ವಿಜಯವಾಣಿ ಸುದ್ದಿಜಾಲ ಕಾರವಾರ
ಕಡಲಲ್ಲಿ ಮೀನು ಹಿಡಿದು ಜೀವಿಸುವ ಮೀನುಗಾರರಲ್ಲೇ ಈಗ ಎರಡು ಗುಂಪುಗಳಾಗಿವೆ. ಕಡಲ ಮಕ್ಕಳ ಕಾಳಗ ಈಗ ಜಿಲ್ಲಾಽಕಾರಿ ಕಚೇರಿಯ ಅಂಗಳ ತಲುಪಿದೆ.
ನಿಷೇಧಿತ ಲೈಟ್ ಫಿಶಿಂಗ್ ಹಾಗೂ ಬುಲ್ ಟ್ರಾಲ್‌ಗಳನ್ನು ಪರ್ಸೀನ್ ಬೋಟ್‌ಗಳು ನಡೆಸುತ್ತವೆ. ಇದರಿಂದ ಮತ್ಸ್ಯ ಕ್ಷಾಮ ಎದುರಾಗುತ್ತಿದೆ ಎಂಬುದು ಸಾಂಪ್ರದಾಯಿಕ ಮೀನುಗಾರರ ದೂರು. ಈ ಹಿಂದೆ ಲೈಟ್ ಫಿಶಿಂಗ್ ನಡೆಸುವ ಬೋಟ್‌ಗನ್ನು ಸಾಂಪ್ರದಾಯಿಕ ಮೀನುಗಾರರು ಸಮುದ್ರದಲ್ಲೇ ಹಿಡಿದು ನಿಲ್ಲಿಸಿ ಗಲಾಟೆಗಳಾಗಿದ್ದವು. ಹಲವು ಬಾರಿ ಪ್ರತಿಭಟನೆಗಳೂ ನಡೆದಿದ್ದವು. ಕಳೆದ ಶುಕ್ರವಾರ ಜಿಲ್ಲೆಯ ಕರಾವಳಿಯ ತಾಲೂಕುಗಳಿಂದ ದೊಡ್ಡ ಸಂಖ್ಯೆಯಲ್ಲಿ ಕಾರವಾರಕ್ಕೆ ಆಗಮಿಸಿದ ಸಾಂಪ್ರದಾಯಿಕ ಮೀನುಗಾರರು ಬೃಹತ್ ಪ್ರತಿಭಟನೆ ನಡೆಸಿದ್ದರು. ದೂರು ಕೊಟ್ಟರೂ ಅಕ್ರಮ ಮೀನುಗಾರಿಕೆಯನ್ನು ತಡೆಯುತ್ತಿಲ್ಲ ಎಂದು ಮೀನುಗಾರಿಕೆ ಅಧಿಕಾರಿಗಳನ್ನು ಮಾತ್ರವಲ್ಲ ಜಿಲ್ಲಾಡಳಿತವನ್ನೂ ತೀವ್ರ ತರಾಟೆಗೆ ತೆಗೆದುಕೊಂಡರು. ಮೀನುಗಾರಿಕೆ ಸಚಿವರ ವಿರುದ್ಧವೂ ಘೋಷಣೆ ಕೂಗಿದ್ದರು.
ಪರ್ಸೀನ್ ಒಕ್ಕೂಟದ ದೂರು:
ಸಾಂಪ್ರದಾಯಿಕ ಮೀನುಗಾರರ ವಿರುದ್ಧ ಉತ್ತರ ಕನ್ನಡ ಜಿಲ್ಲಾ ಪರ್ಸೀನ್ ಬೋಟ್ ಒಕ್ಕೂಟದ ಸದಸ್ಯರು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಸೋಮವಾರ ದೂರು ನೀಡಿದ್ದಾರೆ. ಸಮುದ್ರ ದಡದಿಂದ 12 ನಾಟಿಕಲ್ ಮೈಲ್ ಒಳಗೆ ಲೈಟ್ ಫಿಶಿಂಗ್, ಬುಲ್ ಟ್ರಾಲ್ ನಿಷೇಧಿಸಲಾಗಿದೆ. ಆದರೆ, ಆದೇಶವನ್ನು ಉತ್ತರ ಕನ್ನಡ ಜಿಲ್ಲೆಯ ಮೀನುಗಾರರು ಮಾತ್ರ ಪಾಲಿಸಿದರೆ ಆಗದು. ತಮಿಳುನಾಡು, ಕೇರಳ, ಗೋವಾ, ಮಹಾರಾಷ್ಟ್ರ ಹಾಗೂ ರಾಜ್ಯದ ಮಂಗಳೂರು ಭಾಗದ ಮೀನುಗಾರರೂ ಇದನ್ನು ಪಾಲಿಸಬೇಕು. ಆಗ ಮಾತ್ರ ನಿಷೇಧದ ಮೂಲ ಉದ್ದೇಶ ಈಡೇರುತ್ತದೆ. ನಾವು ಮೀನುಗಾರಿಕೆ ಬಂದ್ ಮಾಡಿದರೂ ಹೊರ ರಾಜ್ಯದ ಮೀನುಗಾರರು ಲೈಟ್ ಫಿಶಿಂಗ್ ನಡೆಸುತ್ತಾರೆ. ಈ ಬಗ್ಗೆ ಅಧಿಕಾರಿಗಳು ಕ್ರಮ ವಹಿಸುವುದಿಲ್ಲ.
ಇನ್ನು ಸಾಂಪ್ರದಾಯಿಕ ಮೀನುಗಾರರು ನಿರ್ಬಂಧ ಮೀರಿ 12 ನಾಟಿಕಲ್ ಮೈಲ್ ಹೊರಗೂ ಮೀನುಗಾರಿಕೆ ನಡೆಸುತ್ತಾರೆ. 9.9 ಎಚ್‌ಪಿ ಇಂಜಿನ್‌ಗಳನ್ನು ಮಾತ್ರ ಬಳಸಬೇಕು ಎಂದಿದೆ. ಅದನ್ನು ಮೀರಿ 25 ರಿಂದ 40 ಎಚ್‌ಪಿ ಮಷಿನ್‌ಗಳನ್ನೂ ಬಳಸುತ್ತಿದ್ದಾರೆ. ಗರಿಷ್ಠ 300 ರಿಂದ 350 ಮೀಟರ್ ಉದ್ಬದದ ಲೆಗಳನ್ನು ಬಳಸಬೇಕು ಎಂದಿದೆ. ಆದರೆ, 3 ಸಾವಿರ ಮೀಟರ್ ಉದ್ದದ ಬಲೆಯನ್ನೂ ಬೀಸುತ್ತಾರೆ. ಇನ್ನು ಸಬ್ಸಿಡಿ ದರದಲ್ಲಿ ಸರ್ಕಾರದಿಂದ ಸೀಮೆ ಎಣ್ಣೆ ಪಡೆದು ಕಾಳ ಸಂತೆಯಲ್ಲಿ ಮಾರುತ್ತಾರೆ ಎಂದು ದೂರಿದ್ದಾರೆ. ಉತ್ತರ ಕನ್ನಡ ವ್ಯಾಪ್ತಿಯಲ್ಲಿ ಯಾರೇ ಲೈಟ್ ಫಿಶಿಂಗ್ ನಡೆಸಿದರೂ ಕ್ರಮ ವಹಿಸಬೇಕು. ಇಲ್ಲವೇ ಎರಡೂ ಸ್ವರೂಪದ ಮೀನುಗಾರರ ಸಭೆ ಕಡೆದು ಚರ್ಚಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಪರ್ಸೀನ್ ಬೋಟ್ ಒಕ್ಕೂಟದ ಅಧ್ಯಕ್ಷ ರಾಜು ತಾಂಡೇಲ ನಿಯೋಗದ ನೇತೃತ್ವ ವಹಿಸಿದ್ದರು.
ಹೊನ್ನಾವರದಲ್ಲಿ ಗಲಾಟೆ
ಮಾ.3 ರಂದು ಸಾಂಪ್ರದಾಯಿಕ ಮೀನುಗಾರರ ಸಂಘಟನೆಯವರು ಬೃಹತ್ ಪ್ರತಿಭಟನೆ ನಡೆಸಿ ದೂರು ನೀಡಿದ ತಕ್ಷಣ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಖಡಕ್ ಆದೇಶ ಮಾಡಿದ್ದರು. ಸಬೂಬು ಹೇಳದೇ ಅಕ್ರಮ ಮೀನುಗಾರಿಕೆಯ ವಿರುದ್ಧ ಕ್ರಮ ವಹಿಸಿ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಸಿದ್ದರು. ಅದರಂತೆ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ನಾಗರಾಜ ಚಳ್ಳಜ್ಜಿಮನೆ ನೇತೃತ್ವದಲ್ಲಿ ಶನಿವಾರ ಹೊನ್ನಾವರ ಬಂದರಿನಲ್ಲಿ ಲೈಟ್ ಫಿಶಿಂಗ್ ನಡೆಸುವ ಬೋಟ್ ಒಂದರ ಜನರೇಟರ್ ಇಳಿಸುವ ವೇಳೆ ಗಲಾಟೆಯಾಗಿದೆ. ಇತರ ಕೆಲ ಬೋಟ್‌ಗಳು ಪರಾರಿಯಾಗಿದ್ದು, ಯಾವುದೇ ನೋಟಿಸ್ ನೀಡದೇ ಕ್ರಮ ಕೈಗೊಳ್ಳುತ್ತಿರುವ ಬಗ್ಗೆ ಬೋಟ್‌ಗಳ ಮಾಲೀಕರು ಆಕ್ಷೇಪಿಸಿದ್ದರು. ಕಾಲಾವಕಾಶ ನೀಡಿ, ನಾವೇ ಸಾಮಗ್ರಿಗಳನ್ನು ತೆರವು ಮಾಡುತ್ತೇವೆ ಎಂದು ಅಽಕಾರಿಗಳನ್ನು ವಾಪಸ್ ಕಳಿಸಿದ್ದರು
…………..
ಅಕ್ರಮ ಲೈಟ್ ಫಿಶಿಂಗ್ ನಡೆಸುವ ದೋಣಿಗಳ ಮೇಲೆ ಮೀನುಗಾರಿಕೆ ಇಲಾಖೆ ಕ್ರಮ ವಹಿಸಬೇಕು. ಅದಕ್ಕೆ ಕೋಸ್ಟ್‌ಗಾರ್ಡ್, ಕರಾವಳಿ ಕಾವಲುಪಡೆ ಅಧಿಕಾರಿಗಳ ಸಹಕಾರ ನೀಡಬೇಕು. ಎಂದು ಸೂಚನೆ ನೀಡಿದ್ದೇನೆ. ಕ್ರಮ ವಹಿಸದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಾನೂನು ಕ್ರಮಕ್ಕೆ ಶಿಫಾರಸು ಮಾಡಲಾಗುವುದು.
ಪ್ರಭುಲಿಂಗ ಕವಳಿಕಟ್ಟಿ
ಜಿಲ್ಲಾಧಿಕಾರಿ, ಉತ್ತರ ಕನ್ನಡ