರಾಚಾರ್ಯ ವಿನಾಯಕ ಹೆಗಡೆ ಸನ್ಮಾನಪತ್ರ ವಾಚಿಸಿದರು. ವಕೀಲರಾದ ನಾಗಾನಂದ ಬಂಟ ಪಾರ್ಥಿಸಿದರು. ಉಮೇಶ ಎನ್.ನಾಯ್ಕ ಸ್ವಾಗತಿಸಿದರು. ವಿನೋದ ಶಾನಭಾಗ, ಸನ್ಮಾನ ಸಮಿತಿ ಸದಸ್ಯ ವಸಂತ ಕೆ. ನಾಯ್ಕ ನಿರ್ವಹಿಸಿದರು.