DC-election-Press-Meet 
ಜಿಲ್ಲೆ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ-ನಾಮಪತ್ರ ಸಲ್ಲಿಕೆ ಯಾವಾಗಿನಿಂದ, ಎಲ್ಲಿ..? ಲೋಕಸಭಾ ಚುನಾವಣೆಯ ಸಿದ್ಧತೆಯ ವಿವರ ಇಲ್ಲಿದೆ

Uttara Kannada - Subash Hegde

ಕಾರವಾರ: ಜಿಲ್ಲೆಯ 6 ಹಾಗೂ ಬೆಳಗಾವಿಯ ಕಿತ್ತೂರು ಮತ್ತು ಖಾನಾಪುರ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ಮತದಾನ ನಡೆಯಲಿದ್ದು, ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಲೋಕಸಭಾ ಚುನಾವಣಾ ಸಂಬಂಧ ಏಪ್ರಿಲ್ 12 ರಂದು ಅಧಿಸೂಚನೆ ಹೊರಡಿಸಿ, ಕಾರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆಗೆ ಅವಕಾಶ ಮಾಡಿಕೊಡಲಾಗುವುದು. ನಾಮಪತ್ರ ಸಲ್ಲಿಸಲು ಏ.19 ಕೊನೆಯ ದಿನವಾಗಿದ್ದು, ಏ. 20 ನಾಮಪತ್ರ ಪರಿಶೀಲನೆ ನಡೆಯಲಿದೆ. ಏ. 22 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮೇ 6 ರಂದು 8 ವಿಧಾನಸಭಾ ಕ್ಷೇತ್ರದ ನಿಗದಿತ ಕೇಂದ್ರಗಳಲ್ಲಿ ಮತ ಯಂತ್ರಗಳ ಹಂಚಿಕೆ ನಡೆಯಲಿದೆ. ಮೇ 7 ರಂದು ಮತದಾನ ನಡೆಯಲಿದೆ. ಕುಮಟಾದ ಎ.ವಿ.ಬಾಳಿಗಾ ಕಾಲೇಜ್‌ನ್ನು ಸ್ಟ್ರಾಂಗ್‌ ರೂಂ ಎಂದು ಗುರುತಿಸಲಾಗಿದ್ದು, ಅಲ್ಲಿ ಮತ ಯಂತ್ರಗಳನ್ನು ಇಡಲಾಗುವುದು. ಜೂನ್ 4 ರಂದು ಜೂನ್ ಮತ ಎಣಿಕೆ ನಡೆಯಲಿದೆ ಎಂದರು. ಸಹಾಯಕ ಚುನಾವಣಾಧಿಕಾರಿಗಳಾಗಿ ಆಯಾ ಎಸಿಗಳು ಕಾರ್ಯನಿರ್ವಹಿಸಲಿದ್ದಾರೆ. ಎಸಿಗಳು ಇಲ್ಲದ ಕ್ಷೇತ್ರಗಳಲ್ಲಿ ಬೇರೆ ಹಿರಿಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು.
25 ಚೆಕ್ ಪೋಸ್ಟ್:
ಎಸ್‌ಪಿ ಎನ್.ವಿಷ್ಣುವರ್ಧನ ಮಾತನಾಡಿ, ಜಿಲ್ಲೆಯಲ್ಲಿ ಹಾಲಿ ಇರುವ ಚೆಕ್ ಪೋಸ್ಟ್ಗಳನ್ನು ಹೊರತುಪಡಿಸಿ ಹೊಸ ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದೆ. 3 ಹೊರ ರಾಜ್ಯ ಸೇರಿ ಒಟ್ಟು 25 ಚೆಕ್ ಪೋಸ್ಟ್ಗಳು ಈಗಾಗಲೇ ಕಾರ್ಯಾರಂಭ ಮಾಡಿವೆ. ಎಲ್ಲೆಡೆ 3 ಪಾಳಿಗಳಲ್ಲಿ 24 ಗಂಟೆಯೂ ಪೊಲೀಸ್, ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ತಲಾ ಒಬ್ಬ ಸಿಬ್ಬಂದಿ ಕರ್ತವ್ಯದ ಮೇಲಿರುತ್ತಾರೆ. ಎಲ್ಲೆಡೆ ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದೆ ಎಂದರು.
ಕಾರವಾರದ ಮಾಜಾಳಿ, ಮೈಂಗಿಣಿ, ಬೋರೆ ಕ್ರಾಸ್, ಕುಮಟಾದ ಕತಗಾಲ, ಹಿರೇಗುತ್ತಿ, ಹೊನ್ನಾವರದ ಚಂದಾವರ ಗೇರುಸೊಪ್ಪ, ಭಟ್ಕಳದ ಸರ್ಪಕನಕಟ್ಟೆ, ಕುಂಟವಾಣಿ, ಶಿರಸಿಯ ದಾಸನಕೊಪ್ಪ, ತಿಗಣಿ, ಚಿಪಗಿ, ಸಿದ್ದಾಪುರದ ಚೂರಿಕಟ್ಟೆ, ಶಿರಳಗಿ, ಯಲ್ಲಾಪುರದ ಕಿರವತ್ತಿ, ಮುಂಡಗೋಡಿನ ಸಾನವಳ್ಳಿ, ಬಾಚಣಕಿ, ಅಗಡಿ, ಜೊಯಿಡಾದ ಅನಮೋಡ, ರಾಮನಗರ, ಬಾಪೇಲಿಕ್ರಾಸ್, ಹಳಿಯಾಳದ ಮಾವಿನಕೊಪ್ಪ, ಅರ್ಲವಾಡ, ಕಾವಲವಾಡ, ದಾಂಡೇಲಿಯ ಭರ್ಚಿಯಲ್ಲಿ ಚೆಕ್ ಪೋಸ್ಟ್ ಇರಲಿದೆ. ಚುನಾವಣೆ ಕರ್ತವ್ಯಕ್ಕೆ ಒಟ್ಟು 2489 ಪೊಲೀಸ್ ಸಿಬ್ಬಂದಿ ಚುನಾವಣಾ ಕಾರ್ಯದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.


ಜಿಪಂ ಸಿಇಒ ಈಶ್ವರ ಕುಮಾರ ಕಾಂದೂ ಮಾತನಾಡಿ, ಚುನಾವಣೆ ನೀತಿ ಸಂಹಿತೆ ಪಾಲನೆ ಹಿನ್ನೆಲೆಯಲ್ಲಿ ವಿವಿಧ ತಂಡಗಳನ್ನು ರಚಿಸಲಾಗಿದೆ. 51 ಸಂಚಾರಿ ಜಾಗೃತ ದಳ, 25 ವಿಡಿಯೋ ದಾಖಲಾತಿ ತಂಡ, 6 ವಿಡಿಯೋ ವೀಕ್ಷಣಾ ತಂಡ, 78 ಲೆಕ್ಕಪತ್ರ ಪರಿಶೀಲನಾ ತಂಡ, 146 ಸೆಕ್ಟರ್ ಅಽಕಾರಿಗಳು, 6 ಲೆಕ್ಕಪತ್ರ ತಂಡ ಸೇರಿ 324 ತಂಡಗಳನ್ನು ರಚಿಸಲಾಗಿದೆ. 6 ಜನ ಸಹಾಯಕ ವೆಚ್ಚ ವೀಕ್ಷಕರುನ್ನು ನೇಮಿಸಲಾಗಿದೆ. ಪ್ರತಿ ಕ್ಷೇತ್ರಕ್ಕೆ ಒಂದರಂತೆ 6 ಸಹಾಯವಾಣಿ ತೆರೆಯಲಾಗಿದೆ ಎಂದರು. ಎಡಿಸಿ ಪ್ರಕಾಶ ರಜಪೂತ ಸುದ್ದಿಗೋಷ್ಠಿಯಲ್ಲಿದ್ದರು.


ಹೈಲೈಟ್ ಪಾಯಿಂಟ್ಸ್

  • *ಅತಿ ಸೂಕ್ಷ್ಮ ಮತಗಟ್ಟೆಗಳು-49
  • *ಸೂಕ್ಷ್ಮ ಮತಗಟ್ಟೆಗಳು -454
  • *ಸಿದ್ಧವಾದ ಬ್ಯಾಲೆಟ್ ಯೂನಿಟ್‌ಗಳು-2612
  • *ಸಿದ್ಧವಾದ ವಿವಿ ಪ್ಯಾಟ್‌ಗಳು-1891

ಮತದಾರರ ವಿವರ

ಕ್ಷೇತ್ರ ಮತಗಟ್ಟೆಗಳು ಪುರುಷ ಮತದಾರರು ಮಹಿಳಾ ಮತದಾರರು ಇತರರು ಒಟ್ಟು ಮತದಾರರು
ಖಾನಾಪುರ 312 1,11,424 1,05,674 05 2,17,103
ಕಿತ್ತೂರು 230 99,709 98,607 05 1,98,321
ಹಳಿಯಾಳ 215 91,869 91,166 01 1,83,036
ಕಾರವಾರ 258 1,09,378 1,12,786 01 2,22,165
ಕುಮಟಾ 215 94,624 95,229 03 1,89,856
ಭಟ್ಕಳ 248 1,14,053 1,11,075 00 2,25,128
ಶಿರಸಿ 266 1,01,484 1,01,163 01 2,02,648
ಯಲ್ಲಾಪುರ 233 93,058 91,542 00 1,84,600
ಒಟ್ಟು 1977 8,15,599 8,07,242 16 16,22,827
…………

ಚುನಾವಣಾ ಆಯೋಗದ ಮಾಹಿತಿಗೆ ಇಲ್ಲಿ ಗಮನಿಸಿ: https://www.eci.gov.in/

ತಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ನೀತಿ ಸಂಹಿತೆ ಉಲ್ಲಂಘಿಸಿದಲ್ಲಿ ಕಠಿಣ ಕ್ರಮ ವಹಿಸಲಾಗುವುದು. ಮತದಾರ ಅಂತಿಮ ಪಟ್ಟಿ ಪ್ರಕಟಿಸಿದ ನಂತರ ಎರಡು ತಿಂಗಳಲ್ಲಿ ಸುಮಾರು 5 ಸಾವಿರ ಜನರು ಹೊಸದಾಗಿ ಹೆಸರು ಸೇರಿಸಿಕೊಂಡಿದ್ದಾರೆ. ಇನ್ನೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶವಿದೆ.ಗಂಗೂಬಾಯಿ ಮಾನಕರ್ಚುನಾವಣಾಧಿಕಾರಿಉತ್ತರ ಕನ್ನಡ ಲೋಕಸಭಾ ಕ್ಷೇತ್ರ………