ಜಿಲ್ಲೆ

ಹಾಸ್ಟೆಲ್ ಸ್ವಚ್ಛತೆಗೆ ವಿದ್ಯಾರ್ಥಿಗಳ ಬಳಕೆ

ವಿವೇಕಾನಂದ ದಾಸನಕೊಪ್ಪ

ಹಾನಗಲ್ಲ: ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಲೋಕಾಯುಕ್ತ ಅಧಿಕಾರಿಗಳು ಅಹವಾಲು ಸ್ವೀಕಾರ ಮತ್ತು ಜನಸಂಪರ್ಕ ಸಭೆಯಲ್ಲಿ ಕಂದಾಯ, ಸರ್ವೆ, ಕೆರೆಗಳ ಒತ್ತುವರಿ, ರಸ್ತೆ ಸಮಸ್ಯೆ, ವಿದ್ಯಾರ್ಥಿ ನಿಲಯಗಳ ಅವ್ಯವಸ್ಥೆ, ಟೋಲ್ ಸ್ಥಾಪನೆಗೆ ವಿರೋಧ ಸೇರಿದಂತೆ ಹಲವು ಕುಂದುಕೊರತೆಗಳ ಕುರಿತು ಸಾರ್ವಜನಿಕರಿಂದ ದೂರು ಸಲ್ಲಿಕೆಯಾದವು.

ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳ ನಿರ್ವಹಣೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ನಿಲಯಗಳ ಸ್ವಚ್ಛತೆಗೆ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವ ಬಗ್ಗೆ ಪ್ರಶ್ನಿಸಿದರೆ, ಶ್ರಮದಾನ ಎಂಬ ಸಬೂಬು ಹೇಳುತ್ತಾರೆ. ಅಲ್ಲದೆ, ಶಾಸಕರ ಹೆಸರನ್ನು ಅಧಿಕಾರಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅಣ್ಣಪ್ಪ ಚಾಕಾಪೂರ ಅವರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಸಲ್ಲಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ವಾಣಿಜ್ಯ ಮಳಿಗೆಗಳ ಹರಾಜು ಅವಧಿ ಪೂರ್ಣಗೊಂಡು ಹತ್ತು ವರ್ಷಗಳೇ ಕಳೆದಿವೆ. ಈಗಿರುವ ಬಾಡಿಗೆದಾರರು ಮತ್ತೊಬ್ಬರಿಗೆ ಹೆಚ್ಚಿನ ದರಕ್ಕೆ ಮಳಿಗೆ ಮರು ಬಾಡಿಗೆ ನೀಡಿದ್ದಾರೆ. ಹೊಸದಾಗಿ ಮಳಿಗೆಗಳ ಹರಾಜು ನಡೆಯಬೇಕು ಎಂದು ಕನ್ನಡಪರ ಸಂಘಟನೆಯ ಹನುಮಂತಪ್ಪ ಕೋಣನಕೊಪ್ಪ ದೂರು ಸಲ್ಲಿಸಿದರು.

ಪಟ್ಟಣದ ಹೊರಭಾಗದ ಕರಗುದರಿ ಕ್ರಾಸ್​ನಲ್ಲಿ ಸ್ಥಾಪಿಸಿರುವ ಟೋಲ್​ಗೇಟ್ ಅವೈಜ್ಞಾನಿಕವಾಗಿದೆ. ಇದರಿಂದ ಜನಸಾಮಾನ್ಯರು ಅನಗತ್ಯವಾಗಿ ರಸ್ತೆ ಸಂಚಾರಕ್ಕೆ ಕರ ನೀಡುವಂತಾಗಿದೆ. ಕೂಡಲೇ ಟೋಲ್​ಗೇಟ್ ರದ್ದುಗೊಳಿಸಬೇಕು ಎಂದು ರಾಮನಗೌಡ ಪಾಟೀಲ ದೂರು ನೀಡಿದರು.

ವಿವಿಧ ಇಲಾಖೆಗಳ ಲೋಪದೋಷಗಳ ಕುರಿತು ಸಾರ್ವಜನಿಕರು ದೂರು ಸಲ್ಲಿಸಿದರು. ಸಭೆಯಲ್ಲಿ 16 ಅರ್ಜಿ ಸ್ವೀಕೃತಗೊಂಡವು. ಲೋಕಾಯುಕ್ತ ಡಿಎಸ್​ಪಿ ಮಧುಸೂದನ, ಇನ್ಸ್​ಪೆಕ್ಟರ್ ದಾದಾವಲಿ, ಮಂಜುನಾಥ ಪಂಡಿತ, ಬಸವರಾಜ ಹಳವಣ್ಣನವರ, ತಹಸೀಲ್ದಾರ್ ರೇಣುಕಾ ಎಸ್., ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.