ಶಿವಮೊಗ್ಗ: ಸ್ವತಂತ್ರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರು ಚುನಾವಣೆ ಪ್ರಚಾರ ವೇಳೆ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವನ್ನು ಬಳಸದಂತೆ ತಡೆಯಾಜ್ಞೆ ನೀಡುವ ಕುರಿತು ನ್ಯಾಯಾಲಯವು ಮೇ 26ಕ್ಕೆ ವಿಚಾರಣೆ ಮುಂದೂಡಿದೆ. ಮೇ 7ಕ್ಕೆ ಮತದಾನ ಮುಕ್ತಾಯ ಆಗುವುದರಿಂದ ಕೆ.ಎಸ್.ಈಶ್ವರಪ್ಪ ಅವರಿಗೆ ಮೋದಿ ಭಾವಚಿತ್ರ ಬಳಸಲು ಅವಕಾಶ ಸಿಕ್ಕಂತಾಗಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರರಾಗಿ ಸ್ಪರ್ಧೆ ಮಾಡಿರುವ ಈಶ್ವರಪ್ಪ ಅವರನ್ನು ಬಿಜೆಪಿ ಈಗಾಗಲೇ ಉಚ್ಛಾಟಿಸಿದೆ. ಆದರೂ ಮೋದಿ ಚಿತ್ರವನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯದ ಮೊರೆ ಹೋಗಿತ್ತು. ಇದೀಗ ಮೇ 26ಕ್ಕೆ ವಿಚಾರಣೆ ನಿಗಧಿಯಾಗಿರುವ ಕಾರಣ ಈಶ್ವರಪ್ಪ ಅವರು ನಿರಾಳರಾಗಿದ್ದಾರೆ.
ಈ ಕುರಿತು ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿರುವ ಈಶ್ವರಪ್ಪ, ವಿಶ್ವ ನಾಯಕ ನರೇಂದ್ರ ಮೋದಿ ನನ್ನ ಜತೆ ಉಳಿದಿದ್ದಾರೆ. ಮೋದಿ ಫೋಟೊ ಬಳಕೆ ವಿರುದ್ಧ ಬಿಜೆಪಿ ಜಿಲ್ಲಾ ಘಟಕವು ನ್ಯಾಯಾಲಯ ಹಾಗೂ ಚುನಾವಣೆ ಆಯೋಗದ ಮೋರೆ ಹೋಗಿತ್ತು. ಮೋದಿ ಫೋಟೊದಲ್ಲಿ ಮಾತ್ರ ಇಲ್ಲ, ನನ್ನ ಹೃದಯದಲ್ಲಿದ್ದಾರೆ. ಬಿಜೆಪಿಯು ಮೋದಿ ಫೋಟೊ ನನ್ನದು ಎಂದು ಹೇಳಿ ನ್ಯಾಯಾಲಯಕ್ಕೆ ಹೋಗಿ ಅಪಮಾನ ಮಾಡಬಾರದಿತ್ತು ಎಂದರು.
140 ಕೋಟಿ ಜನರು ಮೋದಿ ಫೋಟೊ ಬಳಕೆ ಮಾಡಬಹುದು. ನನ್ನಿಂದ ಮೋದಿಯನ್ನ್ನು ಅಗಲಿಸಲು ಯಾರಿಗೂ ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಕೇವಲ ಫೊಟೋ ಬಳಕೆ ಮಾತ್ರವಲ್ಲ, ಅವರ ಆದರ್ಶವನ್ನು ಜನರಿಗೆ ತಿಳಿಸುವುದಾಗಿ ಭರವಸೆ ನೀಡಿದರು.