ಮಂಗಳೂರು: ಕೇಂದ್ರ ಸರ್ಕಾರ ಸಮರ್ಥ ಆರ್ಥಿಕ ನೀತಿ ಹೊಂದುವ ಮೂಲಕ ಸಂಪನ್ಮೂಲಕ ಕ್ರೋಢೀಕರಣಕ್ಕೆ ಒತ್ತು ನೀಡುವ ಬದಲು, ಜನಸಾಮಾನ್ಯರ ಅಗತ್ಯ ವಸ್ತುಗಳಿಗೆ ಜಿಎಸ್‌ಟಿ ಹಾಕಿ, ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುತ್ತಿದೆ. ಈ ಹಿಂದೆ ಕಾಂಗ್ರೆಸ್ ಮಾನವೀಯತೆ ಮತ್ತು ಅನುಕಂಪದ ಆಧಾರದಲ್ಲಿ ಆಡಳಿತ ನಡೆಸುತ್ತಿತ್ತು. ಆದರೆ ಈಗಿನ ಸರ್ಕಾರಕ್ಕೆ ಅದ್ಯಾವುದೂ ಇಲ್ಲ, ಅಮೆರಿಕಾ ಮಾದರಿಯಲ್ಲಿ ಟ್ಯಾಕ್ಸ್ ಸಂಗ್ರಹಿಸುವುದು ಮಾತ್ರ ಗೊತ್ತು ಎಂದು ಶಾಸಕ, ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಯು.ಟಿ.ಖಾದರ್ ಆರೋಪಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಸಾಮಾನ್ಯರ ವೇತನ, ಆರ್ಥಿಕ ಪರಿಸ್ಥಿತಿ ಏರಿಸುವ ಯಾವುದೇ ಒಂದು ಯೋಜನೆ ಈ ಸರ್ಕಾರ ತಂದಿಲ್ಲ. ಬದಲಾಗಿ ಜನರಿಗೆ ಮೋಸ ಮಾಡಿ, ಅವರಿಂದ ಲೂಟಿ ಮಾಡಿ ತಮ್ಮ ಖಜಾನೆಯನ್ನು ತುಂಬಿಸಿಕೊಳ್ಳುತ್ತಿದೆ. ಜಿಎಸ್‌ಟಿಯಂತಹ ಉತ್ತಮ ನೀತಿಯೊಂದು ಬಿಜೆಪಿ ಆಡಳಿತದಲ್ಲಿ ಕೆಟ್ಟ ನೀತಿಯಾಗಿ ಬದಲಾಗಿದೆ. ಶ್ರೀಮಂತ ಕಾರ್ಪೋರೇಟ್ ಸಂಸ್ಥೆಗಳಿಗೆ ತೆರಿಗೆ ಇಳಿಸಿ, ಜನ ಸಾಮಾನ್ಯರಿಗೆ ಜಿಎಸ್‌ಟಿ ಹೊರೆ ಹಾಕಿರುವುದು ಯಾಕೆ ಎಂದು ಪ್ರಶ್ನಿಸಿದ ಅವರು, ಜಿಎಸ್‌ಟಿ ಎಂದರೆ ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ರಾಹುಲ್ ಗಾಂಧಿ ಕರೆದಿರುವುದು ಸರಿಯಾಗಿಯೇ ಇದೆ ಎಂದರು.
ಒಂದು ಕಡೆಯಲ್ಲಿ ಜನ ಸಾಮಾನ್ಯರು ಮೌನವಾಗಿರುವುದೂ ಈ ಎಲ್ಲ ಬೆಳವಣಿಗೆಗೆ ಕಾರಣ. ಇದರಿಂದ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಚಿಂತಾಜನಕ ಪರಿಸ್ಥಿತಿಗೆ ತಲುಪುವ ಸಾಧ್ಯತೆಯಿದೆ. ಆದ್ದರಿಂದ ಕಾಂಗ್ರೆಸ್ ಈ ವಿಚಾರದಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ಸಂಘಟಿಸುವ ಮೂಲಕ, ಈ ವಿಚಾರಗಳನ್ನು ಜನರ ಬಳಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಲಿದೆ ಎಂದರು.
ಮಾಜಿ ಸಚಿವ ಅಭಯಚಂದ್ರ ಜೈನ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮುಖಂಡರಾದ ಮಿಥುನ್ ರೈ, ಐವನ್ ಡಿಸೋಜ ಮೊದಲಾದವರಿದ್ದರು.