ಮೈಸೂರು: ಬಿಜೆಪಿಯವರು ಹೆಸರಿಗೆ ಮಾತ್ರ ರಾಮರಾಜ್ಯ ಎನ್ನುತ್ತಾರೆ. ಆದರೆ ಮಾಡುವುದೆಲ್ಲವೂ ಅಧರ್ಮದ ಕೆಲಸ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಮೋದಿ ಪ್ರಧಾನಿ ಆದ ದಿನದಿಂದಲೇ ಪ್ರಜಾಪ್ರಭುತ್ವದ ಕಗ್ಗೊಲೆ ಶುರುವಾಗಿದೆ. ಅವರ ವಿರುದ್ಧ ಮಾತನಾಡಿದವರನ್ನು ಮುಗಿಸುವ, ಹೆದರಿಸುವ, ಬೆದರಿಸುವ ಕೆಲಸ ಮಾಡಲಾಗುತ್ತಿದೆ. ಬಿಜೆಪಿಯವರೇ ಬಿಜೆಪಿಯ ಕೇಂದ್ರ ಮುಖಂಡರನ್ನು ಪ್ರಶ್ನೆ ಮಾಡುವ ಪರಿಸ್ಥಿತಿ ಇಲ್ಲ.
ಹಾಗೆ ಮಾಡಿದರೆ ಅವರನ್ನೂ ಮುಗಿಸುವ ಕೆಲಸ ಮಾಡಲಾಗುತ್ತದೆ. ಯಾವ ತನಿಖಾ ಸಂಸ್ಥೆಗಳು, ರಾಜ್ಯಪಾಲರು ಸ್ವತಂತ್ರವಾಗಿಲ್ಲ. ಚುನಾವಣೆ ಬಂದಾಗ ಇವೆಲ್ಲವನ್ನೂ ಬಳಸಿಕೊಳ್ಳುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ದೆಹಲಿಯಲ್ಲಿ ಅನಿವಾರ್ಯವಾಗಿ ಪ್ರತಿಭಟನೆ ಮಾಡಲಾಗುತ್ತಿದೆ. ಇದು ಕರ್ನಾಟಕದ ಪರಿಸ್ಥಿತಿ ಮಾತ್ರವಲ್ಲ, ಬಿಜೆಪಿ ಸರ್ಕಾರ ಇಲ್ಲದ ಎಲ್ಲ ರಾಜ್ಯಗಳ ಪರಿಸ್ಥಿತಿಯೂ ಇದೇ ಆಗಿದೆ. ಈ ಕಾರಣಕ್ಕಾಗಿ ನಾವು ಪ್ರತಿಭಟನೆ ಮಾಡುತ್ತಿದ್ದು, ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುತ್ತದೆ.
ಆದರೆ, ಈ ಅನ್ಯಾಯ ಸಹಿಸಲು ಸಾಧ್ಯವಿಲ್ಲ. ಬಿಜೆಪಿ ಸಂಸದರಿಗೆ ಮೋದಿ ಮುಂದೆ ನಿಂತು ಕೇಳುವ ಧೈರ್ಯವಿಲ್ಲ. ಸುಖಾಸುಮ್ಮನೆ ನಮ್ಮ ಮೇಲೆ ಕೂಗಾಡುತ್ತಾರೆ. ಇದೇ ಕೆಲಸವನ್ನು ಮೋದಿ ಮುಂದೆ ಮಾಡಿದ್ದರೆ ಪ್ರತಿಭಟನೆ ಮಾಡುವ ಅವಶ್ಯಕತೆಯೇ ಬರುತ್ತಿರಲಿಲ್ಲ ಎಂದು ದಿನೇಶ್ ಗುಂಡೂರಾವ್ ಕುಟುಕಿದರು.
ಲೋಕಸಭೆ ಚುನಾವಣೆಯಲ್ಲಿ ಹಲವು ಸಚಿವರು ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದ ದಿನೇಶ್ ಗುಂಡೂರಾವ್, ಸಚಿವರು ಸ್ಪರ್ಧೆ ಮಾಡಿದರೆ ತಪ್ಪೇನು? ಆಂತರಿಕವಾಗಿ ನಡೆದಿರುವ ಚರ್ಚೆಯನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಹೈಕಮಾಂಡ್ ಹೇಳಿದರೆ ಸ್ಪರ್ಧೆ ಮಾಡಲೇಬೇಕು. ಇದು ಒಳ್ಳೆಯ ಬೆಳವಣಿಗೆ. ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧ ಎಂದು ಹೇಳಿದರು.
ದೇಶದ ಪ್ರತ್ಯೇಕತೆ ಬಗ್ಗೆ ಸಂಸದ ಡಿ.ಕೆ.ಸುರೇಶ್ ಹೇಳಿಕೆ ಸರಿಯಲ್ಲ. ಆ ರೀತಿ ಹೇಳಬಾರದು. ಇದನ್ನು ನಾನು, ಸಿಎಂ ಸೇರಿದಂತೆ ಎಲ್ಲರೂ ಹೇಳಿದ್ದೇವೆ. ಆದರೆ, ಡಿ.ಕೆ.ಸುರೇಶ್ ಅವರು ಹೇಳಿರುವ ಉದ್ದೇಶ ಬೇರೆ ರೀತಿಯಲ್ಲಿ ಇದೆ ಎಂದರು.
ಲೋಕಸಭಾ ಚುನಾವಣೆ ನಂತರ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ಸ್ಥಗಿತವಾಗಲ್ಲ. ಶಾಸಕ ಬಾಲಕೃಷ್ಣ ಹೇಳಿದರೂ, ರಾಜಣ್ಣ ಹೇಳಿದರೂ, ಯಾರು ಏನೇ ಹೇಳಿದರೂ ಗ್ಯಾರಂಟಿ ಯೋಜನೆ ನಿಲ್ಲಲ್ಲ. ಸಿದ್ದರಾಮಯ್ಯ ಅವರು ಹೇಳಿದ ಎಲ್ಲ ಕೆಲಸಗಳನ್ನು ಮಾಡಿದ್ದಾರೆ ಎಂದರು.