Oplus_16908288 
ಜಿಲ್ಲೆ

ಸ್ವಚ್ಛತೆಗಾಗಿ ಸಾಮಾಜಿಕ ಜಾಲತಾಣ ಬಳಕೆ

ಕಿರಣ್ ಗೌಡ.ಜಿ

ವಿರಾಜಪೇಟೆ: ಕೊಡಗನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಕೂರ್ಗ್ ಹೋಟೆಲ್, ರೆಸಾರ್ಟ್ ಅಸೋಸಿಯೇಷನ್ ಮುಂದಾಳತ್ವದಲ್ಲಿ ಇತ್ತೀಚೆಗೆ ಬೃಹತ್ ಸ್ವಚ್ಛತಾ ಅಭಿಯಾನ ಯಶಸ್ವಿಯಾಗಿ ನಡೆಸಲಾಗಿದೆ. ಇದಾದ ನಂತರ ಸಾರ್ವಜನಿಕರು, ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಂಡಿದೆ.

ಸುಂದರ ವಿರಾಜಪೇಟೆ-ಸ್ವಚ್ಛ ಪಟ್ಟಣ ಎಂಬ ಧ್ಯೇಯದೊಂದಿಗೆ ಕಂಡಕಂಡಲ್ಲಿ ಕಸ ಎಸೆಯುವವರ ವಿರುದ್ಧ ಕ್ರಮಕ್ಕೆ ಪುರಸಭೆ ಮುಂದಾಗಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಕ್ಲೀನ್ ವಿರಾಜಪೇಟೆ ಎಂಬ ಖಾತೆ ತೆರೆಯಲಾಗಿದೆ. ಈ ಅಧಿಕೃತ ಖಾತೆಯನ್ನು ಶಾಸಕ ಎ ಎಸ್.ಪೊನ್ನಣ್ಣ ಶನಿವಾರ ಲೋಕಾರ್ಪಣೆ ಮಾಡಿದರು.

ಬಳಿಕ ಮಾತನಾಡಿದ ಶಾಸಕರು, ಯಾರಾದರೂ ಕಸ ಎಸೆಯುವುದು ಕಂಡುಬಂದಲ್ಲಿ ಸಾರ್ವಜನಿಕರು ಈ ಖಾತೆಗೆ ಟ್ಯಾಗ್ ಮಾಡಬಹುದಾಗಿದ್ದು, ಆ ಪೋಸ್ಟ್ ಅನ್ನು ಅನುಸರಿಸಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸ್ವಚ್ಛತೆ ಕಾಪಾಡುವಲ್ಲಿ ಪುರಸಭೆಯೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಸದಸ್ಯರಾದ ಮತೀನ್ ಎಸ್.ಎಚ್, ರಾಜೇಶ್ ಪದ್ಮನಾಭ, ಮೊಹಮ್ಮದ್ ರಾಫಿ, ಪುರಸಭೆ ಮುಖ್ಯಾಧಿಕಾರಿ ನಾಚಪ್ಪ, ಪರಿಸರ ಇಂಜಿನಿಯರ್ ರೀತು ಸಿಂಗ್, ಕೋಮಲಾ ಮತ್ತು ಪಕ್ಷದ ಕಾರ್ಯಕರ್ತರು, ಮುಖಂಡರು ಉಪಸ್ಥಿತರಿದ್ದರು